ನಟ ಗೋವಿಂದ ಮತ್ತು ಪತ್ನಿ ಸುನೀತಾ ಅಹುಜಾ
–ಇನ್‌ಸ್ಟಾಗ್ರಾಮ್ ಚಿತ್ರ
ಮುಂಬೈ: ಬಾಲಿವುಡ್ ನಟ-ರಾಜಕಾರಣಿ ಗೋವಿಂದ ಅಹುಜಾ ಮತ್ತು ಸುನೀತಾ ಅಹುಜಾ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದ್ದು, ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ ಎಂಬ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಗೋವಿಂದ–ಸುನೀತಾ ದಂಪತಿಯ ವಿಚ್ಛೇದನದ ಊಹಾಪೋಹಗಳು ಹರಿದಾಡುತ್ತಿವೆ. ಈ ವಿಚಾರವಾಗಿ ನಟನ ಮ್ಯಾನೇಜರ್ ಶಶಿ ಸಿನ್ಹಾ ಪ್ರತಿಕ್ರಿಯಿಸಿದ್ದು, ‘ಇದು ಹಳೆಯ ಸುದ್ದಿಯಾಗಿದೆ. ಗೋವಿಂದ–ಸುನೀತಾ ದಂಪತಿಯು ಒಟ್ಟಿಗೆ ಇದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
‘ಇದು ಆರು-ಏಳು ತಿಂಗಳ ಹಿಂದೆ ಹೊರಬಂದ ಹಳೆಯ ಸುದ್ದಿ. ಸುನೀತಾ ಆರು-ಏಳು ತಿಂಗಳ ಹಿಂದೆ ವಿಚ್ಛೇದನ ಅರ್ಜಿ ಸಲ್ಲಿಸಿದ್ದರು. ಈಗ ಎಲ್ಲವೂ ಇತ್ಯರ್ಥವಾಗುತ್ತಿದೆ. ಒಂದು ವಾರದಲ್ಲಿ ಎಲ್ಲರಿಗೂ ಈ ಸುದ್ದಿ ತಿಳಿಯುತ್ತದೆ’ ಎಂದು ಶಶಿ ಸಿನ್ಹಾ ತಿಳಿಸಿದ್ದಾರೆ.
‘ಇಡೀ ಕುಟುಂಬವು ಗಣೇಶ ಚತುರ್ಥಿ ಹಬ್ಬವನ್ನು ಒಟ್ಟಿಗೆ ಆಚರಿಸಲಿದೆ. ಇದಕ್ಕಾಗಿ ಸುನೀತಾ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.
2024ರ ಡಿಸೆಂಬರ್ 5ರಂದು ಸುನೀತಾ ಅವರು ಬಾಂದ್ರಾದ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ಸುದ್ದಿವಾಹಿನಿಯೊಂದು ವರದಿ ಮಾಡಿದೆ.
ಗೋವಿಂದ ಅವರ ವಕೀಲ ಲಲಿತ್ ಬಿಂದಾಲ್ ಕೂಡ ವಿಚ್ಛೇದನ ವರದಿಯನ್ನು ತಳ್ಳಿಹಾಕಿದ್ದಾರೆ. ಪ್ರಕರಣ ಸಂಬಂಧ ಇದುವರೆಗೆ ಗೋವಿಂದ–ಸುನೀತಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
1987ರಲ್ಲಿ ಗೋವಿಂದ–ಸುನೀತಾ ಮದುವೆಯಾಗಿದ್ದರು. ದಂಪತಿಗೆ ಟೀನಾ ಮತ್ತು ಯಶವರ್ಧನ್ ಎಂಬ ಇಬ್ಬರು ಮಕ್ಕಳಿದ್ದಾರೆ.ಗೋವಿಂದ ಮತ್ತು ಸುನೀತಾ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ ಎಂದು ಫೆಬ್ರುವರಿಯಲ್ಲಿ ಮಾಧ್ಯಮಗಳು ವರದಿ ಮಾಡಿದ್ದವು.
1990ರ ದಶಕದಲ್ಲಿ ಬಾಲಿವುಡ್‌ನ ಪ್ರಮುಖ ತಾರೆಗಳಲ್ಲಿ ಒಬ್ಬರಾಗಿದ್ದ ಗೋವಿಂದ ಅವರು ಕೊನೆಯದಾಗಿ 2019ರಲ್ಲಿ ತೆರಕಂಡ ‘ರಂಗೀಲಾ ರಾಜ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ 2024ರಲ್ಲಿ ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಸದ್ಯ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.