ADVERTISEMENT

ವಿಕ್ಕಿ ಕೌಶಲ್ ಅಶ್ವತ್ಥಾಮನಾದ ಕಥೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2020, 19:30 IST
Last Updated 8 ಏಪ್ರಿಲ್ 2020, 19:30 IST
ವಿಕ್ಕಿ ಕೌಶಲ್‌
ವಿಕ್ಕಿ ಕೌಶಲ್‌   

ನಿರ್ದೇಶಕ ಆದಿತ್ಯ ಧರ್‌ ಅವರ ಮುಂದಿನ ಸಿನಿಮಾ ‘ದಿ ಇಮ್ಮಾರ್ಟಲ್ ಅಶ್ವತ್ಥಾಮ’ಕ್ಕೆ ವಿಕ್ಕಿ ಕೌಶಲ್ ಅವರನ್ನು ಆಯ್ಕೆ ಮಾಡಿಕೊಳ್ಳುವುದು ಕ್ಷಣಾರ್ಧದ ತೀರ್ಮಾನ ಆಗಿತ್ತು. ಏಕೆಂದರೆ, ಆ ಸಿನಿಮಾಕ್ಕೆ ವಿಕ್ಕಿ ಅತ್ಯಂತ ಸೂಕ್ತ ವ್ಯಕ್ತಿಯಾಗಿದ್ದರು.

2019ರಲ್ಲಿ ‘ಉರಿ’ ಚಿತ್ರ ನಿರ್ದೇಶಿಸಿದ್ದರು ಆದಿತ್ಯ. ಇದು ಬ್ಲಾಕ್‌ಬಸ್ಟರ್‌ ಚಿತ್ರಗಳಲ್ಲಿ ಒಂದು. ಈ ಚಿತ್ರದಲ್ಲಿನ ನಟನೆಗಾಗಿ ವಿಕ್ಕಿ ಅವರು ‘ಅತ್ಯುತ್ತಮ ನಟ’ ಪ್ರಶಸ್ತಿಯನ್ನು, ಆದಿತ್ಯ ಅವರು ‘ಅತ್ಯುತ್ತಮ ನಿರ್ದೇಶಕ’ ಪ್ರಶಸ್ತಿಯನ್ನು ಬಾಚಿಕೊಂಡಿದ್ದರು. ಈಗ ಇವರು ‘ಅಶ್ವತ್ಥಾಮ’ ಚಿತ್ರದಲ್ಲಿ ಮತ್ತೆ ಒಂದಾಗುತ್ತಿದ್ದಾರೆ.

ಈಗ ‘ಅಶ್ವತ್ಥಾಮ’ ಚಿತ್ರದ ಪ್ರೀಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ‘ನಾನು ಕಲಾವಿದರನ್ನು ಹುಡುಕಲು ಸರಳ ಸೂತ್ರವೊಂದನ್ನು ಇಟ್ಟುಕೊಂಡಿದ್ದೇನೆ. ಚೆನ್ನಾಗಿ ಕೆಲಸ ಮಾಡುವವರು ಹಾಗೂ ತಕರಾರು ಇಲ್ಲದೆ ಕೆಲಸ ಮಾಡುವವರು ನನಗೆ ಬೇಕು. ಸರಳವಾಗಿ, ನೇರವಂತಿಕೆಯಿಂದ ಇರುವವರು ನನಗೆ ಇಷ್ಟ’ ಎಂದು ಆದಿತ್ಯ ಹೇಳಿದ್ದಾರೆ.

ADVERTISEMENT

‘ನಾನು ಯಾವುದಕ್ಕೆ ಹೆಚ್ಚು ಆದ್ಯತೆ ನೀಡುತ್ತೇನೋ, ನಟ ಕೂಡ ಅದಕ್ಕೇ ಹೆಚ್ಚು ಆದ್ಯತೆ ನೀಡುವವ ಆಗಿರಬೇಕು. ವಿಕ್ಕಿ ಅವರು ತಮ್ಮ ಪಾತ್ರಕ್ಕಾಗಿ ಎಲ್ಲವನ್ನೂ ಧಾರೆ ಎರೆಯುತ್ತಾರೆ. ನಾನು ಮಾಡುವ ಎಲ್ಲ ಸಿನಿಮಾಗಳಲ್ಲೂ ವಿಕ್ಕಿ ಅವರೇ ಮೊದಲ ಆಯ್ಕೆಯಾಗಿರುತ್ತಾರೆ’ ಎಂದು ಆದಿತ್ಯ ಹೇಳುತ್ತಾರೆ.

‘ಅಶ್ವತ್ಥಾಮ’ ಚಿತ್ರವು ಸೂಪರ್‌ ಹೀರೊ ಆ್ಯಕ್ಷನ್ ಸಿನಿಮಾ ಆಗಿರಲಿದೆ. ಅಶ್ವತ್ಥಾಮ ಸರಣಿಯಲ್ಲಿ ಮೂರು ಸಿನಿಮಾಗಳು ಮೂಡಿಬರುವ ನಿರೀಕ್ಷೆ ಇದೆ. ಆರಂಭದ ಎರಡು ಸಿನಿಮಾಗಳಿಗೆ ಜನರ ಸ್ಪಂದನೆ ಹೇಗಿರುತ್ತದೆ ಎಂಬುದನ್ನು ಗಮನಿಸಿ, ಮೂರನೆಯ ಸಿನಿಮಾ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ.

‘ಅಶ್ವತ್ಥಾಮನ ಕಥೆಯನ್ನು ಯಾರೂ ಯಾಕೆ ಇದುವರೆಗೆ ಸಿನಿಮಾ ರೂಪದಲ್ಲಿ ಹೇಳಿರಲಿಲ್ಲ ಎಂಬುದು ಆಶ್ಚರ್ಯದ ಸಂಗತಿ. ಪುರಾಣಗಳಲ್ಲಿ ಅದ್ಭುತವಾದ ಕಥೆಗಳಿವೆ. ಅವುಗಳನ್ನು ಆಧರಿಸಿ ಯಾರೂ ಸಿನಿಮಾ ಮಾಡಿರಲಿಲ್ಲ’ ಎಂದು ಹೇಳಿದ್ದಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.