ADVERTISEMENT

ಬೀರ್‌ಬಲ್‌: ಚಳಿಯ ಕಾಲಕ್ಕೊಂದು ಬಿಯರ್‌!

ವಿಜಯ್ ಜೋಷಿ
Published 18 ಜನವರಿ 2019, 10:17 IST
Last Updated 18 ಜನವರಿ 2019, 10:17 IST
ಎಂ.ಜಿ. ಶ್ರೀನಿವಾಸ್ ಮತ್ತು ರುಕ್ಮಿಣಿ ವಸಂತ್
ಎಂ.ಜಿ. ಶ್ರೀನಿವಾಸ್ ಮತ್ತು ರುಕ್ಮಿಣಿ ವಸಂತ್   

ರಾಜ್ಯದ ಬಹುತೇಕ ಕಡೆ ಚಳಿರಾಯನ ಆರ್ಭಟ ಜೋರಾಗಿದೆ. ಒಂದೆರಡು ದಿನ ಕಡಿಮೆ ಅನಿಸಿದರೂ, ಚಳಿ ಮತ್ತೆ ಜಾಸ್ತಿಯಾಗಿ ಮೈ–ಮನಸ್ಸುಗಳಲ್ಲಿ ನಡುಕ ಆರಂಭವಾಗುತ್ತದೆ. ಈ ನಡುಕ ಹೋಗಲಾಡಿಸಬೇಕು ಎಂದೇ ‘ಬೀರ್‌ಬಲ್’ ಬಂದಿದೆ!

ವಕೀಲ ಪಾತ್ರವೊಂದು ಮಾಮೂಲಿ ಕೊಲೆ ಪ್ರಕರಣದ ಬೆನ್ನುಹತ್ತುವಂತೆ ಮಾಡಿ, ಆ ಕೊಲೆಯ ಹಿಂದಿನ ನೂರೆಂಟು ಸಿಕ್ಕುಗಳನ್ನು ವೀಕ್ಷಕರೆದುರು ತೆರೆದಿರಿಸಿ, ನಡುನಡುವೆ ಸಿನಿಮಾ ಕಥೆಗೆ ಅನಿರೀಕ್ಷಿತ ತಿರುವುಗಳನ್ನು ಕೊಟ್ಟು ಮಿದುಳಿಗೆ ಒಂದಿಷ್ಟು ಕೆಲಸ ಕೊಡುತ್ತದೆ. ಹಾಗೆ ಮಾಡಿ, ಮನಸ್ಸಿನ ಚಳಿಯನ್ನು ಹೊಡೆದೋಡಿಸುವ ಯತ್ನ ನಡೆಸಿದೆ ಈ ಸಿನಿಮಾ.

ಎಡೆಬಿಡದೆ ಮಳೆ ಸುರಿಯುತ್ತಿದ್ದ ಒಂದು ರಾತ್ರಿ ಬೆಂಗಳೂರಿನಲ್ಲಿ ಒಬ್ಬ ಟ್ಯಾಕ್ಸಿ ಚಾಲಕನ ಕೊಲೆ ಆಗುತ್ತದೆ. ಆ ಕೊಲೆ ಆಗಿದ್ದು ನಿರ್ದಿಷ್ಟ ಉದ್ದೇಶ ಇಟ್ಟುಕೊಂಡು. ಆದರೆ, ಕೊಲೆ ಮಾಡಿದ ಆರೋಪವನ್ನು ಅಮಾಯಕನ (ವಿಷ್ಣು ಎಂಬ ಪಾತ್ರ) ಮೇಲೆ ಕಟ್ಟಿ,ಆತನಿಗೆ ಟ್ಯಾಕ್ಸಿ ಚಾಲಕನ ಮೇಲೆ ಹೇಳಿಕೊಳ್ಳುವಂಥ ದ್ವೇಷವೇನೂ ಇರಲಿಲ್ಲ, ಆತ ಆವೇಶದಲ್ಲಿ ಕೊಲೆ ಮಾಡಿಬಿಟ್ಟ ಎಂದು ಸಾಬೀತು ಮಾಡುತ್ತದೆ ಪೊಲೀಸ್ ವ್ಯವಸ್ಥೆ.

ADVERTISEMENT

ಇಲ್ಲಿಂದ ಕಥೆ ಆರಂಭವಾಗುತ್ತದೆ. ಜೊತೆಗೇ, ವಕೀಲ ಮಹೇಶ್ ದಾಸ್ (ಎಂ.ಜಿ. ಶ್ರೀನಿವಾಸ್) ಪಾತ್ರದ ಪ್ರವೇಶ ಕೂಡ. ‘ಹೆಗ್ಡೆ & ಹೆಗ್ಡೆ’ ಕಾನೂನು ಸಂಸ್ಥೆ ಸೇರಿಕೊಂಡು ವಿಷ್ಣುವನ್ನು ಕೊಲೆಗಾರ ಎಂಬ ಪಟ್ಟದಿಂದ ಪಾರು ಮಾಡುವ ಕೆಲಸ ಆರಂಭಿಸುತ್ತಾನೆ ಮಹೇಶ್ ದಾಸ್.

ಚಿತ್ರದ ನಾಯಕಿಯ ಪಾತ್ರ ನಿಭಾಯಿಸಿರುವುದು ರುಕ್ಮಿಣಿ ವಸಂತ್. ನಾಯಕ–ನಾಯಕಿ ಇದ್ದಾರೆ ಅಂದಮಾತ್ರಕ್ಕೆ ಇಲ್ಲಿ ರೊಮ್ಯಾಂಟಿಕ್ ದೃಶ್ಯಗಳ ನಿರೀಕ್ಷೆ ಬೇಡ. ಅಂತಹ ದೃಶ್ಯಗಳಿಗೆ ಇದರಲ್ಲಿ ಮಹತ್ವವಿಲ್ಲ. ಇಲ್ಲಿ ನಾಯಕ–ನಾಯಕಿ ನಡುವೆ ಪ್ರೇಮ ಇದ್ದರೂ, ಅವರಿಬ್ಬರು ಪ್ರೀತಿ–ಪ್ರೇಮಕ್ಕಿಂತ ಹೆಚ್ಚು ಗಾಢವಾಗಿ ಮಾತನಾಡುವುದು ಕೊಲೆ ಪ್ರಕರಣದ ತನಿಖೆ ಬಗ್ಗೆ, ಕಾನೂನಿನ ವಿವಿಧ ಸೆಕ್ಷನ್ನುಗಳ ಬಗ್ಗೆ! ಹೀಗಿದ್ದರೂ, ಹರೆಯದ ಹುಡುಗರ ಮನಸ್ಸಿನಲ್ಲಿ ಕಚಗುಳಿ ಸೃಷ್ಟಿಸುತ್ತಾರೆ ರುಕ್ಮಿಣಿ!

ಅಸಲಿ ಕೊಲೆಗಾರ ಯಾರು, ಕೊಲೆ ಮಾಡಿದ ಉದ್ದೇಶ ಏನು ಎಂಬುದೇ ಕಥೆಯ ತಿರುಳಾಗಿರುವ ಕಾರಣ, ವೀಕ್ಷಕರನ್ನು ಮತ್ತೆ ಮತ್ತೆ ಕುರ್ಚಿಯ ಅಂಚಿಗೆ ತರಿಸುತ್ತದೆ ‘ಬೀರ್‌ಬಲ್‌’ ಸಿನಿಮಾ. ಆದರೆ ಕೋರ್ಟ್‌ನಲ್ಲಿ ವಾದ ಮಂಡಿಸುವ ಸಂದರ್ಭದಲ್ಲಿ ವಕೀಲ ಮಹೇಶ್ ದಾಸ್ ಕಾನೂನಿನ ಬಗ್ಗೆ ಭಾವುಕವಾಗಿ ಮಾತನಾಡಿ, ‘ಇದು ಇಂಪ್ರ್ಯಾಕ್ಟಿಕಲ್ ಮಾತು’ ಎಂಬ ಭಾವನೆ ಮೂಡಿಸುತ್ತಾರೆ.

ಸಿನಿಮಾದ ಕೆಲವು ದೃಶ್ಯಗಳ ಅವಧಿ ತಗ್ಗಿಸಿ, ಒಟ್ಟಾರೆ ಸಿನಿಮಾವನ್ನು ಇನ್ನೂ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಬಹುದಿತ್ತು ಅನಿಸುತ್ತದೆ. ಆದರೆ ಸಿನಿಮಾದ ನಡುನಡುವೆ ಕಾಣಿಸಿಕೊಳ್ಳುವ ಅನಿರೀಕ್ಷಿತ ತಿರುವುಗಳು ‘ದೀರ್ಘಾವಧಿ’ಯ ಬೇಸರವನ್ನು ಕಡಿಮೆ ಮಾಡುತ್ತವೆ.

ನಾಯಕನ ಪಾತ್ರವನ್ನು ತೀರಾ ವಿಜೃಂಭಿಸಬೇಕು ಎಂಬ ಹಂಬಲ ಇಲ್ಲದ, ಎಲ್ಲರೂ ಕೂತು ನೋಡಬಹುದಾದ, ಬುದ್ಧಿಗೊಂದಷ್ಟು ಕೆಲಸ ಕೊಡುವ ಸಿನಿಮಾ ಇದು – ಚಳಿಯ ಕಾಲಕ್ಕೊಂದು ಬೆಚ್ಚಗಿನ ಬಿಯರ್‌ ಇದು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.