
ನಟ ಯಶ್, ಅಮೃತ ಅಂಜನ್ ಸಿನಿಮಾ ತಂಡದವರು
‘ಅಮೃತಾಂಜನ್’ ಎಂಬ ಕಿರುಚಿತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದ ತಂಡವೀಗ ದೊಡ್ಡ ಪರದೆ ಮೇಲೆ ಮಿಂಚಲು ಸಜ್ಜಾಗಿದೆ. ‘ಅಮೃತ ಅಂಜನ್’ ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟ ಸಿನಿಮಾ ತಂಡಕ್ಕೆ ರಾಕಿಂಗ್ ಸ್ಟಾರ್ ಯಶ್ ಶುಭ ಹಾರೈಸಿದ್ದಾರೆ.
ಜ್ಯೋತಿ ರಾವ್ ಮೋಹಿತ್ ನಿರ್ದೇಶನದಲ್ಲಿ ಮೂಡಿಬಂದಿರುವ ‘ಅಮೃತ ಅಂಜನ್’ ಸಿನಿಮಾ ಇಂದು (ಜ.30) ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಸಿನಿಮಾ ನೋಡಿದ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಇದರ ಮಧ್ಯೆ ನಟ ಯಶ್ ಅವರು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಶುಭ ಕೋರಿದ್ದು ಇಡೀ ತಂಡಕ್ಕೆ ಬಲ ತುಂಬಿದಂತಾಗಿದೆ.
ನಟ ಯಶ್ ಇನ್‌ಸ್ಟಾಗ್ರಾಂ ಸ್ಟೋರಿ
ನಟ ಯಶ್ ಹೇಳಿದ್ದೇನು?
‘ಅಮೃತ ಅಂಜನ್ ತಂಡಕ್ಕೆ...
ನಿಮ್ಮ ಕೆಲಸವನ್ನು ನಾನು ಯಾವಾಗಲೂ ಆನಂದಿಸುತ್ತೇನೆ. ನಿಮ್ಮ ದೊಡ್ಡ ಕನಸು, ಹೊಸ ಹೊಸ ಪ್ರಯತ್ನವನ್ನು ಮಾಡುವುದು ಮತ್ತು ನಿರಂತರವಾಗಿ ಅದನ್ನು ನೋಡುವುದು ನನಗೆ ಸಂತೋಷವಾಗುತ್ತದೆ. ವಿಷಯವನ್ನು ರಚಿಸುವುದರಿಂದ ಹಿಡಿದು ನಿಮ್ಮ ಸ್ವಂತ ಸಿನಿಮಾವನ್ನು ಬೆಂಬಲಿಸುವವರೆಗೆ, ಈ ಪ್ರಯಾಣವು ಬಹಳಷ್ಟು ಹೇಳುತ್ತದೆ.
ನಿಮ್ಮ ಈ ಪ್ರಯತ್ನ ಹೊಸಬರಿಗೆ, ಹೊಸ ಕಥೆಗಾರರಿಗೆ ಸ್ಪೂರ್ತಿಯಾಗುತ್ತದೆ. ಜತೆಗೆ ಯಾರೂ ಮಿತಿಗಳನ್ನು ಹೇರಿಕೊಳ್ಳಬಾರದು ಎಂಬುದನ್ನು ಸೂಚಿಸುತ್ತದೆ ಎಂದು ಭಾವಿಸುತ್ತೇನೆ. ನಿಮಗೆಲ್ಲರಿಗೂ ಶುಭ ಹಾರೈಸುತ್ತೇನೆ’ ಎಂದು ಬರೆದುಕೊಂಡು, ಅಮೃತ ಅಂಜನ್ ಸಿನಿಮಾ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ.
ಈ ಸಿನಿಮಾದಲ್ಲಿ ಸುಧಾಕರ್ ಗೌಡ, ಗೌರವ ಶೆಟ್ಟಿ, ಪಾಯಲ್ ಚಂಗಪ್ಪ, ನವೀನ್. ಡಿ.ಪಡೀಲ್ ತಂದೆಯಾಗಿ ಹಾಗೂ ಮಧುಮತಿ ತಾಯಿಯಾಗಿ ಕಾಣಿಸಿಕೊಂಡಿದ್ದಾರೆ. ಕಾರ್ತಿಕ್ ರೂವಾರಿ, ಶ್ರೀ ಭವ್ಯ, ಪಲ್ಲವಿ ಪರ್ವ ಸೇರಿದಂತೆ ಹಲವಾರು ಕಲಾವಿದರು ಚಿತ್ರದಲ್ಲಿದ್ದಾರೆ. ಲೋಕೇಶ್ ನಾಗಪ್ಪ ಬಂಡವಾಳ ಹೂಡಿರುವ ಚಿತ್ರಕ್ಕೆ ಸುಮಂತ್ ಆಚಾರ್ಯ ಛಾಯಾಚಿತ್ರಗ್ರಹಣ, ಕಿರಣ್ ಕುಮಾರ್ ಸಂಕಲನ ಹಾಗೂ ರೋಹಿತ್ ಶೋವರ್ ಹಿನ್ನೆಲೆ ಸಂಗೀತವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.