
ಸನ್ನಿ ಡಿಯೋಲ್
ಕೃಪೆ: ಎಕ್ಸ್
ತಮ್ಮ ತಂದೆ ಧರ್ಮೇಂದ್ರ ಅವರ ಅಸ್ಥಿ ವಿಸರ್ಜನೆ ವೇಳೆ ಫೋಟೊ ಕ್ಲಿಕ್ಕಿಸಿಕೊಳ್ಳಲು ನಿಂತಿದ್ದ ಪಾಪರಾಜಿಗಳ ವಿರುದ್ಧ ನಟ ಸನ್ನಿ ಡಿಯೋಲ್ ಕಿಡಿಕಾರಿದ್ದಾರೆ. ಕುಟುಂಬದ ಖಾಸಗಿತನಕ್ಕೆ ಧಕ್ಕೆ ಉಂಟು ಮಾಡಿದ್ದಕ್ಕಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಲಿವುಡ್ ನಟ, 'ಹೀ ಮ್ಯಾನ್' ಎಂದೇ ಖ್ಯಾತರಾಗಿದ್ದ ಧರ್ಮೇಂದ್ರ ಅವರು ನವೆಂಬರ್ 24ರಂದು ನಿಧನರಾದರು. ಇತ್ತೀಚೆಗೆ, ಅವರ ಚಿತಾಭಸ್ಮ ವಿಸರ್ಜನೆಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ.
ವಿಧಿವಿಧಾನದ ಚಿತ್ರಗಳನ್ನು ಸೆರೆಹಿಡಿಯಲು ನಿಂತಿದ್ದ ಛಾಯಾಗ್ರಾಹಕನತ್ತ ಬಂದ ಸನ್ನಿ, ಕ್ಯಾಮರಾವನ್ನು ಹಿಡಿದು 'ಎಷ್ಟು ಹಣ ಬೇಕು ನಿಮಗೆ?' ಎಂದು ಆಕ್ರೋಶದಿಂದ ಕೇಳಿದ್ದಾರೆ.
ಆ ಸಂದರ್ಭದಲ್ಲಿ ಸೆರೆಯಾಗಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಸನ್ನಿ ಅವರ ಅಭಿಮಾನಿಗಳು, ನಟನ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಸನ್ನಿ ಅವರ ಕೋಪ ನ್ಯಾಯಯುತವಾದದ್ದು. ಸೆಲೆಬ್ರಿಟಿಗಳೂ ಮನುಷ್ಯರೇ ಅಲ್ಲವೇ. ಅವರ ಖಾಸಗಿತನವನ್ನು ಗೌರವಿಸಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದೇ ಮೊದಲಲ್ಲ!
ಸಾರ್ವಜನಿಕ ಸ್ಥಳದಲ್ಲಿ ತಮ್ಮ ಖಾಸಗಿತನವನ್ನು ಉಲ್ಲಂಘಿಸಿದವರ ವಿರುದ್ಧ ಸನ್ನಿ ಕಿಡಿಕಾರಿದ್ದು ಇದೇ ಮೊದಲಲ್ಲ. ಧರ್ಮೇಂದ್ರ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಿಂದ (ನವೆಂಬರ್ 12ರಂದು) ಬಿಡುಗಡೆ ಮಾಡಿಸಿ, ಕರೆದುಕೊಂಡು ಹೋಗುವಾಗಲೂ ಇಂತಹದೇ ಘಟನೆ ನಡೆದಿತ್ತು.
ಧರ್ಮೇಂದ್ರ ಅವರ ಚಿತ್ರಗಳನ್ನು ಸೆರೆಹಿಡಿಯಲು ಯತ್ನಿಸಿದ ಪಾಪರಾಜಿಗಳನ್ನುದ್ದೇಶಿಸಿ 'ನಿಮಗೆ ನಾಚಿಕೆಯಾಗುವುದಿಲ್ಲವೇ?' ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.