ULLU, ರವಿ ಕಿಶನ್
ಬೆಂಗಳೂರು: ಅಶ್ಲೀಲ ವಿಡಿಯೊ ಕಂಟೆಂಟ್ ಅನ್ನೇ ಹೆಚ್ಚಾಗಿ ಪ್ರಸಾರ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಕಳೆದ ಬುಧವಾರ ALT, ULLU, ಸೇರಿದಂತೆ 25 ಒಟಿಟಿ ಪ್ಲಾಟ್‌ಫಾರ್ಮ್‌ಗಳ ಮೇಲೆ ನಿಷೇಧ ಹೇರಿ ಆದೇಶಿಸಿತ್ತು. ಈ ಆದೇಶವನ್ನು ಬಿಜೆಪಿ ಸಂಸದ ಹಾಗೂ ನಟ ರವಿ ಕಿಶನ್ ಸ್ವಾಗತಿಸಿದ್ದಾರೆ.
ಮನರಂಜನೆ ಎಂಬುದಕ್ಕೆ ಲಕ್ಷ್ಮಣ ರೇಖೆ ಇದೆ. ಹಾಗಾಗಿ ಒಟಿಟಿ ಹೆಸರು ಹೇಳಿಕೊಂಡು ಭಾರತದ ಸಂಸ್ಕೃತಿಗೆ ಮಸಿ ಬಳಿಯುವ ವಿಡಿಯೊ ಕಂಟೆಂಟ್‌ಗಳನ್ನು ಪ್ರಸಾರ ಮಾಡುವುದು ಸರಿ ಅಲ್ಲ ಎಂದು ಪ್ರತಿಪಾದಿಸಿದ್ದಾರೆ.
ನಿಷೇಧಕ್ಕೊಳಗಾದ ಒಟಿಟಿಗಳು, ಸಿನಿಮಾ, ವೆಬ್ ಸಿರೀಸ್ ಹೆಸರಿನಲ್ಲಿ ‘ಸಾಫ್ಟ್ ಪೋರ್ನ್’ ಅನ್ನೇ ವೀಕ್ಷಕರಿಗೆ ತೋರಿಸುತ್ತಿದ್ದವು. ಹೀಗಾಗಿ ಅನೇಕ ದೂರುಗಳ ಬಂದ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ಈ ದಿಟ್ಟ ಕ್ರಮ ಕೈಗೊಂಡಿದೆ ಎಂದು ಅವರು ಹೇಳಿರುವುದಾಗಿ ಸುದ್ದಿಸಂಸ್ಥೆ ಪಿಟಿಐ ಎಕ್ಸ್ ಪೋಸ್ಟ್ ಮಾಡಿದೆ.
ಅಶ್ಲೀಲ ವಿಡಿಯೊ ಕಂಟೆಂಟ್ ಅನ್ನು ಪರವಾನಗಿ ಇಲ್ಲದ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಅಷ್ಟೇ ಮಾಡುತ್ತಿರಲಿಲ್ಲ. ಪರವಾನಗಿ ಇದ್ದ ಒಟಿಟಿಗಳೂ ಮಾಡುತ್ತಿದ್ದವು ಎಂದು ಅವರು ತಿಳಿಸಿದ್ದಾರೆ.
ವಿವಿಧ ಕಾನೂನುಗಳನ್ನು ಉಲ್ಲಂಘಿಸಿದ್ದಕ್ಕಾಗಿ ನಿಷೇಧಕ್ಕೊಳಗಾದ ಆ್ಯಪ್‌ಗಳ ಪಟ್ಟಿಯಲ್ಲಿ ALTT (ALTBalaji), Ullu, Big Shots App, Desiflix, Boomex, NeonX VIP, Navarasa Lite, Gulab App, Kangan App, Bull App, ShowHit, Jalva App, Wow Entertainment, Look Entertainment, Hitprime, Fugi, Feneo, ShowX, Sol Talkies, Adda TV, HotX VIP, Hulchul App, MoodX, Triflicks, Mojflix
ಲೈಂಗಿಕತೆಗೆ ಸಂಬಂಧಿಸಿದ ಅಶ್ಲೀಲ ವಿಡಿಯೊಗಳ ಸುಲಭ ಲಭ್ಯತೆಗೆ ಕಡಿವಾಣ ಹಾಕಲು ಮತ್ತು ಡಿಜಿಟಲ್ ಕಂಟೆಂಟ್‌ಗಳು ಕಾನೂನು ಮತ್ತು ಸಭ್ಯತೆಯ ಮಿತಿ ಮೀರದಿರಲಿ ಎಂಬ ಉದ್ದೇಶದಿಂದ ನಿಷೇಧ ಹೇರಲಾಗಿದೆ ಎಂದು ಇಲಾಖೆ ತಿಳಿಸಿತ್ತು.
ಕೇಂದ್ರ ಗೃಹ ಸಚಿವಾಲಯ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತಿತರ ಇಲಾಖೆಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಈ ಒಟಿಟಿ ವೇದಿಕೆಗಳ ನಿಷೇಧಕ್ಕೆ ಆದೇಶ ನೀಡಿತ್ತು.
ರವಿ ಕಿಶನ್ ಅವರು ಪ್ರಸ್ತುತ ಉತ್ತರ ಪ್ರದೇಶದ ಗೋರಕಪುರದ ಬಿಜೆಪಿ ಸಂಸದರಾಗಿದ್ದಾರೆ. ಕನ್ನಡದ ಹಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.