ADVERTISEMENT

ಕಿಚ್ಚನ ಹುಡುಗಿಯ ಕೆಚ್ಚಿನ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2020, 19:30 IST
Last Updated 30 ಏಪ್ರಿಲ್ 2020, 19:30 IST
ಅಮಲಾ ಪೌಲ್
ಅಮಲಾ ಪೌಲ್   

ಅಮಲಾ ಪೌಲ್ ದಕ್ಷಿಣ ಭಾರತದ ಜನಪ್ರಿಯ ನಟಿ. ಆಕೆ ಸುದೀಪ್‌ ನಾಯಕರಾಗಿದ್ದ ‘ಹೆಬ್ಬುಲಿ’ ಚಿತ್ರದ ಮೂಲಕ ಕನ್ನಡದಲ್ಲಿಯೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಆದರೆ, ಈ ಚಿತ್ರದ ಬಳಿಕ ಆಕೆಗೆ ಚಂದನವನದಲ್ಲಿ ಅವಕಾಶಗಳು ಲಭಿಸಲಿಲ್ಲ. ಈಗ ಆಕೆ ಮಲಯಾಳ, ತಮಿಳು ಮತ್ತು ತೆಲುಗಿನಲ್ಲಿ ಬ್ಯುಸಿಯಾಗಿದ್ದಾರೆ.

ಲಾಕ್‌ಡೌನ್‌ ಪರಿಣಾಮ ಕೇರಳದಲ್ಲಿ ಅಮ್ಮನೊಟ್ಟಿಗೆ ಕಾಲ ದೂಡುತ್ತಿದ್ದಾರೆ. ಈ ಅವಧಿಯಲ್ಲಿ ಆಕೆ ಮಹಿಳೆಯ ಬದುಕಿನಲ್ಲಿ ಪುರುಷನ ಪಾತ್ರದ ಬಗ್ಗೆ ಇನ್‌ಸ್ಟ್ರಾಗ್ರಾಮ್‌ನಲ್ಲಿ ಎತ್ತಿರುವ ಪ್ರಶ್ನೆಗಳು ಚರ್ಚೆಗೆ ಗ್ರಾಸವಾಗಿವೆ.

ಓಶೋ ಬರೆದ ‘ದಿ ಬುಕ್‌ ಆಫ್‌ ವುಮೆನ್’ ಪುಸ್ತಕವನ್ನು ಟೇಬಲ್‌ ಮೇಲಿಟ್ಟು ಪುರುಷರ ಮುಂದೆ ಪ್ರಶ್ನೆಗಳಗುಚ್ಛವನ್ನೇ ಮುಂದಿಟ್ಟಿದ್ದಾರೆ. ‘ಮದುವೆ, ಪ್ರೀತಿ, ಮಕ್ಕಳ ಪಾಲನೆಯಲ್ಲಿ ಮಹಿಳೆ ಅನುಭಿಸುವ ನೋವಿಗೆ ಕೊನೆಯಿಲ್ಲ. ಆದರೆ, ಆಕೆಯ ಬದುಕಿನ ಬಗ್ಗೆ ಸಮಾಜದಲ್ಲಿ ಪ್ರಶ್ನಿಸುವವರ ಸಂಖ್ಯೆ ದೊಡ್ಡದಿದೆ. ಈ ನಿಟ್ಟಿನಲ್ಲಿ ಪುರುಷನನ್ನು ಮಾತ್ರ ಯಾರೂ ಪ್ರಶ್ನಿಸುವುದಿಲ್ಲ. ಆಕೆ ಜೀತದಾಳುವಿನಂತೆ ದುಡಿಯುತ್ತಿರುವುದೇ ಇದಕ್ಕೆ ಮೂಲ ಕಾರಣ. ಆಕೆ ಆರ್ಥಿಕವಾಗಿ ಪುರುಷನ ಮೇಲೆ ಅವಲಂಬಿತಳಾಗಿದ್ದಾಳೆ. ಹಾಗಾಗಿ, ಮಹಿಳೆಯರ ಮೇಲೆ ನಿರಂತರವಾಗಿ ದಬ್ಬಾಳಿಕೆ ನಡೆಯುತ್ತಿದೆ’ ಎಂದಿದ್ದಾರೆ ಅಮಲಾ ಪೌಲ್‌.

ADVERTISEMENT

ಮಹಿಳೆಯ ಬದುಕು ಯಾತನದಾಯಕವಾದುದು. ಭ್ರೂಣದಲ್ಲಿ ಮಗು ಬೆಳೆಯುವಾಗಲೂ ಆಕೆಗೆ ಸರಿಯಾದ ಊಟ ಮಾಡಲು ಆಗುವುದಿಲ್ಲ. ಆ ಅವಧಿಯಲ್ಲಿ ಬಹುತೇಕ ಮಹಿಳೆಯರು ವಾಂತಿ ಮಾಡಿಕೊಳ್ಳುತ್ತಾರೆ. ಮಗುವಿನ ಜನ್ಮ ನೀಡುವ ಪ್ರತಿಯೊಬ್ಬ ಮಹಿಳೆಯು ಮರುಹುಟ್ಟು ಪಡೆಯುತ್ತಾಳೆ ಎಂದಿದ್ದಾರೆ.

‘ಒಂದು ಮಗು ಜನಿಸಿದ ಬಳಿಕ ಆಕೆಯ ತಾಯ್ತನದಿಂದ ಹೊರಬರುವುದಿಲ್ಲ. ಗಂಡನ ಒತ್ತಾಯದಿಂದ ಮತ್ತೆ ಗರ್ಭಿಣಿಯಾಗುತ್ತಾಳೆ. ಆಕೆಯ ಬದುಕು ಒಂದರ್ಥದಲ್ಲಿ ಸರಕು ಉತ್ಪಾದಿಸುವ ಕಾರ್ಖಾನೆಯಂತಾಗುತ್ತದೆ. ಮಗುವಿಗಾಗಿ ಒಂಬತ್ತು ತಿಂಗಳು ನೋವು ಸಹಿಸಿಕೊಳ್ಳುತ್ತಾಳೆ. ಹಾಗಿದ್ದರೆ ಪುರುಷನ ನೈಜ ಕರ್ತವ್ಯ ಏನು? ಆತ ಎಂದಿಗೂ ಆಕೆಯ ನೋವಿನಲ್ಲಿ ಭಾಗಿಯಾಗುವುದಿಲ್ಲ. ಮಹಿಳೆಯರನ್ನು ಲೈಂಗಿಕ ವಸ್ತುವಾಗಿ ಬಳಸಿಕೊಳ್ಳುವುದೇ ಆತನ ಉದ್ದೇಶವಾಗಿದೆ’ ಎಂದು ಅಸಮಾಧಾನ ತೋಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.