
ನಟಾಲಿಯಾ ಬರ್ನ್, ನಟ ಯಶ್
ಚಿತ್ರ: ಇನ್‌ಸ್ಟಾಗ್ರಾಂ
ಇಂದು (ಗುರುವಾರ) ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬ. ಹೀಗಾಗಿ ‘ಟಾಕ್ಸಿಕ್’ ಸಿನಿಮಾದ ಬಗ್ಗೆ ನಟ ಯಶ್ ಅವರು ಅಪ್‌ಡೇಟ್ ಒಂದನ್ನು ಕೊಟ್ಟಿದ್ದಾರೆ. ಟಾಕ್ಸಿಕ್ ಸಿನಿಮಾದಲ್ಲಿ ತಮ್ಮ ಪಾತ್ರದ ಹೆಸರನ್ನು ಬಹಿರಂಗಪಡಿಸಿದ್ದಾರೆ. ಇಂದು ಬೆಳಿಗ್ಗೆ 10 ಗಂಟೆ 10 ನಿಮಿಷಕ್ಕೆ ಯಶ್ ಪಾತ್ರದ ಹೆಸರನ್ನು ಒಂದು ವಿಡಿಯೊ ಮೂಲಕ ಅನಾವರಣಗೊಳಿಸಿದ್ದಾರೆ.
ನಟ ಯಶ್ ಪಾತ್ರವನ್ನು ಪರಿಚಯಿಸಿರುವ 2.51 ನಿಮಿಷಗಳ ವಿಡಿಯೊ ವೀಕ್ಷಿಸಿದ ಅಭಿಮಾನಿಗಳು ದಂಗಾಗಿದ್ದಾರೆ. ಜೊತೆಗೆ ಸಿನಿಮಾ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಇದೇ ಮೊದಲ ಬಾರಿಗೆ ಹಿಂದೆಂದೂ ಕಾಣಿಸದ ಲುಕ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್ ಕಾಣಿಸಿಕೊಂಡಿದ್ದಾರೆ. ವಿಶೇಷ ಏನೆಂದರೆ ಈ ಸಿನಿಮಾದಲ್ಲಿ ಹಾಲಿವುಡ್ ನಟಿ ಎಂಟ್ರಿ ಕೊಟ್ಟಿದ್ದು. ವಿಡಿಯೊ ಬಿಡುಗಡೆಯಾಗುತ್ತಿದ್ದಂತೆ ಹಸಿಬಿಸಿ ದೃಶ್ಯವೊಂದು ಕಾಣಿಸಿದೆ. ಸದ್ಯ, ಯಶ್ ಜೊತೆಯಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ಸುಂದರಿ ಯಾರೆಂದು ನೆಟ್ಟಿಗರು ಹುಡುಕಾಡುತ್ತಿದ್ದಾರೆ.
ನಟಿ ನಟಾಲಿಯಾ ಬರ್ನ್
ಯಶ್ ಜತೆ ಕಾರಿನೊಳಗೆ ಕಾಣಿಸಿದ ಚೆಲುವೆಯ ಹೆಸರು ನಟಾಲಿಯಾ ಬರ್ನ್ (Natalie Burn). ಇವರು ನಟಿ, ರೂಪದರ್ಶಿ, ಬರಹಗಾರ್ತಿ ಮತ್ತು ನಿರ್ಮಾಪಕಿ ಕೂಡ ಆಗಿದ್ದಾರೆ. ನಟಾಲಿಯಾ ಬರ್ನ್ ‘7ಹೆವೆನ್ ಪ್ರೊಡಕ್ಷನ್ಸ್’ ಎಂಬ ನಿರ್ಮಾಣ ಕಂಪನಿಯನ್ನು ಹೊಂದಿದ್ದಾರೆ. ಇನ್‌ಸ್ಟಾಗ್ರಾಂ ಖಾತೆಯಲ್ಲಿ ‘ದಿ ಆಕ್ಟರ್ಸ್ ಸ್ಟುಡಿಯೊ’ ಮತ್ತು ‘ದಿ ಟೆಲಿವಿಷನ್ ಅಕಾಡೆಮಿ’ ಸದಸ್ಯೆ ಎಂದು ಬರೆದುಕೊಂಡಿದ್ದಾರೆ.
ಹಾಲಿವುಡ್‌ನ ಸಿನಿಮಾಗಳಲ್ಲಿ ನಟಿಸಿರುವ ನಟಾಲಿಯಾ ಬರ್ನ್ ಇದೀಗ ಟಾಕ್ಸಿಕ್ ಸಿನಿಮಾದ ವಿಡಿಯೊದಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಉಕ್ರೇನ್-ಅಮೆರಿಕನ್ ನಟಿಯಾಗಿರುವ ಈಕೆ ಯಾರೆಂದು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಹುಡುಕಾಟ ಶುರು ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.