
ರಿಮಿ ಸೇನ್
ಬಾಲಿವುಡ್‌ನ ಸ್ಟಾರ್ ನಟರೊಂದಿಗೆ ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಂಡಿದ್ದ ನಟಿ ರಿಮಿ ಸೇನ್ ಈಗ ದುಬೈನಲ್ಲಿ ಪ್ರಮುಖ ರಿಯಲ್ ಎಸ್ಟೇಟ್ ಏಜೆಂಟ್ ಆಗಿದ್ದಾರೆ. ಸಂದರ್ಶನವೊಂದರಲ್ಲಿ ತಮ್ಮ ರಿಯಲ್ ಎಸ್ಟೇಟ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ರಿಮಿ ಸೇನ್ ದುಬೈನಲ್ಲಿ ನಡೆಯುವ ಕಟ್-ಥ್ರೋಟ್ ರಿಯಲ್ ಎಸ್ಟೇಟ್ ವ್ಯವಹಾರಗಳು ಹಾಗೂ ಅದರಲ್ಲಿ ಅವರು ಪಳಗಿದ್ದು ಹೇಗೆ ಎಂಬುದರ ಕುರಿತು ಹಂಚಿಕೊಂಡಿದ್ದಾರೆ.
‘ದುಬೈನ ಜನಸಂಖ್ಯೆಯ ಶೇ 95ರಷ್ಟು ವಲಸಿಗರಿದ್ದಾರೆ. ಉಳಿದವರು ಮೂಲ ನಿವಾಸಿಗಳಾಗಿದ್ದಾರೆ. ದುಬೈ ಎಲ್ಲರನ್ನು ಪ್ರೀತಿಯಿಂದ ಸ್ವಾಗತಿಸುತ್ತದೆ. ಇಲ್ಲಿ ಮಸೀದಿಗಳಿವೆ, ದೇವಾಲಯಗಳೂ ಇವೆ. ಅವರು ಎಲ್ಲರ ಬಗ್ಗೆ ಯೋಚಿಸುತ್ತಾರೆ. ಜನರ ಜೀವನವನ್ನು ಉತ್ತಮ ಪಡಿಸುವುದು, ಆರಾಮದಾಯಕವಾಗಿಸುವುದು ಹೇಗೆ ಎಂಬುದರ ಮೇಲೆ ಹೆಚ್ಚು ಗಮನವಹಿಸುತ್ತಾರೆ’ ಎಂದು ಬಿಲ್ಡ್‌ಕ್ಯಾಪ್ಸ್ ರಿಯಲ್ ಎಸ್ಟೇಟ್ ಎಲ್‌ಎಲ್‌ಸಿ ಜೊತೆಗಿನ ಸಂಭಾಷಣೆಯಲ್ಲಿ ರಿಮಿ ಸೇನ್ ಹೇಳಿದ್ದಾರೆ.
’ನಮ್ಮ ದೇಶದಲ್ಲಿ ಇದನ್ನು ನಿಜವಾಗಿಯೂ ಕಾಣಲು ಸಾಧ್ಯವಿಲ್ಲ. ಏಕೆಂದರೆ ಸರ್ಕಾರವು ರಾತ್ರೋರಾತ್ರಿ ನೀತಿಗಳನ್ನು ಬದಲಾಯಿಸುತ್ತಲೇ ಇರುತ್ತದೆ. ಇದು ಜನರ ಜೀವನವನ್ನು ಹೆಚ್ಚು ಕಷ್ಟಕರವಾಗಿಸುತ್ತದೆ. ಇದರಿಂದಾಗಿ ನಮ್ಮ ರಾಷ್ಟ್ರ ವ್ಯಾಪಾರ ಸ್ನೇಹಿಯಾಗಿಲ್ಲ.’ ಎಂದು ಹೇಳಿದ್ದಾರೆ.
ದುಬೈನಲ್ಲಿ ರಿಯಲ್ ಎಸ್ಟೇಟ್ ಮಾರುಕಟ್ಟೆ ಸರಾಗವಾಗಿ ಕಾರ್ಯನಿರ್ವಹಿಸುತ್ತದೆ. ಏಕೆಂದರೆ ಇಲ್ಲಿ ಶಿಸ್ತು ಇದೆ. ನೀವು ಏಜೆಂಟ್‌ಗಳು ಮತ್ತು ಏಜೆನ್ಸಿಗಳೊಂದಿಗೆ ಮಾತ್ರ ಕೆಲಸ ಮಾಡಬೇಕು. ಡೆವಲಪರ್‌ಗಳು ತಮ್ಮ ಕೆಲಸವನ್ನು ಮಾಡುತ್ತಾರೆ. ಏಜೆನ್ಸಿಗಳು ತಮ್ಮ ಪಾತ್ರವನ್ನು ನಿರ್ವಹಿಸುತ್ತವೆ. ಇದೆಲ್ಲವೂ ಇಲ್ಲಿ ಸರಿಯಾದ ವ್ಯವಸ್ಥೆಯಲ್ಲಿ ಜಾರಿಯಲ್ಲಿದೆ’ ಎಂದು ರಿಮಿ ಹೇಳಿದ್ದಾರೆ.
ಸಂದರ್ಶನದಲ್ಲಿ ಭಾರತ ಮತ್ತು ದುಬೈನ ಏಜೆಂಟ್‌ಗಳ ಬಗ್ಗೆ ಇರುವ ಗ್ರಹಿಕೆಯಲ್ಲಿನ ವ್ಯತ್ಯಾಸವನ್ನು ಉಲ್ಲೇಖಿಸಿದ ಅವರ, ‘ದುಬೈನಲ್ಲಿ ಏಜೆಂಟ್‌ಗಳನ್ನು ಹಣಕಾಸು ಸಲಹೆಗಾರರಂತೆಯೇ ನಡೆಸಿಕೊಳ್ಳಲಾಗುತ್ತದೆ. ಆದರೆ ಭಾರತದಲ್ಲಿ ಏಜೆಂಟ್‌ಗಳು ಎರಡು ತಿಂಗಳ ಬ್ರೋಕರೇಜ್ ಕೇಳಿದರೆ, ಅಪರಾಧ ಮಾಡಿದಂತೆ ಜನರು ಅವರನ್ನು ನೋಡುತ್ತಾರೆ’ ಎಂದು ರಿಮಿ ಹೇಳಿದ್ದಾರೆ.
ರಿಮಿ ಸೇನ್ ಬಾಲಿವುಡ್‌ನಲ್ಲಿ ಹಂಗಾಮಾ, ಧೂಮ್, ಗೋಲ್ಮಾಲ್, ಫಿರ್ ಹೇರಾ ಫೆರಿ, ಜಾನಿ ಗದ್ದರ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.