
ವೈದ್ಯಕೀಯ ಪದವಿ ಪಡೆದ ಶ್ರೀಲೀಲಾ
ಕನ್ನಡ ಚಿತ್ರರಂಗದ ಮುದ್ದಾದ ಚೆಲುವೆ, ಕಿಸ್ ಬೆಡಗಿ ಶ್ರೀಲೀಲಾ ಈಗ ಡಾಕ್ಟರ್. ನಟನೆಯ ಜೊತೆಗೇ ಎಂಬಿಬಿಎಸ್ ಓದುತ್ತಿದ್ದ ಶ್ರೀಲೀಲಾ, ಆರು ವರ್ಷಗಳ ಬಳಿಕ ಓದು ಮುಗಿಸಿ ವೈದ್ಯಕೀಯ ಪದವಿ ಪಡೆದಿದ್ದಾರೆ.
ಮುಂಬೈನ ಡಿ.ವೈ ಪಾಟೀಲ್ ವಿಶ್ವವಿದ್ಯಾಲಯದಲ್ಲಿ ನಡೆದ ಘಟಿಕೋತ್ಸವದಲ್ಲಿ ಶ್ರೀಲೀಲಾ ಅವರು ಬುಧವಾರ ವೈದ್ಯೆ ಪದವಿ ಪಡೆದಿದ್ದಾರೆ. ಶ್ರೀಲೀಲಾ ಅವರು ಪದವಿ ಸ್ವೀಕಾರ ಮಾಡುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.
ವೇದಿಕೆಗೆ ಆಗಮಿಸುವಂತೆ ಅವರ ಹೆಸರನ್ನು ಕರೆದಾಗ ಶ್ರೀಲೀಲಾ ಅವರು ಖುಷಿಯಿಂದ ಹೋಗಿ ಪದವಿ ಸ್ವೀಕರಿಸಿದ ಕ್ಷಣಗಳ ವಿಡಿಯೊವೊಂದು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.
ವಿಡಿಯೊ ನೋಡಿದ ಅಭಿಮಾನಿಗಳು ‘ಸುಂದರವಾಗಿಯೂ ಇರುವ ಶ್ರೀಲೀಲಾ ಬುದ್ಧಿವಂತೆಯೂ ಆಗಿದ್ದಾರೆ. ನಟನೆಯೊಂದಿಗೆ ಓದಿನ ಮೇಲೂ ಗಮನವಿಟ್ಟು ಪದವಿ ಪಡೆದ ಅವರ ಶ್ರದ್ಧೆಯನ್ನು ನಿಜಕ್ಕೂ ಮೆಚ್ಚಬೇಕು’ ಎಂದು ಕಮೆಂಟ್ ಮಾಡಿದ್ದಾರೆ.
ಕಿಸ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿರುವ ಶ್ರೀಲೀಲಾ ತೆಲುಗು ಚಿತ್ರರಂಗದಲ್ಲೂ ಮಿಂಚುತ್ತಿದ್ದಾರೆ. ಸದ್ಯ ಧನುಷ್ ಜೊತೆ ತೆರೆ ಹಂಚಿಕೊಳ್ಳಲು ಸಿದ್ಧವಾಗಿದ್ದು, D55 ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಡಾಕ್ಟರೇಟ್ ಪಡೆದ ಇತರ ನಟಿಯರು
ಶ್ರೀಲೀಲಾ ಮಾತ್ರವಲ್ಲ. ಇತ್ತೀಚಿನ ವರ್ಷಗಳಲ್ಲಿ ನಟಿ ಸಾಯಿಪಲ್ಲವಿ, ಮೀನಾಕ್ಷಿ ಚೌಧರಿ ಕೂಡ ನಟನೆಯ ಜೊತೆಗೆ ಎಂಬಿಬಿಎಸ್ ಪದವಿ ಪೂರ್ಣಗೊಳಿಸಿ ವೈದ್ಯೆಯರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.