ADVERTISEMENT

ಚಿನ್ನಾರಿ ಮುತ್ತನ ‘ಕಿಸ್ಮತ್’ ಪರೀಕ್ಷೆ

ಶಾಹಿನ್ ಎಸ್.ಮೊಕಾಶಿ
Published 21 ನವೆಂಬರ್ 2018, 19:30 IST
Last Updated 21 ನವೆಂಬರ್ 2018, 19:30 IST
ವಿಜಯ ರಾಘವೇಂದ್ರ
ವಿಜಯ ರಾಘವೇಂದ್ರ   

ನಮ್ಮ ಕನ್ನಡದ ಜನತೆಗೆ ವಿಜಯ ರಾಘವೇಂದ್ರ ಅಂದ್ರೆ ಅಷ್ಟು ನೆನಪಿಗೆ ಬರ್ತಾರೋ ಇಲ್ವೋ ಗೊತ್ತಿಲ್ಲ. ಆದ್ರೆ ‘ಚಿನ್ನಾರಿ ಮುತ್ತಾ’ ಅಂತ ಒಂದ್ಸಾರಿ ಹೇಳಿ ನೋಡಿ, ಗೊತ್ತಾಗತ್ತೆ ಇವರ ಗಮ್ಮತ್ತು. ಕನ್ನಡದ ಜನತೆಗೆ ‘ಚಿನ್ನಾರಿ ಮುತ್ತಾ’ ಎಂದೇ ಚಿರಪರಿಚಿತರಾದ ವಿಜಯ ರಾಘವೇಂದ್ರ ತುಂಬಾ ಸರಳ, ಸಜ್ಜನಿಕೆಯ, ಆತ್ಮೀಯ ನಟರಲ್ಲಿ ಒಬ್ಬರು.

ತಮ್ಮದೇ ನಿರ್ದೇಶನ, ನಿರ್ಮಾಣ ಮತ್ತೆ ತಾವೇ ಮುಖ್ಯಭೂಮಿಕೆಯಲ್ಲಿ ನಟಿಸಿರುವ ತಮ್ಮ ಮುಂದಿನ ಚಿತ್ರ ‘ಕಿಸ್ಮತ್’ ಪ್ರಮೋಷನ್‌ಗೆ ಶನಿವಾರ ಹುಬ್ಬಳ್ಳಿಗೆ ಬಂದಾಗ ‘ಮೆಟ್ರೊ’ ಜೊತೆ ಮಾತನಾಡಿದರು.

* ‘ಕಿಸ್ಮತ್’ ನಿಮ್ಮ ನಿದೇರ್ಶನದಲ್ಲಿ ಮೂಡಿ ಬರುತ್ತಿರುವ ಮೊದಲ ಸಿನಿಮಾ. ಹೇಗನ್ನಿಸುತ್ತಿದೆ ನಿದೇರ್ಶನದ ಬಗ್ಗೆ...
ಅಬ್ಬಾ! ಸಿನಿಮಾ ಮಾಡುವಾಗ ಪರದೆಯ ಮೇಲೆ ನಿರ್ದೇಶಕ ಹೇಳಿದಂತೆ ನಟಿಸುವುದು ಒಂದೆಡೆಯಾದರೆ, ನೀವೇ ಮುಂದೆ ನಿಂತು ನಿಮ್ಮ ಮುಂದಿರುವ ಎಲ್ಲ ನಟ, ನಟಿಯರನ್ನು ನಿಮಗೆ ತಕ್ಕಂತೆ, ನಿಮ್ಮ ಸಿನಿಮಾ ಕಥೆಗೆ ತಕ್ಕಂತೆ ನಟಿಸುವ ಹಾಗೆ ಮಾಡುವುದಿದೆಯಲ್ಲ ಅದು ಅಂದುಕೊಂಡಷ್ಟು ಸುಲಭದ ವಿಷಯ ಅಲ್ಲರೀ. ಇಷ್ಟು ದಿನ ಬರೀ ನಟನಾಗಿದ್ದೆ. ಆದರೆ ನಿರ್ದೇಶನ ಮಾಡಲು ಪ್ರಾರಂಭಿಸಿದ ನಂತರ ಒಂದು ಚಿತ್ರದ ಮೇಕಿಂಗ್‌ನಲ್ಲಿ ಯಾವ ರೀತಿಯಾಗಿ ನಾವು ಸಿದ್ಧತೆ ಮಾಡಿಕೊಳ್ಳಬೇಕು, ಹಂತ ಹಂತವಾಗಿ ಅವುಗಳನ್ನು ಜಾರಿಗೊಳಿಸುವ ಬಗೆ ಮತ್ತು ಎಲ್ಲ ಕೆಲಸಗಳನ್ನು ಪರಿಪೂರ್ಣವಾಗಿ ಮಾಡುವುದರಲ್ಲಿ ತುಂಬ ನಿಪುಣತೆ, ತಾಳ್ಮೆ ಹೊಂದಿರಬೇಕು ಎನ್ನುವುದು ಗೊತ್ತಾಗಿದೆ.

ADVERTISEMENT

* ಕಿಸ್ಮತ್ ಚಿತ್ರದ ಬಗ್ಗೆ ಒಂದಿಷ್ಟು ಹೇಳಿ...
‘ಕಿಸ್ಮತ್’ ಹೆಸರೇ ಹೇಳುವಂತೆ ಇದೊಂದು ಹಣೆಬರಹದ ಆಟ. ಆ‍್ಯಕ್ಷನ್ ಮತ್ತು ಲವ್ ಓರಿಯೆಂಟೆಡ್ ಸಿನಿಮಾ. ಪ್ರತಿಯೊಬ್ಬರ ಜೀವನ
ದಲ್ಲಿ ಕಿಸ್ಮತ್ ಯಾವ ರೀತಿಯಾಗಿ ಆಟ ಆಡುತ್ತೇ ಅನ್ನೋದನ್ನು ತುಂಬ ಸೂಕ್ಷ್ಮವಾಗಿ ತಿಳಿಸುವಂತಹ ಸಿನಿಮಾ ಇದು. ಇದೇ ನವೆಂಬರ್ 23ಕ್ಕೆ ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ. ನಟ ಪುನೀತ್ ರಾಜಕುಮಾರ ‘ಚುರುಮುರಿ’ ಅಂತ ಒಂದು ಹಾಡು ಹಾಡಿದ್ದಾರೆ. ರವಿಶಂಕರ್, ಸುಂದರರಾಜ್ ಮುಂತಾದವರು ತಾರಾಗಣದಲ್ಲಿ ಇದ್ದಾರೆ. ಕಿಸ್ಮತ್ ಸ್ಪಂದನಸೃಷ್ಟಿ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದೆ. ನಮ್ಮ ಕಿಸ್ಮತ್ ಚೆನ್ನಾಗಿದ್ರೆ ಜನರಿಗೆ ಸಿನಿಮಾ ತುಂಬಾ ಇಷ್ಟ ಆಗತ್ತೆ. ಅದಕ್ಕೆ ನೋಡೋಣ ಕಿಸ್ಮತ್ ಏನೇನು ಆಟ ಆಡುತ್ತೇ ಅಂತ.

*ನಟನೆಯ ಜೊತೆ ನಿರ್ದೇಶನ ಮಾಡುವ ಬಯಕೆ ನಿಮ್ಮಲ್ಲಿ ಹುಟ್ಟಿದ್ದು ಯಾಕೆ?
ನಾನು ‘ಬಿಗ್‌ಬಾಸ್’ ಮೊದಲ ಆಡಿಷನ್ ವಿನ್ನರ್ ಆದ ಮೇಲೆ ಒಂದು ವಿಭಿನ್ನ ಪಾತ್ರದಲ್ಲಿ ನಟಿಸಬೇಕು ಅನ್ನೋ ಆಸೆಯಿತ್ತು. ಕಾಯ್ದು ನೋಡಿದ ಮೇಲೂ ನನಗೊಪ್ಪುವಂತಹ ಪಾತ್ರ ಆಗಲಿ, ಅವಕಾಶ ಆಗಲಿ ಸಿಗಲಿಲ್ಲ. ಅನಿವಾರ್ಯವೋ ಅಥವಾ ಕಾಕತಾಳಿಯವೋ ನಾವೇ ನಮ್ಮ ಸ್ವಂತ ಬ್ಯಾನರ್ ಅಡಿಯಲ್ಲಿ ಒಂದು ಸಿನಿಮಾ ಮಾಡಬೇಕು ಅನ್ನೋ ಬಯಕೆ ಹುಟ್ಟಿತು. ಅದಕ್ಕೆ ’ಕಿಸ್ಮತ್’ ಅನ್ನೋ ಮೂವೀ ಮಾಡಬೇಕು ಅಂತ ನಿರ್ಧಾರವಾಯ್ತು. ಹೀಗಾಗಿ ಇಂದು ನಟನ ಜೊತೆ ನಿರ್ದೇಶಕನಾಗಿ ಕನ್ನಡದ ಜನತೆಯ ಮುಂದೆ ನಿಂತಿದ್ದೇನೆ.

* ಉತ್ತರ ಕರ್ನಾಟಕ ಮತ್ತು ಹುಬ್ಬಳ್ಳಿ ಅಂದರೆ ನಿಮಗೆ ನೆನಪಾಗೋದು ಏನು?
ಉತ್ತರ ಕರ್ನಾಟಕ ಅಂದ್ರೆ ನೆನಪಿಗೆ ಬರೋದು ಇಲ್ಲಿಯ ಜನ. ಅವರು ತೋರಿಸೋ ಪ್ರೀತಿ ಸಾಮಾನ್ಯವಾಗಿ ಬೇರೆ ಎಲ್ಲೂ ನೋಡಲೂ ಸಿಗಲ್ಲ. ಅವರ ಪ್ರೀತಿನ ಗಳಿಸಿ, ಕಾಯ್ದುಕೊಳ್ಳುವುದರಲ್ಲಿ ತುಂಬಾ ಹೃದಯವಂತಿಕೆ ಬೇಕು. ಹಾಗೇ ಹುಬ್ಬಳ್ಳಿ ಅಂದರೆ ಮೊದಲು ನೆನಪಾಗೋದು ಸವದತ್ತಿ. ನಮ್ಮ ಅಪ್ಪನ ಜೊತೆ ತುಂಬಾ ಸಲ ಸವದತ್ತಿಗೆ ಹೋಗಿದೀನಿ. ಜೊತೆಗೆ ಚನ್ನಮ್ಮ ಸರ್ಕಲ್, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡು, ಇಲ್ಲಿಯ ಪೇಢಾ ತುಂಬಾ ಇಷ್ಟ.

*ನೀವು ಸ್ಯಾಂಡಲ್‌ವುಡ್ ಗೆ ಸಾಕಷ್ಟು ಹಳಬರು. ಈಗಿನ ಟ್ರೆಂಡ್ ಬೇರೆ. ನೀವು ಗುರುತಿಸಿದ ವ್ಯತ್ಯಾಸವೇನು?
ಹೌದು. ತುಂಬಾ ಬದಲಾವಣೆಗಳು ಆಗಿವೆ. ಸದ್ಯ ಸ್ಯಾಂಡಲ್‌ವುಡ್ ತುಂಬ ಅಡ್ವಾಸ್ಡ್ ಆಗಿದೆ. ಕ್ರಿಯಾತ್ಮಕತೆ ಹೆಚ್ಚಾಗಿದೆ. ಒಂದು ಸಿನಿಮಾ ಪ್ಲಾನ್ ಮಾಡಿ, ಬಜೆಟ್ ಸ್ಕೇಲ್ ಹಾಕೊಂಡು, ಅದನ್ನು ಪ್ರಮೋಟ್ ಮಾಡುವಲ್ಲಿ ನಿಪುಣರಾಗಿದ್ದಾರೆ ಜನ. ಆದರೆ, ಜನರು ಥಿಯೇಟರ್‌ಗೆ ಬಂದು ಸಿನಿಮಾ ನೋಡುವುದು ಕಡಿಮೆ ಆಗಿದೆ. ಸಾಕಷ್ಟು ಸಿನಿಮಾಗಳು ಜನರ ಮುಂದೆ ಬರ್ತಿವೆ. ಜೊತೆಗೆ ಒಂದೇ ತರಹದ ಸಿನಿಮಾಗಳು ಜಾಸ್ತಿ ಆಗಿವೆ.

*ನಿಮ್ಮ ಪ್ರಕಾರ ಮೂವೀ ಮೇಕಿಂಗ್ ಅಲ್ಲಿ ಯಾವ ರೀತಿಯ ಬದಲಾವಣೆಗಳಾಗಬೇಕು? ಜನ ಸಿನಿಮಾ ನೋಡಲು ಥಿಯೇಟರ್‌ಗೆ ಬರೋ ಹಾಗೆ ಏನು ಮಾಡ್ಬೇಕು?
ನಾನು ಈಗ ನಿರ್ದೇಶನವನ್ನು ಕೈಗೆತ್ತಿ ಕೊಂಡಿರುವುದರಿಂದ ನನಗೆ ಅನಿಸಿದ್ದನ್ನು ಹೇಳುವೆ. ಒಂದೇ ತರಹದ ಸಿನಿಮಾ ಮಾಡುವುದನ್ನು ಬಿಟ್ಟು, ವಿಭಿನ್ನ ಕಥೆ ಹೊಂದಿದ ಸಿನಿಮಾಗಳು ಮೂಡಿ ಬರಬೇಕು. ಸ್ಕ್ರಿಪ್ಟ್‌ನಲ್ಲಿ ಎದ್ದು ಕಾಣುವ ಕಥೆ ಪರದೆಯ ಮೇಲೂ ಹಾಗೇ ಇರಬೇಕು. ಯಾವಾಗಲೂ ಹೊಸದನ್ನು ಕೊಡೋಕಾಗಲ್ಲ. ಜನರಿಗೆ ಯಾವ ರೀತಿಯ ಸಿನಿಮಾಗಳು ಇಷ್ಟ ಆಗುತ್ತವೆ ಅಂತ ಇನ್ನೂವರೆಗೂ ಯಾರಿಗೂ ತಿಳಿಯದ ಸಂಗತಿ. ಜನರಿಗೆ ಯಾವ ರೀತಿಯ ಸಿನಿಮಾಗಳು ಇಷ್ಟ ಅಂತ ತಿಳಿದುಕೊಳ್ಳುವ ಫಾರ್ಮುಲಾ ಅನ್ನು ಯಾರಿಂದಲೂ ಕಂಡು ಹಿಡಿಯೋಕೆ ಆಗಿಲ್ಲ. ಅದಕ್ಕೆ ನಾವು ಮೊದಲು ತಲೆ ಬಗ್ಗಿಸಿ ಕೆಲಸ ಮಾಡ್ಬೇಕು. ಅಂದಾಗ ಮಾತ್ರ ಜನ ನಮ್ಮ ಸಿನಿಮಾಗಳನ್ನು ಇಷ್ಟಪಡ್ತಾರೆ.

*ಡಾ. ರಾಜ್‌ ಅವರ ಕುಟುಂಬದಿಂದ ಬಂದವರು ನೀವು. ಸದ್ಯಕ್ಕೆ ಅವಕಾಶಗಳು ಹೇಗಿವೆ?
ಅವಕಾಶಗಳು ಒಂದೊಂದು ಸಾರಿ ಬಂದ್ರೆ ಮಳೆಹನಿ ಬಿದ್ದಂಗೆ ಬರತ್ತೆ. ಇಲ್ಲಾ ಅಂದ್ರೆ ಬರಡು ಭೂಮಿ ಹಾಗೇ ಆಗತ್ತೆ ನಮ್ ಕಥೆ. ನಮ್ಮ ದೊಡ್ಡ ಮಾವ (ಡಾ.ರಾಜ್‌ಕುಮಾರ) ಅವರ ಕುಟುಂಬದವನಾಗಿದ್ದು ನನ್ನ ಅದೃಷ್ಟ. ಆದರೆ ಆ ಅದೃಷ್ಟ ನನ್ನ ಜೊತೆ ಇರೋದು ನಾನು ಪ್ರಾಮಾಣಿಕನಾಗಿ, ಶ್ರದ್ಧೆಯಿಂದ ಕೆಲಸ ಮಾಡಿದಾಗ ಮಾತ್ರ. ಜನರಿಗೆ ಇಷ್ಟ ಆಗುವ ರೀತಿಯಲ್ಲಿ ನಟಿಸಿದ್ರೆ ಮಾತ್ರ ಜನ ಒಪ್ಪಿಕೊಳ್ತಾರೆ. ಇಲ್ಲಾಂದ್ರೆ ಖಂಡಿತ ಇಲ್ಲ.

*ನಿಮ್ಮ ಕನಸಿನ ಪಾತ್ರ...
ನಾನೊಂಥರಾ ಮಲ್ಟಿ ಪರ್ಸ್ನಾಲಿಟಿ ಕ್ಯಾರೆಕ್ಟರ್. ತುಂಬಾ ಕನಸುಗಳಿವೆ. ಆದರೆ ಮುಂಚೆಯಿಂದಲೂ ನನಗೆ ಸ್ಪ್ಯಾಸ್ಟಿಕ್ ಪಾತ್ರ ಮಾಡುವಾಸೆ. ಜನರಿಗೆ ನಾನು ಅತ್ತರೆ ಇಷ್ಟ ಆಗತ್ತೆ. ಹಾಗೇ ಅವರಿಗೆ ಇಷ್ಟ ಆಗೋ ರೋಲ್ ಜೊತೆಗೆ ನನ್ನಿಷ್ಟವಾದ ಪಾತ್ರ ಮಾಡೋದು ನನ್ನಾಸೆ.

* ಡ್ರಾಮಾ ಜ್ಯೂನಿಯರ್ಸ್‌ನಲ್ಲಿ ನಿಮ್ಮನ್ನು ನೀವು ಕಂಡುಕೊಳ್ಳುವ ಪರಿ..
ನಟನೆ, ನಿರ್ದೇಶನದಲ್ಲಿ ಬ್ಯೂಸಿಯಾಗಿರುವ ನನಗೆ ಡ್ರಾಮಾ ಜ್ಯೂನಿಯರ್ಸ್ ಒಂಥರಾ ಸ್ಟ್ರೆಸ್ ಬಸ್ಟರ್ ಥರಾ. ತುಂಬಾ ಎಂಜಾಯ್ ಮಾಡ್ತೀನಿ. ಒಂದು ಹೊಸ ಲೋಕದಲ್ಲಿ ಕಳೆದು ಹೋಗ್ತೀನಿ.

*ಉತ್ತರ ಕರ್ನಾಟಕದ ಕಲಾವಿದರಿಗೆ ಸ್ಯಾಂಡಲ್‌ವುಡ್ನಲ್ಲಿ ಅವಕಾಶ ಕಡಿಮೆ ಎನ್ನುತ್ತಾರೆ ಇದಕ್ಕೆ ನಿಮ್ಮ ಅಭಿಪ್ರಾಯ?
ಹಾಗೇನಿಲ್ಲ. ಹಾಗಂತ ಅಂದುಕೊಂಡಿರುವವರ ದೃಷ್ಟಿಕೋನ ತಪ್ಪು. ಅವಕಾಶಗಳು ತುಂಬಾ ಇವೆ. ಜೊತೆಗೆ ಉತ್ತರ ಕರ್ನಾಟಕದ ಕಲಾವಿದರೇ ನಮ್ಮಲ್ಲಿ ಜಾಸ್ತಿ ಇರೋದು.

*ಹೊಸದಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡೋ ಕಲಾವಿದರಿಗೆ ನಿಮ್ಮ ಸಲಹೆ...
ಮನುಷ್ಯನಿಗೆ ತಾಳ್ಮೆ ಮುಖ್ಯ. ಸದಾ ತಾಳ್ಮೆಯಿಂದ ಇರಿ. ಅವಸರ ಬೇಡ. ಅವಕಾಶಗಳು ಸಿಕ್ಕೇ ಸಿಗುತ್ತೆ, ಪ್ರತಿಭೆ, ಪರಿಶ್ರಮವೊಂದಿದ್ದರೆ ಸಾಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.