ADVERTISEMENT

ಕರಣ್ ಜೋಹರ್ ಮನೆಯ ಇಬ್ಬರು ಕೆಲಸಗಾರರಿಗೆ ಕೋವಿಡ್–19 ದೃಢ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಮೇ 2020, 17:03 IST
Last Updated 25 ಮೇ 2020, 17:03 IST
ಕರಣ್‌ ಜೋಹರ್‌
ಕರಣ್‌ ಜೋಹರ್‌   

ನವದೆಹಲಿ: ತಮ್ಮ ಮನೆಯ ಇಬ್ಬರು ಕೆಲಸಗಾರರಿಗೆ ಕೋವಿಡ್‌–19 ಸೋಂಕು ದೃಢಪಟ್ಟಿರುವುದಾಗಿ ಬಾಲಿವುಡ್ ಖ್ಯಾತ ನಿರ್ದೇಶಕ ಕರಣ್‌ ಜೋಹರ್‌ ತಿಳಿಸಿದ್ದಾರೆ. ಈ ಕುರಿತು ಟ್ವಿಟರ್‌ನಲ್ಲಿ ಬರೆದುಕೊಳ್ಳುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

‘ಮನೆಯ ಎಲ್ಲರೂ ಪರೀಕ್ಷೆ ಮಾಡಿಸಿಕೊಂಡಿದ್ದೇವೆ. ನಮ್ಮ ಕುಟುಂಬದ ಯಾರಿಗೂ ಸೋಂಕು ತಗುಲಿಲ್ಲ’ ಎಂದು ಸ್ಪಷ್ಟಪಡಿಸಿರುವ ಅವರು, ‘ನಮ್ಮ ಸುತ್ತಮುತ್ತಲಿನ ಪ್ರತಿಯೊಬ್ಬರ ಸುರಕ್ಷತೆಗಾಗಿ ನಾವು ಮುಂದಿನ 14 ದಿನಗಳವರೆಗೆ ಸ್ವಯಂ ಪ್ರತ್ಯೇಕವಾಸದಲ್ಲಿ ಇರುತ್ತೇವೆ’ ಎಂದು ತಿಳಿಸಿದ್ದಾರೆ.

ಕರಣ್‌ ರಾತ್ರಿ ಪ್ರಕಟಿಸಿರುವ ತಮ್ಮ ಟ್ವೀಟ್‌ನಲ್ಲಿ, ‘ನಮ್ಮ ಮನೆಗೆಲಸದ ಇಬ್ಬರಿಗೆ ಕೋವಿಡ್‌–19 ದೃಢಪಟ್ಟಿದೆ ಎಂಬುದನ್ನು ನಿಮಗೆ ತಿಳಿಸಲು ಬಯಸುತ್ತೇನೆ. ರೋಗದ ಲಕ್ಷಣಗಳು ಗೋಚರವಾದ ತಕ್ಷಣವೇ ಅವರನ್ನು ನಮ್ಮ ಮನೆಯ ಒಂದು ಭಾಗದಲ್ಲಿ ಪ್ರತ್ಯೇಕವಾಗಿರಿಸಿ, ಬೃಹತ್‌ ಮುಂಬೈ ಮಹಾನಗರ ಪಾಲಿಕೆಗೆ ಮಾಹಿತಿ ನೀಡಿದೆವು. ಮುನ್ನೆಚ್ಚರಿಕೆ ನಿಯಮಾನುಸಾರ ಕಟ್ಟಡಕ್ಕೆ ಕ್ರಿಮಿನಾಶಕ ಸಿಂಪಡಿಸಲಾಗಿದೆ’ ಎಂದು ಬರೆದುಕೊಂಡಿದ್ದಾರೆ.

ADVERTISEMENT

‘ಉಳಿದಂತೆ ನಮ್ಮ ಕುಟುಂಬದ ಯಾರೊಬ್ಬರಿಗೂ ಸೋಂಕು ತಗುಲಿಲ್ಲ. ಉಳಿದ ಎಲ್ಲ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಮತ್ತು ಸೋಂಕಿನ ಯಾವುದೇ ಲಕ್ಷಣಗಳು ಗೋಚರವಾಗಿಲ್ಲ. ನಾವೆಲ್ಲರೂ ಪರೀಕ್ಷೆ ಮಾಡಿಸಿಕೊಂಡಿದ್ದೇವೆ. ಸೋಂಕು ಇಲ್ಲ ಎಂಬುದು ಖಚಿತವಾಗಿದೆ. ಆದರೂ, ನಮ್ಮ ಸುತ್ತಲಿನವರ ಸುರಕ್ಷತೆಗಾಗಿ ಮುಂದಿನ 14 ದಿನಗಳವರೆಗೆ ಪ್ರತ್ಯೇಕವಾಸದಲ್ಲಿರಲಿದ್ದೇವೆ. ಈ ನಿರ್ಧಾರಕ್ಕೆ ಬದ್ಧರಾಗಿರಲಿದ್ದೇವೆ ಮತ್ತು ಅಧಿಕಾರಿಗಳು ಸೂಚಿಸುವ ಎಲ್ಲ ಕ್ರಮಗಳನ್ನೂ ಕಟ್ಟುನಿಟ್ಟಾಗಿ ಪಾಲಿಸಲಿದ್ದೇವೆ’ ಎಂದು ಭರವಸೆ ನೀಡಿದ್ದಾರೆ.

ಅಂದಹಾಗೆ ಇಂದು (ಮೇ 25) ಅವರ ಜನ್ಮದಿನ. ಕರಣ್‌ 48ನೇ ವಸಂತಕ್ಕೆ ಕಾಲಿಟ್ಟ ಈ ದಿನವೇ, ಅವರ ಮನೆಯ ಇಬ್ಬರು ಕೆಲಸಗಾರರಿಗೆ ಸೋಂಕು ದೃಢಪಟ್ಟಿರುವುದುಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.