ADVERTISEMENT

ನಿಜವಾಗಿಯೂ ಡ್ರಗ್ಸ್ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ: ನಟ ಸುದೀಪ್

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2020, 10:43 IST
Last Updated 1 ಸೆಪ್ಟೆಂಬರ್ 2020, 10:43 IST
ನಟ ಕಿಚ್ಚ ಸುದೀಪ್ ಅವರು ಮಂಗಳವಾರ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಸಿದ್ಧಲಿಂಗ ಸ್ವಾಮೀಜಿ ಅವರ ಆರ್ಶೀವಾದ ಪಡೆದರು.
ನಟ ಕಿಚ್ಚ ಸುದೀಪ್ ಅವರು ಮಂಗಳವಾರ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಸಿದ್ಧಲಿಂಗ ಸ್ವಾಮೀಜಿ ಅವರ ಆರ್ಶೀವಾದ ಪಡೆದರು.   
""

ತುಮಕೂರು: ‘ಶ್ರೇಷ್ಠವಾದ ಜಾಗದಲ್ಲಿ ಕುಳಿತು ಹೇಳುತ್ತಿದ್ದೇನೆ. ನಿಜವಾಗಿಯೂ ಕನ್ನಡ ಚಿತ್ರರಂಗದ ಡ್ರಗ್ಸ್ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ’ ಎಂದು ನಟ ಸುದೀಪ್ ಹೇಳಿದರು.

ಮಂಗಳವಾರ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ನಾನು ಚಿತ್ರರಂಗದವನಾದರೂ ನನಗೆ ಈ ಬಗ್ಗೆ ಗೊತ್ತಿಲ್ಲ. ಕೇವಲ ಅಂತೆ ಕಂತೆಗಳ ಆಧಾರದ ಮೇಲೆ ಪ್ರಸ್ತುತ ವಿದ್ಯಾಮಾನಗಳ ಬಗ್ಗೆ ಮಾತನಾಡುವುದು ತಪ್ಪಾಗುತ್ತದೆ. ಇದರ ಬಗ್ಗೆ ಗೊತ್ತಿದ್ದವರೂ ಮಾತನಾಡುತ್ತಾರೆ’ ಎಂದರು.

ADVERTISEMENT

ಕೆಲವೊಂದು ಪ್ರಶ್ನೆಗಳನ್ನು ನಾನು ನನ್ನ ಹೆಂಡತಿಗೆ ಕೇಳಲ್ಲ. ಇನ್ನೂ ಬೇರೆಯವರಿಗೆ ನಾನು ಏಕೆ ಕೇಳಲಿ. ನನಗೆ ಪರಿಚಯ ಇದ್ದಾರೆ ಎನ್ನುವ ಕಾರಣಕ್ಕಾಗಿ ಅವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಲು ಹೋಗುವುದಿಲ್ಲ. ಅವರ ವೈಯಕ್ತಿಕ ಜೀವನವನ್ನು ತಿಳಿದುಕೊಂಡು ನಾನೇನು ಮಾಡಬೇಕು. ಕಣ್ಣಿಗೆ ಕಾಣುವ ಶತ್ರಗಳೊಟ್ಟಿಗೆ ನಾವು ಫೈಟ್ ಮಾಡಬಹುದು. ಆದರೆ, ಕಣ್ಣಿಗೆ ಕಾಣದ ಶತೃಗಳೊಟ್ಟಿಗೆ ಹೇಗೆ ಫೈಟ್ ಮಾಡಲು ಹೇಗೆ ಸಾಧ್ಯ ಎಂದು ಹೇಳಿದರು.

ಈ ಹಿಂದೆಯೂಕನ್ನಡ ಚಿತ್ರರಂಗ ತೆರಿಗೆ, ಡಬ್ಬಿಂಗ್ ಹೀಗೆ ನಾನಾ ವಿಚಾರಗಳಿಗಾಗಿ ರಸ್ತೆಗೆ ಬಂದಿತ್ತು. ಇದೀಗ ಕೆಟ್ಟ ಕಾರಣಕ್ಕಾಗಿ ಮತ್ತೊಮ್ಮೆ ರಸ್ತೆ ಬಂದಿದೆ. ಆದರೆ, ಕೆಲವರ ಕಾರಣಕ್ಕಾಗಿ ಇಡಿ ಚಿತ್ರರಂಗವನ್ನೇ ಕಳಂಕ ಸ್ಥಾನದಲ್ಲಿ ನಿಲ್ಲಿಸುವುದು ಬೇಸರದ ಸಂಗತಿ ಎಂದರು.

ಕನ್ನಡ ಚಿತ್ರರಂಗ ಬಹಳ ದೊಡ್ಡದು. ಇದೊಂದು ಸುದೀರ್ಘವಾದ ಪ್ರಪಂಚಕ. ಇಲ್ಲಿ ಸಾಕಷ್ಟು ನೋವು, ನಲಿವು, ಅನೇಕ ಹಿರಿಯರ ಶ್ರಮವಿದೆ. ನನಗಂತೂ ಕನ್ನಡ ಚಿತ್ರರಂಗ ಸ್ವೀಟಾಗಿದೆ. ಜನರು ಸ್ವೀಟಾಗಿದೆ. ಆ ಗೌರವವನ್ನು ನಾನು ಉಳಿಸಿಕೊಂಡು ಬಂದಿದ್ದೇನೆ. ಮುಂದೆಯೂ ಉಳಿಸಿಕೊಳ್ಳುತ್ತೇನೆ ಎಂದರು.

ಇಲ್ಲದವರ ಬಗ್ಗೆ ಮಾತನಾಡುವುದು ಸರಿಯಲ್ಲ
ಇನ್ನೂ ಚಿರು ಸಾವಿನ ಬಗ್ಗೆ ಪ್ರತಿಕ್ರಿಯಿಸಿ, ‘ಚಿರು(ಚಿರಂಜೀವಿ ಸರ್ಜಾ) ನನಗೆ ಬೇಕಾದಂತಹ ಹುಡುಗ. ನನ್ನ ಬಳಿ ತಮ್ಮನಂತೆ ಇದ್ದ, ನಾನು ಅವನನ್ನು ತಮ್ಮನಂತೆ ನೋಡಿಕೊಳ್ಳುತ್ತಿದ್ದೆ. ಆದರೆ, ಅವನು ಇಲ್ಲದ ವೇಳೆ ಮಾತನಾಡುವುದು ಬೇಡ. ಅವರಿಗೂ ಸುಂದರವಾದ ತಮ್ಮ, ಹೆಂಡತಿ ಇದ್ದಾರೆ. ಅವರಿನ್ನೂ ಚೇತರಿಸಿಕೊಳ್ಳಬೇಕು. ರೆಸ್ಟ್ ಇನ್ ಪೀಸ್ ಎನ್ನುವುದು ಕೇವಲ ತಮಾಷೆಯಾಗಬಾರದು’ ಎಂದರು.

ಚಿತ್ರರಂಗ ನಷ್ಟ ಅನುಭವಿಸಿರುವ ಬಗ್ಗೆ ಪ್ರತಿಕ್ರಿಯಿಸಿ, ‘ನಷ್ಟ ಅನುಭವಿಸಿರುವುದು ನಿಜ. ಆದರೆ, ಎಷ್ಟರ ಮಟ್ಟಿಗೆ ನಷ್ಟ ಉಂಟಾಗಿದೆ ಎಂಬ ಬಗ್ಗೆ ನನಗೆ ಅಂದಾಜು ಇಲ್ಲ. ಕೇವಲ ನಟ, ನಟಿಯರು, ನಿರ್ಮಾಪಕರು, ನಿರ್ದೇಶಕರು ಮಾತ್ರವಲ್ಲದೇ ದಿನಗೂಲಿ ಮಾಡುತ್ತಿದ್ದ ಎಷ್ಟೋ ಜನರು ಚಿತ್ರರಂಗವನ್ನು ನಂಬಿದ್ದರು. ಅವರೆಲ್ಲರಿಗೂ ನಷ್ಟ ಉಂಟಾಗಿದೆ. ಆದರೆ, ಅನೇಕ ನಟ, ನಟಿಯರು, ನಿರ್ಮಾಪಕರು, ನಿರ್ದೇಶಕರು ಅವರಿಗೆ ತಮ್ಮ ಕೈಯಲ್ಲಾದ ಸಹಾಯ ಮಾಡಿದ್ದಾರೆ ಎಂದರು.

ಸಿದ್ಧಗಂಗಾ ಮಠದಲ್ಲಿ ಹುಟ್ಟುಹಬ್ಬ: ನಾಳೆ(ಬುಧವಾರ) ನನ್ನ ಹುಟ್ಟುಹಬ್ಬವಿದ್ದು, ಸಿದ್ಧಗಂಗಾ ಮಠದಲ್ಲಿ ಆಚರಿಸಿಕೊಳ್ಳಬೇಕು ಎಂಬುದು ನನ್ನ ಬಹು ವರ್ಷಗಳ ಆಸೆಯಾಗಿತ್ತು. ನಾನು ಒಂದು ಹೆಜ್ಜೆ ಇಟ್ಟರೆ, ನನ್ನ ಸ್ನೇಹಿತರು, ಅಭಿಮಾನಿಗಳು 10 ಹೆಜ್ಜೆ ಮುಂದೆ ಇಡುತ್ತಾರೆ. ಹಾಗಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದು ಬಿಟ್ಟು ತುಂಬಾ ವರ್ಷಗಳು ಆಯಿತು. ಆದರೆ, ಇಲ್ಲಿ ನಡೆಯುವ ಹುಟ್ಟುಹಬ್ಬ ಆಚರಣೆಯಲ್ಲ, ಆಶೀರ್ವಾದವಷ್ಟೇ ಎಂದರು.


‘ಪುಣ್ಯ ಸ್ಥಳದಲ್ಲಿಡ್ರಗ್ಸ್‌ಬಗ್ಗೆ ಮಾತನಾಡುವುದಿಲ್ಲ’
ತುಮಕೂರು:
ನಾಳೆ ನನ್ನ ಆತ್ಮೀಯ ಸ್ನೇಹಿತ ಸುದೀಪ್ ಹುಟ್ಟುಹಬ್ಬವನ್ನು ಮಹಾನ್ ಚೇತನರ ಆಧ್ಯಾತ್ಮಿಕ ಕ್ಷೇತ್ರವಾದ ಸಿದ್ಧಗಂಗಾ ಮಠದಲ್ಲಿ ಆಚರಿಸಲು ಬಂದಿದ್ದೇವೆ. ಇದು ನನಗೆ ತುಂಬಾ ಸಂತೋಷ ತಂದಿದೆ. ಇಂಥ ಪವಿತ್ರ ಸ್ಥಳದಲ್ಲಿ ಬೇರೆ ವಿಚಾರಗಳ ಕುರಿತು ಮಾತನಾಡುವುದಿಲ್ಲ ಎಂದರು.

ನಿರಂತರವಾಗಿ ಅನ್ನ ದಾಸೋಹ, ಅಕ್ಷರ ದಾಸೋಹ ನಡೆಯುತ್ತಿರುವ ಈ ಪುಣ್ಯ ಕ್ಷೇತ್ರದಲ್ಲಿ ಸ್ನೇಹಿತ ಸುದೀಪ್ ಅವರೊಂದಿಗೆ ಕಳೆಯುತ್ತಿರುವುದು ಒಂದು ಅದ್ಭುತ ಗಳಿಗೆ ಎಂದರು.

ಕೋವಿಡ್ ಕೊರೊನಾ ಸಂದರ್ಭದಲ್ಲಿ ಸುದೀಪ್ ಹುಟ್ಟುಹಬ್ಬದ ಸಂದರ್ಭದಲ್ಲಿ ಶ್ರೀಗಳ ಆಶೀರ್ವಾದ ಪಡೆಯಲು ಬಂದಿದ್ದೇವೆ ಎಂದ ಅವರು, ಜಾತ್ಯಾತೀತವಾದ ಈ ಪುಣ್ಯ ಸ್ಥಳದಲ್ಲಿ ಸ್ಯಾಂಡಲ್‌ವುಡ್‌ನ ಡ್ರಗ್ ಮಾಫಿಯಾ ಬಗ್ಗೆ ಮಾತನಾಡಲು ಬಯಸುವುದಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.