ADVERTISEMENT

ಮತ್ತೆ ಸಿನಿಮಾ ನಿರ್ದೇಶನಕ್ಕಿಳಿದ ನಟ ಸುದೀಪ್?

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2019, 7:17 IST
Last Updated 14 ನವೆಂಬರ್ 2019, 7:17 IST
ನಟ, ನಿರ್ದೇಶಕ ಸುದೀಪ್
ನಟ, ನಿರ್ದೇಶಕ ಸುದೀಪ್   

‘ಪೈಲ್ವಾನ್‌’ ಚಿತ್ರದ ಬಿಡುಗಡೆಗೆ ಕೆಲವು ವಾರಗಳಷ್ಟೇ ಬಾಕಿ ಇತ್ತು. ಆಯ್ದ ಪತ್ರಕರ್ತರ ಮುಂದೆ ತಮ್ಮ ಮನೆಯ ಅಡುಗೆ ಕೋಣೆಯ ಅಂಗಳದಲ್ಲಿ ಕಿಚ್ಚ ಸುದೀಪ್‌ ಲೋಕಾಭಿರಾಮವಾಗಿ ಮಾತಿಗೆ ಕುಳಿತಿದ್ದರು. ಅವರ ಎರಡೂವರೆ ದಶಕದ ಸಿನಿಯಾನ ಕುರಿತು ಮಾತುಕತೆ ಆರಂಭಗೊಂಡಿತ್ತು. ಅವರು ಉತ್ಸಾಹದಿಂದಲೇ ಮಾತಿಗಿಳಿದಿದ್ದರು.

‘ಮತ್ತೆ ನೀವು ಸಿನಿಮಾ ನಿರ್ದೇಶನ ಮಾಡುವುದು ಯಾವಾಗ’ ಎಂದು ಪ್ರಶ್ನೆ ಕಿಚ್ಚನಿಗೆ ಎದುರಾಯಿತು. ಎದುರಿಗೆ ಕುಳಿತಿದ್ದವರ ಮೇಲೆ ತೀಕ್ಷ್ಣ ನೋಟ ಬೀರಿ ಅವರು, ‘ನನಗಾಗಿಯೇ ಕನ್ನಡ, ಹಿಂದಿ, ತೆಲುಗು, ತಮಿಳಿನಲ್ಲಿ ಕಥೆ ಬರೆದು ಕುಳಿತುಕೊಂಡಿರುವವರ ಸಂಖ್ಯೆ ದೊಡ್ಡದಿದೆ. ನಾನು ಅವರಿಗಾಗಿ ಕೆಲಸ ಮಾಡಿದರೆ ಸಾಕು. ನಾನೇಕೆ ನಿರ್ದೇಶನಕ್ಕೆ ಇಳಿಯಲಿ’ ಎಂದು ಮರು ಪ್ರಶ್ನಿಸಿದ್ದರು.

ಪ್ರಸ್ತುತ ಅವರು ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ನಟನೆಯ ‘ದಬಾಂಗ್‌ 3’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಡಿಸೆಂಬರ್‌ 20ರಂದು ಈ ಸಿನಿಮಾ ತೆರೆ ಕಾಣಲಿದೆ. ‘ಕೋಟಿಗೊಬ್ಬ 3’, ‘ಬಿಲ್ಲಾ ರಂಗ ಭಾಷ’, ‘ಫ್ಯಾಂಟಮ್’ ಚಿತ್ರದಲ್ಲೂ ನಟಿಸಲು ಒ‍ಪ್ಪಿಕೊಂಡಿದ್ದಾರೆ. ಈ ನಡುವೆಯೇ ಅವರು ಮತ್ತೆ ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಇದು ಅವರ ಅಭಿಮಾನಿಗಳಲ್ಲಿ ಖುಷಿಗೆ ಕಾರಣವಾಗಿದೆ.

ADVERTISEMENT

ಸುದೀಪ್‌ ನಿರ್ದೇಶಿಸಿದ ಮೊದಲ ಚಿತ್ರ ‘ಮೈ ಆಟೋಗ್ರಾಫ್’. ಈ ಚಿತ್ರ ಅವರೊಳಗಿನ ನಿರ್ದೇಶಕನ ಪ್ರತಿಭೆಗೆ ಕನ್ನಡಿ ಹಿಡಿಯಿತು. ಸೂಪರ್‌ ಹಿಟ್‌ ಕೂಡ ಆಯಿತು. ನಂತರ ಅವರು ‘ಶಾಂತಿ ನಿವಾಸ’, ‘ಜಸ್ಟ್ ಮಾತ್ ಮಾತಲ್ಲಿ’, ‘ವೀರ ಮದಕರಿ’, ‘ಕೆಂಪೇಗೌಡ’ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದರು. ಅವರು ಕೊನೆಯಾಗಿ ನಿರ್ದೇಶಿಸಿದ ಚಿತ್ರ ‘ಮಾಣಿಕ್ಯ’. ಇದರಲ್ಲಿ ಸುದೀಪ್‌ ಮತ್ತು ರವಿಚಂದ್ರನ್‌ ಅವರ ಅಪ್ಪ–ಮಗನ ಸೂತ್ರ ಭರ್ಜರಿ ಯಶಸ್ಸು ಕಂಡಿತ್ತು. ಈ ಸಿನಿಮಾ ತೆರೆಕಂಡು ಈಗಾಗಲೇ ಐದು ವರ್ಷ ಸಂದಿವೆ.

ಮತ್ತೆ ಸುದೀಪ್ ನಿರ್ದೇಶನಕ್ಕೆ ಮರಳುವ ಯೋಚನೆ ಮಾಡಿದ್ದಾರಂತೆ. ಜೊತೆಗೆ, ಕಥೆಯ ಎಳೆ ಅಂತಿಮಗೊಂಡಿದೆಯಂತೆ. ಮುಂದಿನ ವರ್ಷದ ಈ ಹೊಸ ಸಿನಿಮಾ ಸೆಟ್ಟೇರಿಸುವ ನಿರೀಕ್ಷೆಯಿದೆ. ಸುದೀಪ್‌ ನಿರ್ದೇಶನದ ಬಹುತೇಕ ಸಿನಿಮಾಗಳು ಅವರ ಬ್ಯಾನರ್‌ನಡಿಯೇ ನಿರ್ಮಾಣಗೊಂಡಿವೆ. ಇದಕ್ಕೂ ಅವರೇ ಬಂಡವಾಳ ಹೂಡುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.