ADVERTISEMENT

ಮಣಿಪುರಿ ಚಿತ್ರ: ಕಳೆದು ಹೋದ ಅಪ್ಪನ ಹುಡುಕಾಟದ ‘ಬೂಂಗ್‌’

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 1:19 IST
Last Updated 25 ಫೆಬ್ರುವರಿ 2026, 1:19 IST
ಚಿತ್ರದ ಪೋಸ್ಟರ್‌
ಚಿತ್ರದ ಪೋಸ್ಟರ್‌   

ಲಕ್ಷ್ಮಿಪ್ರಿಯಾ ದೇವಿ ನಿರ್ದೇಶನದ ಮಣಿಪುರಿ ಚಿತ್ರ ‘ಬೂಂಗ್‌’ ಆಸ್ಕರ್‌ನಷ್ಟೇ ಜನಪ್ರಿಯವಾದ ಬ್ರಿಟಿಷ್‌ ಅಕಾಡೆಮಿ ಫಿಲ್ಮ್‌ ಅವಾರ್ಡ್‌(ಬಾಫ್ಟಾ) ಪಡೆದುಕೊಂಡಿದೆ. ಇದೀಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಪುಟ್ಟ ಬಾಲಕನೊಬ್ಬ ಭಾರತ–ಮ್ಯಾನ್ಮಾರ್ ಗಡಿಯಲ್ಲಿ ಕಳೆದು ಹೋದ ಅಪ್ಪನನ್ನು ಹುಡುಕುವ ಕಥೆಯನ್ನು ಹೊಂದಿರುವ ಚಿತ್ರವನ್ನು ಫರಾನ್ ಅಖ್ತರ್ ಅವರು ಎಕ್ಸೆಲ್ ಎಂಟರ್‌ಟೇನ್‌ಮೆಂಟ್ ಮೂಲಕ ನಿರ್ಮಿಸಿದ್ದಾರೆ.

ಬಾಲಕ ಭೋಜೇಂದ್ರೊ ಬೂಂಗ್‌ ಸಿಂಗ್‌ ಇಂಪಾಲ್‌ನಲ್ಲಿ ತನ್ನ ತಾಯಿಯ ಜತೆ ವಾಸಿಸುತ್ತಿರುತ್ತಾನೆ. ಮ್ಯಾನ್ಮಾರ್‌ನ ಗಡಿಯಲ್ಲಿ ಪೀಠೋಪಕರಣದ ಅಂಗಡಿ ನಡೆಸಲೆಂದು ಹೋದ ಆತನ ತಂದೆ ಕಳೆದು ಹೋಗುತ್ತಾನೆ. ಆತ ಸತ್ತು ಹೋಗಿದ್ದಾನೆಂದು ಸುದ್ದಿಯಾಗುತ್ತದೆ. ಅಮ್ಮನಿಗೆ ಅಚ್ಚರಿಯ ಉಡುಗೊರೆ ನೀಡಬೇಕೆಂದು ಬೂಂಗ್‌ ಸಿಂಗ್‌ ತನ್ನ ಗೆಳೆಯನ ಜತೆ ಅಪ್ಪನನ್ನು ಹುಡುಕಿಕೊಂಡು ಗಡಿಯಲ್ಲಿ ಅಲೆಯುವುದು ಚಿತ್ರದ ಒಟ್ಟಾರೆ ಕಥೆ.

ಬಾಲಕನ ದೃಷ್ಟಿಕೋನದಿಂದ ಎರಡು ದೇಶಗಳ ನಡುವಿನ ಗಡಿ ಸಮಸ್ಯೆ, ವಲಸೆ, ಮಣಿಪುರದ ಹಿಂಸಾಚಾರ, ಸಮುದಾಯಗಳ ನಡುವಿನ ಸಂಘರ್ಷ, ರಾಜಕೀಯ ಸ್ಥಿತಿಗತಿಗಳನ್ನು ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ. ಸಂಘರ್ಷದ ನಾಡು ಮಣಿಪುರದಲ್ಲಿ ಶಾಂತಿ ನೆಲೆಸಬೇಕೆಂಬ ಸಂದೇಶವನ್ನು ಈ ಚಿತ್ರದ ಮೂಲಕ ನೀಡಿದ್ದಾರೆ. ಇದು ಲಕ್ಷ್ಮಿಪ್ರಿಯಾ ದೇವಿ ಚೊಚ್ಚಲ ನಿರ್ದೇಶನದ ಚಿತ್ರ. ಮೊದಲ ಯತ್ನದಲ್ಲಿಯೇ ಅವರು ಅತ್ಯುತ್ತಮ ಮನ್ನಣೆ ಪಡೆದಿದ್ದು, ಪ್ರಧಾನಿ ಮೋದಿ ಸೇರಿದಂತೆ ಅನೇಕರು ಚಿತ್ರತಂಡಕ್ಕೆ ಅಭಿನಂದಿಸಿದ್ದಾರೆ. 

ADVERTISEMENT

ಗುಗುನ್ ಕಿಪ್ಜೆನ್ ಮತ್ತು ಬಾಲಾ ಹಿಜಾಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಮಕ್ಕಳ ಚಿತ್ರವು, ಅಂತರರಾಷ್ಟ್ರೀಯ ಮಟ್ಟದ ‘ಯುಟೋಪಿಯಾ–2’, ‘ಲಿಲೋ ಆ್ಯಂಡ್‌ ಸ್ಟಿಚ್‌‘ ಮುಂತಾದ ಜನಪ್ರಿಯ ಸಿನಿಮಾಗಳು ಎದುರು ಸ್ಪರ್ಧಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದು ವಿಶೇಷ. 

‘2023ರ ಮಣಿಪುರದ ಗಲಭೆ ಪ್ರಾರಂಭವಾಗುವ ಮೊದಲು ನಮ್ಮ ಸಿನಿಮಾ ಮುಕ್ತಾಯಗೊಂಡಿತ್ತು. ಬಹಳ ಸಮಸ್ಯೆಗಳಿಂದ ಕೂಡಿದ ನಾಡು ನಮ್ಮದು. ಎಲ್ಲರಿಂದಲೂ, ಎಲ್ಲವುಗಳಿಂದಲೂ ತಾತ್ಸಾರಕ್ಕೆ ಒಳಗಾದ ಪ್ರದೇಶ. ಮುಖ್ಯವಾಗಿ ಇಲ್ಲಿ ಶಾಂತಿ ನೆಲಸಬೇಕಿದೆ’ ಎಂದಿದ್ದಾರೆ ಲಕ್ಷ್ಮಿಪ್ರಿಯಾ ದೇವಿ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.