ADVERTISEMENT

ನಿರ್ದೇಶಕ ಮಣಿರತ್ನಂ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ: ಪತ್ನಿ ಸುಹಾಸಿನಿ ಕಿಡಿ

ನಕಲಿ ಖಾತೆ ಸೃಷ್ಟಿಸಿ ಗೊಂದಲ

​ಪ್ರಜಾವಾಣಿ ವಾರ್ತೆ
Published 3 ಜೂನ್ 2021, 7:39 IST
Last Updated 3 ಜೂನ್ 2021, 7:39 IST
ಮಣಿರತ್ನಂ ದಂಪತಿ
ಮಣಿರತ್ನಂ ದಂಪತಿ   

ಚೆನ್ನೈ: ನಿನ್ನೆಯಷ್ಟೇ (ಜೂನ್ 2) ಖ್ಯಾತ ನಿರ್ದೇಶಕ ಮಣಿರತ್ನಂ ಅವರು ತಮ್ಮ 65 ನೇ ಜನ್ಮದಿನವನ್ನು ಆಚರಿಸಿಕೊಂಡರು. ಅವರ ಜನ್ಮದಿನವನ್ನೇ ನೆಪವಾಗಿಟ್ಟುಕೊಂಡು ಕಿಡಗೇಡಿಯೊಬ್ಬ ಟ್ವಿಟರ್‌ನಲ್ಲಿ ನಕಲಿ ಖಾತೆಯನ್ನು ತೆರೆದು ನೆಟ್ಟಿಗರಲ್ಲಿ ಗೊಂದಲಕ್ಕೆ ಕಾರಣವಾಗಿದ್ದ.

ಈ ಬಗ್ಗೆ ಸ್ವತಃ ಮಣಿರತ್ನಂ ಪತ್ನಿ ಹಾಗೂ ಹಿರಿಯ ನಟಿ ಸುಹಾಸಿನಿ ಅವರು ಟ್ವಿಟರ್‌ನಲ್ಲೇ ಸ್ಪಷ್ಟನೆಕೊಟ್ಟಿದ್ದು, ‘ಮಣಿರತ್ನಂ ಅವರು ಯಾವುದೇ ಟ್ವಿಟರ್‌ ಖಾತೆಯನ್ನು ಹೊಂದಿಲ್ಲ. @Dir_ ManiRatnamಹೆಸರಿನಲ್ಲಿರುವ ಟ್ವಿಟರ್‌ ಖಾತೆ ನಕಲಿಯಾಗಿದ್ದು ಎಚ್ಚರವಾಗಿರಿ‘ ಎಂದು ಗುರುವಾರ ಟ್ವಿಟ್ಮಾಡಿದ್ದಾರೆ.

ಮಣಿರತ್ನಂ ಹೆಸರಿನ ಟ್ವಿಟರ್‌ ಖಾತೆ ಆರಂಭವಾದ ಬೆನ್ನಲ್ಲೇ ಆ ಖಾತೆಯನ್ನು ಕೆಲವೇ ಗಂಟೆಗಳಲ್ಲಿ ಸಾವಿರಾರು ಜನ ಅನುಸರಿಸಿದ್ದು ಕಂಡು ಬಂದಿತ್ತು.

ADVERTISEMENT

ಮಣಿರತ್ನಂ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದ್ದು, ಅವರು ಪ್ರಸ್ತುತ ಬಹುತಾರಾಗಣದ ‘ಪೊನ್ನಿಯಿನ್ ಸೆಲ್ವನ್‘ ಎಂಬ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಐಶ್ವರ್ಯ ರೈ ಬಚ್ಚನ್, ಚಿಯಾನ್ ವಿಕ್ರಮ್, ತ್ರಿಶಾ ಸೇರಿದಂತೆ ಅನೇಕರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಚಿತ್ರಿಕರಣ ಸ್ಥಗಿತಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.