ADVERTISEMENT

ಭರ ಭರ ಭರಾಟೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2019, 9:24 IST
Last Updated 3 ಅಕ್ಟೋಬರ್ 2019, 9:24 IST
‘ಭರಾಟೆ’ ಚಿತ್ರದಲ್ಲಿ ಶ್ರೀಮುರಳಿ ಮತ್ತು ಶ್ರೀಲೀಲಾ
‘ಭರಾಟೆ’ ಚಿತ್ರದಲ್ಲಿ ಶ್ರೀಮುರಳಿ ಮತ್ತು ಶ್ರೀಲೀಲಾ   

‘ಚಂದ್ರ ಚಕೋರಿ’ ನಟ ಶ್ರೀಮುರಳಿ ನಟಿಸಿದ ಮೊದಲ ಚಿತ್ರ. ಕೌಟುಂಬಿಕ ಮೌಲ್ಯಗಳ ಸುತ್ತ ಹೊಸೆದ ಈ ಸಿನಿಮಾ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು. ಆ ಬಳಿಕ ಹಲವು ಚಿತ್ರಗಳಲ್ಲಿ ನಟಿಸಿದರು. ಸೋಲುಗಳ ಸಂಕೋಲೆಯಲ್ಲಿ ಬಂದಿಯಾಗಿದ್ದ ಅವರನ್ನು ಕೈಹಿಡಿದು ಗೆಲುವಿನ ದಡ ಸೇರಿಸಿದ ಚಿತ್ರ ‘ಉಗ್ರಂ’. ಆ ನಂತರ ತೆರೆಕಂಡ ‘ರಥಾವರ’, ‘ಮಫ್ತಿ’ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಜೋರಾಗಿಯೇ ಸದ್ದು ಮಾಡಿದವು. ಈ ಮೂರೂ ಚಿತ್ರದಲ್ಲೂ ಅವರದು ರಗಡ್‌ ಲುಕ್.

ಬಹುನಿರೀಕ್ಷಿತ ‘ಭರಾಟೆ’ ಚಿತ್ರದ ಮೂಲಕ ಈ ಇಮೇಜ್‌ನಿಂದ ಹೊರಬರುವ ತವಕದಲ್ಲಿದ್ದಾರೆ ಶ್ರೀಮುರಳಿ. ನಿಯೋ ನೋಯಿರ್‌ ಆ್ಯಕ್ಷನ್ ಥ್ರಿಲ್ಲರ್‌ ಕಥಾವಸ್ತು ಹೊಂದಿದ್ದ ‘ಮಫ್ತಿ’ ತೆರೆಕಂಡಿದ್ದು ಎರಡು ವರ್ಷದ ಹಿಂದೆ. ಹಾಗಾಗಿ, ‘ಭರಾಟೆ’ ಮೇಲೆ ನಿರೀಕ್ಷೆ ಹೆಚ್ಚಿದೆ.

ಚೇತನ್‌ಕುಮಾರ್‌ ನಿರ್ದೇಶನದ ಈ ಚಿತ್ರ ಅಕ್ಟೋಬರ್‌ನಲ್ಲಿ ತೆರೆಕಾಣುವ ನಿರೀಕ್ಷೆಯಿದೆ.

ADVERTISEMENT

‘ಬಹದ್ದೂರ್‌’ ಚಿತ್ರದಲ್ಲಿ ಅಪ್ಪ–ಮಗಳ ಕಥನ ಹಾಗೂ ‘ಭರ್ಜರಿ’ ಸಿನಿಮಾದಲ್ಲಿ ತಾಯಿ– ಮಗಳ ಎಮೋಷನ್‌ ಅನ್ನು ಹದವಾಗಿ ಬೆರೆಸಿದ್ದ ಅವರು, ಶ್ರೀಮುರಳಿ ಮೂಲಕ ಕೌಟುಂಬಿಕ ಬಾಂಧವ್ಯದ ಕಥನ ಕಟ್ಟಿಕೊಡಲು ಸಜ್ಜಾಗಿದ್ದಾರೆ.

‘ಭರಾಟೆ ಚಿತ್ರದಲ್ಲಿ ಐದು ಹಾಡುಗಳಿದ್ದು, ಈಗಾಗಲೇ ಮೂರು ಹಾಡುಗಳನ್ನು ಬಿಡುಗಡೆ ಮಾಡಲಾಗಿದೆ. ಸಾಂಗ್‌ಗಳಿಗೆ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯ ಸಿಕ್ಕಿದೆ. ಇನ್ನೊಂದು ಟ್ರೇಲರ್‌ ಬಿಡುಗಡೆಗೆ ಸಿದ್ಧತೆ ನಡೆದಿದೆ. ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ ಪ್ರಮಾಣ ಪತ್ರ ಸಿಕ್ಕಿದ ತಕ್ಷಣವೇ ಬಿಡುಗಡೆಯ ದಿನಾಂಕ ಘೋಷಿಸಲಾಗುವುದು’ ಎನ್ನುತ್ತಾರೆ ಅವರು.

ಪ್ರಸ್ತುತ ಕೌಟುಂಬಿಕ ಸಂಬಂಧಗಳು ದಿಕ್ಕು ತಪ್ಪಿವೆ. ಮಾನವೀಯ ಮೌಲ್ಯಗಳಿಂದ ಮಕ್ಕಳ ದೂರ ಸರಿಯುತ್ತಿದ್ದಾರೆ. ‘ಭರಾಟೆ’ಯ ಕಥೆ ಇದರ ಸುತ್ತವೇ ಸುತ್ತಲಿದೆಯಂತೆ. ತಾತ– ಮೊಮ್ಮಗ, ಅಪ್ಪ– ಮಗನ ಸಂಬಂಧ ಕುರಿತು ಈ ಚಿತ್ರ ಹೇಳುತ್ತದೆ. ಮಕ್ಕಳು, ಯುವಜನರು ಕಳೆದುಕೊಳ್ಳುತ್ತಿರುವ ಬಾಂಧವ್ಯದ ಮಹತ್ವ ಸಾರುತ್ತದೆ. ಇದು ಅನ್ಯಾಯ ಮತ್ತು ಅನ್ಯಾಯದ ನಡುವಿನ ಹೋರಾಟದ ಕಥನ ಎಂದು ಚಿತ್ರತಂಡ ಹೇಳಿಕೊಂಡಿದೆ.

ಶ್ರೀಲೀಲಾ ಈ ಚಿತ್ರದ ನಾಯಕಿ. ಸುಪ್ರೀತ್‌ ಬಂಡವಾಳ ಹೂಡಿದ್ದಾರೆ. ಸಾಯಿಕುಮಾರ್‌, ರವಿಶಂಕರ್‌ ಮತ್ತು ಅಯ್ಯಪ್ಪ ಈ ಮೂವರು ಸಹೋದರರು ಮೊದಲ ಬಾರಿಗೆ ಇದರಲ್ಲಿ ಒಟ್ಟಾಗಿ ನಟಿಸಿರುವುದು ವಿಶೇಷ.

ರಚಿತಾ ರಾಮ್‌ ಅತಿಥಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಗಿರೀಶ್‌ ಗೌಡ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.