ADVERTISEMENT

‘ಅವತಾರ ಪುರುಷ‘ ಶರಣ್‌ಗೆ ಚುಟು ಚುಟು ಖ್ಯಾತಿಯ ಆಶಿಕಾ ರಂಗನಾಥ್‌ ಜೋಡಿ

​ಪ್ರಜಾವಾಣಿ ವಾರ್ತೆ
Published 29 ಜನವರಿ 2020, 10:14 IST
Last Updated 29 ಜನವರಿ 2020, 10:14 IST
ಆಶಿಕಾ ಮತ್ತು ಶರಣ್‌
ಆಶಿಕಾ ಮತ್ತು ಶರಣ್‌   

‘ಅಧ್ಯಕ್ಷ ಇನ್‌ ಅಮೆರಿಕ’ ಸಿನಿಮಾ ಯಶಸ್ಸಿನ ನಂತರ ನಟ ಶರಣ್ ಬಹುಅವತಾರಗಳಲ್ಲಿ ಕಾಣಿಸಿಕೊಳ್ಳಲಿರುವಚಿತ್ರ ‘ಅವತಾರ ಪುರುಷ’ ಬಹುತೇಕ ಪೂರ್ಣಗೊಂಡಿದ್ದು, ಬೇಸಿಗೆಯಲ್ಲಿ ತೆರೆಗೆ ಬರುವ ನಿರೀಕ್ಷೆ ಇದೆ. ‘ರ‍್ಯಾಂಬೊ 2’ ಚಿತ್ರದಲ್ಲಿ ‘ಚುಟು ಚುಟು’ ಹಾಡಿಗೆ ಮೈಚಳಿ ಬಿಟ್ಟು ಕುಣಿದು ಕಮಾಲ್‌ ಮಾಡಿದ್ದ ಆಶಿಕಾ ರಂಗನಾಥ್‌ ಮತ್ತು ಶರಣ್‌ ಜೋಡಿ ಈ ಚಿತ್ರದಲ್ಲೂ ಮ್ಯಾಜಿಕ್‌ ಮಾಡಲು ಸಜ್ಜಾಗಿದೆ.

ಈ ಚಿತ್ರದ ಬಗ್ಗೆ ಶರಣ್‌ಹಲವು ಮಾಹಿತಿಗಳನ್ನು ‘ಸಿನಿಮಾ ಪುರವಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.

‘ಒಂದೊಂದು ಚಿತ್ರದಲ್ಲಿ ಒಂದೊಂದು ಅವತಾರದಲ್ಲಿ ಕಾಣಿಸಿಕೊಂಡಿದ್ದೇನೆ. ಈ ಚಿತ್ರದಲ್ಲಿ ಏಳೆಂಟು ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಎರಡು ಹಾಡುಗಳ ಚಿತ್ರೀಕರಣ ಬಾಕಿ ಇದೆ. ಇದು ಪೂರ್ಣಗೊಂಡದ ತಕ್ಷಣ ಡಬ್ಬಿಂಗ್‌ ನಡೆಯಲಿದೆ. ಎಲ್ಲವೂ ಯೋಜಿತವಾಗಿ ಆದರೆ ಬೇಸಿಗೆಗೆ ಪ್ರೇಕ್ಷಕರ ಮುಂದೆ ಬರಲಿದ್ದೇವೆ’ ಎಂದು ಅವರು ಮಾತಿಗಾರಂಭಿಸಿದರು.

ADVERTISEMENT

‘ಇದು ಬೇರೆಯ ರೀತಿಯ ಸಿನಿಮಾ. ನಾನು ಈವರೆಗೆ ಮಾಡಿರುವ ಪಾತ್ರಗಳಿಗೆ ಹೋಲಿಸಿದರೆ ಇದು ತುಂಬಾ ವಿಭಿನ್ನವಾಗಿದೆ. ನಾನು ನನ್ನ ವ್ಯಾಪ್ತಿ ಮೀರಿ ಪ್ರಯೋಗಕ್ಕೆ ಹೋಗುವುದಿಲ್ಲ. ನನ್ನ ಇತಿಮಿತಿಯೂ ನನಗೆ ಗೊತ್ತು. ಹಾಗಂಥ ಸಂಪೂರ್ಣ ಕಾಮಿಡಿ ಬಿಟ್ಟು ಹೋಗುವುದಿಲ್ಲ. ಇದು ಲವ್‌ ಸೆಂಟಿಮೆಂಟಾ, ಲವ್‌ ಸಸ್ಪೆನ್ಸಾ, ಲವ್‌ ಥ್ರಿಲ್ಲರಾ, ಲವ್‌ ಮಿಸ್ಟ್ರಿನಾ, ಲವ್‌ ಡ್ರಾಮಾನಾ ಎನ್ನುವಕುತೂಹಲ ಎಲ್ಲರಿಗೂ ಇದ್ದೇ ಇದೆ. ಈ ಅಂಶಗಳ ಜತೆಯಲ್ಲಿಮೊದಲ ಬಾರಿ ‘ಬ್ಲಾಕ್‌ ಮ್ಯಾಜಿಕ್‌’ ಕಥೆಯ ಚಿತ್ರದಲ್ಲಿ ನಟಿಸಿದ್ದೇನೆ’ ಎಂದರು.

‘ಕನ್ನಡದಲ್ಲಿ ಬ್ಲಾಕ್‌ ಮ್ಯಾಜಿಕ್‌ ಕಥೆಯ ಸಿನಿಮಾಗಳು ಇತ್ತೀಚೆಗೆ ಅಷ್ಟಾಗಿ ಬಂದಿಲ್ಲ. ಹಲವು ವರ್ಷಗಳ ನಂತರ ಇಂಥ ಸಿನಿಮಾ ಬರುತ್ತಿದೆ. ನಾನು ಫಿಕ್ಷನ್‌ ಸಿನಿಮಾ ಕೂಡ ಮಾಡಿರಲಿಲ್ಲ’ ಎನ್ನುವ ಮಾತು ಸೇರಿಸಿದರು ಶರಣ್‌.

ಈ ಚಿತ್ರಕ್ಕೆ ಸಿಂಪಲ್‌ ಸುನಿ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ‘ಸಿಂಪಲ್‌ ಸುನಿ ಮತ್ತು ನನ್ನ ಕಾಂಬಿನೇಷನ್‌ನ ಮೊದಲ ಚಿತ್ರವಿದು. ಸುನಿಯವರ ಚಾಪು ಈ ಚಿತ್ರದಲ್ಲಿ ಕಾಣಿಸಲಿದೆ. ರ‍್ಯಾಂಬೊ 2ರ ಛಾಯೆ ಮತ್ತು ಆ ಚಿತ್ರದ ಶೈಲಿಯ ಹಾಡುಗಳು ಇರುವುದಿಲ್ಲ. ಸಾಮಾನ್ಯ ಶೈಲಿಗಿಂತ ಇದರಲ್ಲಿ ವಿಭಿನ್ನ ಪ್ರಯತ್ನ ಮಾಡಿದ್ದೇವೆ’ ಎಂದರು.

ಹಿರಿಯ ನಟಿ ಭವ್ಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ.ಪುಷ್ಕರ್‌ ಮಲ್ಲಿಕಾರ್ಜುನಯ್ಯ ಬಂಡವಾಳ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.