ಚಿತ್ರೋದ್ಯಮ
ಬೆಂಗಳೂರು: ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ(ಜಾತಿವಾರು ಸಮೀಕ್ಷೆ) ಎಲ್ಲರೂ ಭಾವಹಿಸಿ ಮಾಹಿತಿ ಹಂಚಿಕೊಳ್ಳಿ ಎಂದು ನಟಿ ಜಯಮಾಲ ಕರೆ ನೀಡಿದರು.
ಗುರುವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದುದ್ದೇಶದಿಂದ ನಡೆಯುತ್ತಿರುವ ಸಮೀಕ್ಷೆಯಿದು. ತಪ್ಪು ಮಾಹಿತಿ ನೀಡಿ ಯಾರೂ ಇದರ ಹಾದಿ ತಪ್ಪಿಸಬೇಡಿ. ಸರ್ಕಾರ ನಡೆಸುತ್ತಿರುವ ಈ ಸಮೀಕ್ಷೆಯಿಂದ ಸಮಾಜದ ದುರ್ಬಲ ವರ್ಗ, ಹೆಣ್ಣುಮಕ್ಕಳು, ಹಿಂದುಳಿದ ವರ್ಗದವರು ಸೇರಿದಂತೆ ಹಲವರಿಗೆ ಅನುಕೂಲವಾಗಲಿದೆ. ಚಿತ್ರರಂಗದವರು ಈ ಸಮೀಕ್ಷೆ ಕುರಿತು ಜಾಗೃತಿ ಮೂಡಿಸಬೇಕೆಂದು ರಾಜ್ಯ ಸರ್ಕಾರ ನಮ್ಮಲ್ಲಿ ಕೇಳಿಕೊಂಡಿದೆ. ಯಾವುದೇ ಸರ್ಕಾರವಿದ್ದರೂ ಚಿತ್ರರಂಗದ ಜತೆ ನಿಂತಿದೆ. ಸರ್ಕಾರ ನಮಗೆ ತವರುಮನೆಯಿದ್ದಂತೆ. ಅದರ ಕಾರ್ಯಕ್ರಮವನ್ನು ಬೆಂಬಲಿಸುವುದು ನಮ್ಮ ಕರ್ತವ್ಯ’ ಎಂದು ಅವರು ತಿಳಿಸಿದರು.
‘ಯಾವುದೇ ಪಕ್ಷ ಆಡಳಿತದಲ್ಲಿ ಇದ್ದರೂ ಅದರ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವುದು ವಾಣಿಜ್ಯ ಮಂಡಳಿ ಹೊಣೆ. ಈ ಸಮೀಕ್ಷೆ ಇನ್ನು ನಾಲ್ಕು ದಿನಗಳು ಮಾತ್ರ ನಡೆಯಲಿದ್ದು ಎಲ್ಲರೂ ಭಾಗಿಯಾಗಿ ಸಂಬಂಧಿತ ಮಾಹಿತಿ ನೀಡಿ’ ಎಂದು ನಟಿ ತಾರಾ ಮನವಿ ಮಾಡಿಕೊಂಡರು.
ಅನಂತನಾಗ್‌ಗೆ ಅಭಿನಂದನೆ:
‘ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿರುವ ಅನಂತನಾಗ್ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಾಸನ ರಘು ಅವರನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ಅಭಿನಂದಿಸುವ ನಿಟ್ಟಿನಲ್ಲಿ ಅ.18ರಂದು ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಸಂಜೆ ಐದು ಗಂಟೆಯಿಂದ ಕಾರ್ಯಕ್ರಮ ನಡೆಯಲಿದೆ. ಇದು ಇಡೀ ಚಿತ್ರರಂಗ ಸಂಭ್ರಮಿಸುವ ಕಾರ್ಯಕ್ರಮ. ಹೀಗಾಗಿ ಚಿತ್ರೋದ್ಯಮದ ಎಲ್ಲರಿಗೂ ಆಹ್ವಾನ ನೀಡಿದ್ದು, ಎಲ್ಲ ಅಂಗಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸುತ್ತಾರೆ’ ಎಂದು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ನರಸಿಂಹಲು ಹೇಳಿದರು.
ನಿರ್ಮಾಪಕ ಸಾ.ರಾ. ಗೋವಿಂದ್ ಮಾತನಾಡಿ, ಅನಂತನಾಗ್ ಕನ್ನಡ ಚಿತ್ರೋದ್ಯಮದ ಹೆಮ್ಮೆ. ರಾಜಕುಮಾರ್‌ಗೆ ಈ ಪ್ರಶಸ್ತಿ ಬಂದಾಗ ಇಡೀ ಚಿತ್ರರಂಗ ಸಂಭ್ರಮಿಸಿತ್ತು. ಅಭಿನಂದನೆ ಕಾರ್ಯಕ್ರಮವೇ ಮೂರು ದಿನಗಳ ಸಾರ್ವಜನಿಕ ಸಮಾರಂಭವಾಗಿ ಮಾರ್ಪಟ್ಟಿತ್ತು. ಇವತ್ತಿನ ಸ್ಥಿತಿಗತಿಗೆ ಅನುಗುಣವಾಗಿ ಪ್ರಶಸ್ತಿ ಪುರಸ್ಕೃತ ಇಬ್ಬರಿಗೂ ಅಭಿನಂದಿಸುತ್ತಿದ್ದೇವೆ. ಎಲ್ಲರಿಗೂ ಆಹ್ವಾನ ನೀಡಿದ್ದೇವೆ. ಸ್ಟಾರ್ ನಟರು ಈ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಅವರ ವೈಯಕ್ತಿಕ ನಿರ್ಧಾರ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.