ನಟ ಅಲ್ಲು ಅರ್ಜುನ್
ಹೈದರಾಬಾದ್: ತೆಲುಗು ನಟ ಅಲ್ಲು ಅರ್ಜುನ್ ಅವರ ವಿರುದ್ಧ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಮಾಡಿದ ಆರೋಪದ ಬೆನ್ನಲ್ಲೇ, ತಮ್ಮ ಅಭಿಮಾನಿಗಳಿಗೆ ಜವಾಬ್ದಾರಿಯುತವಾಗಿ ನಡೆದುಕೊಳ್ಳುವಂತೆ ನಟ ಅಲ್ಲು ಅರ್ಜುನ್ ಮನವಿ ಮಾಡಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ತಮ್ಮ ಅಭಿಮಾನಿಗಳು ಈ ಸಮಯದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಯಾರ ಬಗ್ಗೆಯೂ ವೈಯಕ್ತಿಕವಾಗಿ ನಿಂದಿಸಬಾರದು ಎಂದು ತಿಳಿಸಿದ್ದಾರೆ.
ಅಭಿಮಾನಿಗಳು ತಮ್ಮ ಭಾವನೆಗಳನ್ನು ಜವಾಬ್ದಾರಿಯುತವಾಗಿ ವ್ಯಕ್ತಪಡಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಎಲ್ಲಿಯೂ ಬೇರೆಯವರ ಬಗ್ಗೆ ವೈಯಕ್ತಿಕ ನಿಂದನೆಯ ಹೇಳಿಕೆಗಳನ್ನು ನೀಡಬೇಡಿ ಎಂದು ಸೂಚಿಸಿದ್ದಾರೆ.
ನಕಲಿ ಐಡಿ ಮತ್ತು ಖಾತೆಗಳ ಮೂಲಕ ತಮ್ಮ ಅಭಿಮಾನಿಯಂತೆ ಬಿಂಬಿಸಿ, ಸುಳ್ಳು ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ವಿಷಯ ಗಮನಕ್ಕೆ ಬಂದಿದ್ದು, ಇಂತಹ ನಕಲಿ ಪೋಸ್ಟ್ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ.
ಪೊಲೀಸರು ಅನುಮತಿ ನಿರಾಕರಿಸಿದರೂ ಚಿತ್ರ ಪ್ರದರ್ಶನದ ವೇಳೆ ನಟ ಅಲ್ಲು ಅರ್ಜುನ್ ಸಂಧ್ಯಾ ಥಿಯೇಟರ್‌ಗೆ ಭೇಟಿ ನೀಡಿದ್ದರು ಎಂದು ಇತ್ತೀಚೆಗೆ ರೇವಂತ್ ರೆಡ್ಡಿ ಆರೋಪಿಸಿದ್ದರು. ಆದರೆ ಅಲ್ಲು ಈ ಆರೋಪವನ್ನು ತಳ್ಳಿ ಹಾಕಿದ್ದಾರೆ.
'ಪುಷ್ಪ-2' ಚಿತ್ರದ ಪ್ರದರ್ಶನದ ವೇಳೆ ನೂಕುನುಗ್ಗಲು ಉಂಟಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಈ ಘಟನೆಯಲ್ಲಿ ಆಕೆಯ ಎಂಟು ವರ್ಷದ ಮಗ ಗಾಯಗೊಂಡಿದ್ದರು. ಈ ಪ್ರಕರಣ ಸಂಬಂಧ ನಟ ಅಲ್ಲು ಅರ್ಜುನ್ ಅವರನ್ನು ಬಂಧಿಸಲಾಗಿತ್ತು. ಬಳಿಕ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.