ಸಮಂತಾ ಹಾಗೂ ರಾಜ್ ನಿಡಿಮೋರು
ಚಿತ್ರ:ಇನ್‌ಸ್ಟಾಗ್ರಾಂ
ಬಹುಭಾಷಾ ನಟಿ ಸಮಂತಾ ರುತ್ ಪ್ರಭು ಮತ್ತು ನಿರ್ಮಾಪಕ ರಾಜ್ ನಿಡಿಮೋರು ವಿವಾಹವಾಗಿದ್ದಾರೆ. ಈ ಇಬ್ಬರ ಸಂಬಂಧದ ಕುರಿತು ಕಳೆದ ವಾರ ಉಂಟಾಗಿದ್ದ ಊಹಾಪೋಹಗಳಿಗೆ ವಿವಾಹದ ಮೂಲಕ ತೆರೆ ಎಳೆದಿದ್ದಾರೆ. ಸೋಮವಾರ ಬೆಳಿಗ್ಗೆ ನಡೆದ ಸರಳ ವಿವಾಹ ಕಾರ್ಯಕ್ರಮದಲ್ಲಿ ಇಬ್ಬರು ಹಸೆಮಣೆ ಏರಿದ್ದಾರೆ.
ಈಶ ಯೋಗ ಕೇಂದ್ರದ ಒಳಭಾಗದಲ್ಲಿರುವ ಲಿಂಗ ಭೈರವಿ ದೇವಸ್ಥಾನದಲ್ಲಿ ಬೆಳಗಿನಜಾವ ನಡೆದ ಸರಳ ವಿವಾಹ ಕಾರ್ಯಕ್ರಮದಲ್ಲಿ ಆತ್ಮೀಯರು, ಕೆಲವು ಸಂಬಂಧಿಕರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ. ಸದ್ಯ, ಸಮಂತಾ ಅವರು ವಿವಾಹದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಆ ಚಿತ್ರದಲ್ಲಿ ಸಮಂತಾ ಕೆಂಪು ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ.
ಭಾನುವಾರ ತಡರಾತ್ರಿಯಿಂದಲೇ ಈ ಇಬ್ಬರ ವಿವಾಹದ ಕುರಿತು ಸಾಕಷ್ಟು ವದಂತಿಗಳು ಹರಡಲು ಪ್ರಾರಂಭವಾಗಿತ್ತು. ಈ ವಿಚಾರ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಇದೀಗ ಸ್ವತಃ ಸಮಂತಾ ಅವರೇ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಮದುವೆಯ ಚಿತ್ರಗಳನ್ನು ಹಂಚಿಕೊಂಡು ಮದುವೆಯ ಕುರಿತು ಇದ್ದ ಎಲ್ಲಾ ವದಂತಿಗಳಿಗೂ ತೆರೆ ಎಳೆದಿದ್ದಾರೆ.
‘ಈಗ’, ‘ರಂಗಸ್ಥಳಂ’, ‘ಸೂಪರ್ ಡಿಲಕ್ಸ್’, ‘ದೂಕುಡು’, ‘ಅತ್ತರಿಂಟಿಕಿ ದಾರಿದಿ’, ‘ಥೆರಿ’ ಹೀಗೆ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಸಮಂತಾ, ರಾಜ್ ಮತ್ತು ಡಿಕೆ(ಕೃಷ್ಣ ದಾಸರಕೊತ್ತಪಲ್ಲಿ) ನಿರ್ದೇಶನದ ‘ಫ್ಯಾಮಿಲಿ ಮ್ಯಾನ್–2’ ವೆಬ್ ಸರಣಿಯಲ್ಲಿ ನಟಿಸಿದ್ದರು. ರಾಜ್ ‘ಗೋ ಗೋವಾ ಗಾನ್’ ಹಾಗೂ ‘ಎ ಜೆಂಟಲ್‌ಮ್ಯಾನ್’ ಸಿನಿಮಾ ನಿರ್ದೇಶಿಸಿದ್ದಾರೆ.
ಸಮಂತಾ ಅವರು ತೆಲುಗು ನಟ ನಾಗ ಚೈತನ್ಯ ಅವರ ಜೊತೆಗೆ 2017ರಲ್ಲಿ ವಿವಾಹವಾಗಿದ್ದರು. ಆದರೆ, 2021ರಲ್ಲಿ ಈ ಜೋಡಿ ವಿಚ್ಛೇದನ ಪಡೆದುಕೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.