ADVERTISEMENT

ನಟಿಯ ಕೈಯಲ್ಲಿ ಅರಳಿದ ಪರಿಸರಸ್ನೇಹಿ ಗಣಪ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2020, 19:30 IST
Last Updated 21 ಆಗಸ್ಟ್ 2020, 19:30 IST
ತಾವೇ ತಯಾರಿಸಿದ ಪರಿಸರ ಸ್ನೇಹಿ ಗಣಪನೊಂದಿಗೆ ನಟಿ ಸಂಯುಕ್ತಾ
ತಾವೇ ತಯಾರಿಸಿದ ಪರಿಸರ ಸ್ನೇಹಿ ಗಣಪನೊಂದಿಗೆ ನಟಿ ಸಂಯುಕ್ತಾ   

ಕೊರೊನಾ ಕಾರಣಕ್ಕೆ ಗೌರಿ ಮತ್ತು ಗಣೇಶ ಹಬ್ಬವನ್ನು ಎಲ್ಲರೂ ಒಟ್ಟಿಗೆ ಸೇರಿ, ಗುಂಪುಗೂಡಿಕೊಂಡು ಬೀದಿಬೀದಿಯಲ್ಲಿ ಆಚರಿಸುವಂತಿಲ್ಲ. ಮನೆಮಂದಿ ಮಾತ್ರ ಅದರಲ್ಲೂ ಮನೆಯೊಳಗೂ ಸಾಮಾಜಿಕ ಅಂತರ ಕಾಯ್ದುಕೊಂಡೇಹಬ್ಬವನ್ನು ಸಂಭ್ರಮಿಸಬೇಕಾಗಿದೆ. ಚಂದನವನದಲ್ಲಿಯೂ ಸಿನಿಮಾ ತಾರೆಯರ ಮನೆಗಳಲ್ಲಿ ಗೌರಿ– ಗಣೇಶ ಹಬ್ಬದ ಸಂಭ್ರಮ ನೆಲೆಸಿದೆ. ಕೆಲ– ನಟಿಯರಂತೂ ಪರಿಸರ ಸ್ನೇಹಿ ಗಣೇಶನೊಂದಿಗೆ ಹಬ್ಬದ ಆಚರಣೆಗೆ ಆದ್ಯತೆ ನೀಡುವಜತೆಗೆಕೊರೊನಾ ವಿರುದ್ಧ ಎಚ್ಚರ ವಹಿಸುವಂತೆ ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಕಿವಿಮಾತು ಹೇಳುವುದನ್ನು ಮರೆತಿಲ್ಲ.

ಚಿತ್ರತಾರೆಯರಲ್ಲಿನಟಿ ಸಂಯುಕ್ತಾ ಹೊರನಾಡು ಅವರು ಈ ಬಾರಿಯೂ ಮಣ್ಣಿನ ಗಣಪನ ಮೂರ್ತಿಗಳನ್ನು ತಯಾರಿಸಿ, ತಮ್ಮ ಮನೆಯಲ್ಲಿ ಪ್ರತಿಷ್ಠಾಪಿಸುತ್ತಿದ್ದಾರೆ. ತಾವೇ ಕೈಯಾರೆ ತಯಾರಿಸಿದ ಇನ್ನೆರಡು ಗಣೇಶ ಮೂರ್ತಿಗಳನ್ನು ತಮ್ಮ ಆಪ್ತರ ಮನೆಗಳಿಗೂ ನೀಡಿದ್ದಾರೆ.

‘ನನಗೆ ಹಬ್ಬಗಳಲ್ಲೇ ಗೌರಿ–ಗಣೇಶ ಹಬ್ಬ ಎಂದರೆ ಹೆಚ್ಚು ಖುಷಿ. ಈ ಹಬ್ಬದಲ್ಲಿ ರಂಗೋಲಿ ಹಾಕುವುದು, ಮಣ್ಣಿನ ಗಣಪನನ್ನು ತಯಾರಿಸಿ, ಆ ಗಣಪನನ್ನು ದೇವರ ಮನೆಯಲ್ಲಿ ಕೂರಿಸಿ ಪೂಜೆ ಸಲ್ಲಿಸಿ, ವಿಸರ್ಜನೆ ಮಾಡುವವರೆಗೂ ಸಂಭ್ರಮವೇ ಸಂಭ್ರಮ. ನನಗೆ ಪರಿಸರ ಪ್ರಜ್ಞೆ ಬಂದಾಗಿನಿಂದಲೂ ಪರಿಸರ ಸ್ನೇಹಿ ಗಣೇಶ ಚತುರ್ಥಿಯನ್ನು ಆಚರಿಸುತ್ತಿದ್ದೇನೆ’ ಎನ್ನುವುದು ಸಂಯುಕ್ತಾ ಅವರ ನುಡಿ.

ADVERTISEMENT

ಸಂಯುಕ್ತಾ ಅವರಿಗೆ ಗಣೇಶ ಮೂರ್ತಿ ತಯಾರಿಕೆಯ ಕೌಶಲವನ್ನು ಹೇಳಿಕೊಟ್ಟ ಗುರು ಕಲಾವಿದೆ ರಮ್ಯಾ ಎನ್ನುವವರಂತೆ. ಅವರಿಂದ ಗಣೇಶ ಮೂರ್ತಿ ತಯಾರಿಕೆ ಕಲಿತ ನಂತರ, ಆಸಕ್ತರಿಗೂ ಕಲಿಸುವ ಕೆಲಸವನ್ನು ಸಂಯುಕ್ತಾ ನಾಲ್ಕೈದು ವರ್ಷಗಳಿಂದ ತಪ್ಪದೇ ಮಾಡುತ್ತಿದ್ದಾರೆ.

ಸಿನಿಮಾ ಸಂಬಂಧಿ ಚಟುವಟಿಕೆ ಮತ್ತು ಕಲಾ ತರಬೇತಿಗಾಗಿ ಅವರು ಬೆಂಗಳೂರು ನಗರದ ದಾಲ್ಮಿಯಾ ವೃತ್ತದಲ್ಲಿ ತೆರೆದಿರುವ ‘ಆರ್ಟರಿ’ಯಲ್ಲಿ ಪ್ರತಿ ವರ್ಷವೂ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಕೆಗಾಗಿ ಕಾರ್ಯಾಗಾರ ನಡೆಸುತ್ತಾರೆ. ಈ ಬಾರಿಯೂ ಕಾರ್ಯಾಗಾರ ನಡೆದಿದ್ದು, ಸಂಯುಕ್ತ ಅವರು ವಾಸವಿರುವ ಅಪಾರ್ಟ್‌ಮೆಂಟ್‌ನ ನೆರೆಹೊರೆಯವರ ಮಕ್ಕಳನ್ನು ಮಾತ್ರ ಸೇರಿಸಿಕೊಂಡು ಮಣ್ಣಿನ ಗಣಪನ ಮೂರ್ತಿಗಳನ್ನು ತಯಾರಿಸಿದ್ದಾರೆ.

‘ಕೊರೊನಾ ಆತಂಕದ ಪರಿಸ್ಥಿತಿ ಇರುವುದರಿಂದ ಈ ಬಾರಿ ಹೊರಗಿನವರನ್ನು ಕಾರ್ಯಾಗಾರಕ್ಕೆ ಸೇರಿಸಿಕೊಳ್ಳಲಿಲ್ಲ. ನಮ್ಮ ಅಪಾರ್ಟ್‌ಮೆಂಟಿನ್ ನೆರೆಹೊರೆಯ ಮನೆಗಳ ಹದಿನೈದು ಮಕ್ಕಳನ್ನು ಮಾತ್ರ ಸೇರಿಸಿಕೊಂಡಿದ್ದೆವು. ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಂಡೇ ಕಾರ್ಯಾಗಾರದಲ್ಲಿ ಭಾಗವಹಿಸಿದ್ದೆವು’ ಎಂದು ಮಾತು ಸೇರಿಸಿದರು ಸಂಯುಕ್ತಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.