
ಬೆಂಗಳೂರು: 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಜ.29ರಿಂದ ಪ್ರಾರಂಭವಾಗಲಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ವಿಧಾನಸೌಧದ ಮುಂದೆ ಚಾಲನೆ ನೀಡಲಿದ್ದಾರೆ. ಈ ವರ್ಷ ಅಮೆರಿಕ, ಜರ್ಮನಿ, ಫ್ರಾನ್ಸ್, ಇರಾನ್ ಸೇರಿದಂತೆ 70 ದೇಶಗಳ 225 ಸಿನಿಮಾಗಳು ಪ್ರದರ್ಶನಗೊಳ್ಳಲಿವೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿ ಬಿ.ಬಿ. ಕಾವೇರಿ ತಿಳಿಸಿದರು.
ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸ್ತ್ರೀ ಎಂದರೆ ಅಷ್ಟೇ ಸಾಕೆ’ ಎಂಬ ಧ್ಯೇಯದಡಿ ಈ ವರ್ಷದ ಚಿತ್ರೋತ್ಸವ ನಡೆಯಲಿದೆ. ಉದ್ಘಾಟನಾ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಉಪಸ್ಥಿತರಿರುತ್ತಾರೆ. ಬಹುಭಾಷಾ ನಟ ಪ್ರಕಾಶ್ ರಾಜ್ ರಾಯಭಾರಿಯಾಗಿದ್ದು, ನಟಿ ರುಕ್ಮಿಣಿ ವಸಂತ್ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಲಿದ್ದಾರೆ’ ಎಂದರು.
‘ಜ.29ರಿಂದ ಫೆ.6ರವರೆಗೆ ರಾಜಾಜಿನಗರದ ಲುಲು ಮಾಲ್‌ನ 11 ಸ್ಕ್ರೀನ್‌ಗಳಲ್ಲಿ ಚಿತ್ರಗಳ ಪದರ್ಶನ ನಡೆಯಲಿದೆ. ಒರಾಯನ್ ಮಾಲ್‌ನಲ್ಲಿ ಸಿನಿಮಾಗಳ ಪ್ರದರ್ಶನಕ್ಕೆ ಹೆಚ್ಚು ಸ್ಥಳಾವಕಾಶವಿತ್ತು. ಆದರೆ ಊಟೋಪಚಾರ ಸೇರಿದಂತೆ ಇತರ ಕಾರ್ಯಗಳಿಗೆ ತೊಂದರೆಯಾಗುತ್ತಿತ್ತು. ಹೀಗಾಗಿ ಈ ಸಲ ಚಿತ್ರೋತ್ಸವದ ಸ್ಥಳ ಬದಲಿಸಿದ್ದೇವೆ. ಚಿತ್ರ ಪ್ರದರ್ಶನಗಳ ದೃಷ್ಟಿಯಿಂದ ಈ ವರ್ಷ ಚಿತ್ರೋತ್ಸವವನ್ನು ಒಂದು ದಿನ ವಿಸ್ತರಿಸಲಾಗಿದೆ. ಚಾಮರಾಜಪೇಟೆಯ ಕಲಾವಿದರ ಸಂಘ, ಸುಚಿತ್ರ ಫಿಲ್ಮ್ ಸೊಸೈಟಿಗಳಲ್ಲಿಯೂ ಚಿತ್ರ ಪ್ರದರ್ಶನವಿರಲಿದೆ’ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ತಿಳಿಸಿದರು.
‘ಸ್ತ್ರೀ’ ಕುರಿತಾದ ವಿಚಾರಗಳನ್ನು ಹೊಂದಿರುವ 60 ಚಿತ್ರಗಳು ಈ ಸಲ ಪ್ರದರ್ಶನಗೊಳ್ಳಲಿವೆ. ಇದರಲ್ಲಿ ಬಹುಪಾಲು ನಿರ್ದೇಶಕಿಯರ ಸಿನಿಮಾಗಳು. ನಿರ್ದೇಶಕರ ಸಿನಿಮಾಗಳೂ ಒಂದಷ್ಟಿವೆ. ಸಂಕಲನಕಾರ ಶ್ರೀಕರ ಪ್ರಸಾದ್, ಮಲಯಾಳದ ಜನಪ್ರಿಯ ನಿರ್ದೇಶಕ ಮಹೇಶ್ ನಾರಾಯಣ್, ನಿರ್ದೇಶಕ ಅನುರಾಗ್ ಕಶ್ಯಪ್ ಸೇರಿದಂತೆ ಚಿತ್ರೋದ್ಯಮದ ಅನೇಕ ತಜ್ಞರು ಮಾಸ್ಟರ್ ಕ್ಲಾಸ್ ನಡೆಸಿಕೊಡಲಿದ್ದಾರೆ’ ಎಂದು ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ಮುರಳಿ ಪಿ.ಬಿ ತಿಳಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹೇಮಂತ್ ನಿಂಬಾಳ್ಕರ್ ಹಾಜರಿದ್ದರು.
ಪಾರದರ್ಶಕ ಪ್ರಕ್ರಿಯೆ: ‘ಈ ಸಲ ಸಿನಿಮಾಗಳ ಆಯ್ಕೆಯಲ್ಲಿ ಯಾವುದೇ ಒತ್ತಡಕ್ಕೆ ಮಣಿದಿಲ್ಲ. ಅತ್ಯಂತ ಪಾರದರ್ಶಕವಾಗಿ ಅರ್ಹ ಸಿನಿಮಾಗಳನ್ನು ಆಯ್ಕೆ ಮಾಡಿದ್ದೇವೆ. ಕಳೆದ ವರ್ಷದ ನ್ಯೂನತೆಗಳನ್ನು ಸರಿಪಡಿಸಿದ್ದೇವೆ. ನಟ್ಟು, ಬೋಲ್ಟ್ ಮುಗಿದ ಅಧ್ಯಾಯ. ಎಲ್ಲ ಹಿರಿಯ ಕಲಾವಿದರನ್ನು ಆಹ್ವಾನಿಸುತ್ತೇವೆ. 50 ವರ್ಷಗಳ ಸಿನಿಮಾ ಪಯಣದ ಸುವರ್ಣ ಸಂಭ್ರಮ ನಡೆಯಲಿದೆ. ಚಿತ್ರೋದ್ಯಮದಲ್ಲಿ 50 ವರ್ಷ ಪೂರೈಸಿದ ಕನ್ನಡ ಕಲಾವಿದ, ತಂತ್ರಜ್ಞರ ಸಿನಿಮಾಗಳನ್ನು ಪ್ರದರ್ಶನ ಮಾಡುತ್ತೇವೆ. ಚಿತ್ರೋತ್ಸವದ ನೋಂದಣಿ ಪ್ರಾರಂಭಗೊಂಡಿದೆ. ಚಿತ್ರೋತ್ಸವದ ಜಾಲತಾಣದಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಚಿತ್ರೋದ್ಯಮ ಕ್ಷೇತ್ರದವರಿಗೆ ರಿಯಾಯಿತಿ ಇರುತ್ತದೆ’ ಎಂದು ಸಾಧು ಕೊಕಿಲ ತಿಳಿಸಿದರು.
ಪ್ರತಿ ವರ್ಷದಂತೆ ಈ ವರ್ಷವೂ ಕನ್ನಡ, ಭಾರತೀಯ, ಏಷ್ಯನ್ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, 45 ಸಿನಿಮಾಗಳನ್ನು ಆಯ್ಕೆ ಮಾಡಲಾಗಿದೆ. ‘ಕಾಂತಾರ ಅಧ್ಯಾಯ–1’, ‘ಎಕ್ಸ್ & ವೈ’, ‘ಫೈರ್ ಫ್ಲೈ’ ‘ರೂಬಿ ಕ್ಯೂಬ್’, ಸೇರಿದಂತೆ ಒಟ್ಟು 15 ಸಿನಿಮಾಗಳು ಕನ್ನಡ ವಿಭಾಗದ ಸ್ಪರ್ಧೆಯಲ್ಲಿವೆ. ಕನ್ನಡದ ‘ನಮ್ ಸಾಲಿ’, ಮಲಯಾಳದ 6 ಸಿನಿಮಾಗಳು ಸೇರಿದಂತೆ 15 ಸಿನಿಮಾಗಳು ಭಾರತೀಯ ಸಿನಿಮಾ ಸ್ಪರ್ಧಾ ವಿಭಾಗದಲ್ಲಿವೆ. ಏಷ್ಯನ್ ವಿಭಾಗದಲ್ಲಿ ಕನ್ನಡ ‘ವಾಘಚಿಪಾಣಿ’ ಜಾಗ ಪಡೆದಿದೆ. ಈ ವಿಭಾಗದಲ್ಲಿ 15 ಸಿನಿಮಾಗಳಲ್ಲಿ ಒಟ್ಟು 6 ಭಾರತೀಯ ಸಿನಿಮಾಗಳು ಸ್ಪರ್ಧೆಯಲ್ಲಿವೆ.
ಎಕ್ಸ್ & ವೈ
ರೂಬಿ ಕ್ಯೂಬ್
ಲವ್ ಯು ಮುದ್ದು
ತೀರ್ಥರೂಪ ತಂದೆಯವರಿಗೆ
ಮೃಗತೃಷ್ಣ
ಕಾಂತಾರ ಒಂದು ದಂತ ಕಥೆ ಅಧ್ಯಾಯ ಒಂದು
ನಮ್ ಸಾಲಿ
ರಾವಣ ರಾಜ್ಯದಲ್ಲಿ ನವದಂಪತಿಗಳು
ಅಜ್ಞಾತವಾಸಿ
4 ಬೈ 4
ಖಾಲಿ ಪುಟ
ಶ್ರೀ ಜಗನ್ನಾಥ ದಾಸರು ಭಾಗ 2
ಫೈರ್ ಫ್ಲೈ
ವನ್ಯಾ
ಹಕ್ಕಿಗಾಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.