ADVERTISEMENT

ಮಹಿಳಾ ವಿಶ್ವಕಪ್‌ ಗೆಲುವು: ‌ಅನುಷ್ಕಾ ನಟನೆಯ ‘ಚಕ್ದಾ ಎಕ್ಸ್‌ಪ್ರೆಸ್‌’ ಬಿಡುಗಡೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ನವೆಂಬರ್ 2025, 13:29 IST
Last Updated 8 ನವೆಂಬರ್ 2025, 13:29 IST
Shwetha Kumari
   Shwetha Kumari

ಮುಂಬೈ: ಸದ್ಯದಲ್ಲೇ ಅನುಷ್ಕಾ ಶರ್ಮಾ ನಟನೆಯ ‘ಚಕ್ದಾ ಎಕ್ಸ್‌ಪ್ರೆಸ್’ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ್ತಿ ಜೂಲನ್‌ ಗೋಸ್ವಾಮಿ ಜೀವನಾಧಾರಿತ ಸಿನಿಮಾ ಇದಾಗಿದ್ದು, ನೆಟ್‌ಫ್ಲಿಕ್ಸ್ ಮತ್ತು ನಿರ್ಮಾಣ ಸಂಸ್ಥೆ ‘ಕ್ಲೀನ್ ಸ್ಲೇಟ್ ಫಿಲ್ಮ್ಸ್‌’ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಸದ್ಯ ಬಿಡುಗಡೆ ಸ್ಥಗಿತಗೊಂಡಿದೆ.

ಇದೀಗ, ಐಸಿಸಿ ಮಹಿಳಾ ವಿಶ್ವಕಪ್‌ ಟೂರ್ನಿಯಲ್ಲಿ ಭಾರತೀಯ ಆಟಗಾರ್ತಿಯರು ಚೊಚ್ಚಲ ಟ್ರೋಫಿ ಗೆದ್ದಿರುವುದು ಚಿತ್ರ ಬಿಡುಗಡೆಯತ್ತ ಹೊಸ ಭರವಸೆ ಮೂಡಿಸಿದೆ. ಭಿನ್ನಾಭಿಪ್ರಾಯ ಸರಿಪಡಿಸಿಕೊಳ್ಳಲು ಚಿತ್ರತಂಡ ಮುಂದಾಗಿದೆ ಎಂದು ‘ಮಿಡ್‌ ಡೇ’ ಸುದ್ದಿಸಂಸ್ಥೆ ವರದಿ ಮಾಡಿದೆ.

ADVERTISEMENT

‘ಭಿನ್ನಾಭಿಪ್ರಾಯವನ್ನು ಮೀರಿ ಸಿನಿಮಾ ಬಿಡುಗಡೆ ಮಾಡಲು ಸಾಧ್ಯವೇ? ಎಂದು ನೆಟ್‌ಫ್ಲಿಕ್ಸ್ ಇಂಡಿಯಾದ ಉನ್ನತ ಕಾರ್ಯನಿರ್ವಾಹಕರಿಗೆ ನಾವು ವೈಯಕ್ತಿಕವಾಗಿ ಪತ್ರ ಬರೆದಿದ್ದೇವೆ. ಜೂಲನ್‌ ಅವರಂತಹ ಮೇರು ಆಟಗಾರ್ತಿಯ ಜೀವನಗಾಥೆ ಪ್ರೇಕ್ಷಕರನ್ನು ತಲುಪಬೇಕು’ ಎಂದು ಚಿತ್ರತಂಡದ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದೆ.

ಚಿತ್ರದ ಬಜೆಟ್‌ ವಿಚಾರವಾಗಿ ಭಿನ್ನಾಭಿಪ್ರಾಯ ತಲೆದೋರಿದೆ ಎಂದು ಮೂಲಗಳು ತಿಳಿಸಿವೆ. ಈ ಚಿತ್ರಕ್ಕೆ ಪ್ರೊಸಿತ್ ರಾಯ್ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

2018ರಲ್ಲಿ ಬಿಡುಗಡೆಯಾದ ಶಾರುಕ್‌ ಖಾನ್‌ ನಟನೆಯ ‘ಝೀರೊ’ ಸಿನಿಮಾದಲ್ಲಿ ಅನುಷ್ಕಾ ಕೊನೆಯದಾಗಿ ನಟಿಸಿದ್ದರು. ಅದಾದ 7 ವರ್ಷಗಳ ಬಳಿಕ ‘ಚಕ್ದಾ ಎಕ್ಸ್‌ಪ್ರೆಸ್‌’ ಸಿನಿಮಾದ ಮೂಲಕ ಚಿತ್ರರಂಗದತ್ತ ಮುಖ ಮಾಡಿದ್ದರು.

ಏತನ್ಮಧ್ಯೆ, ಭಾರತೀಯ ಮಹಿಳಾ ತಂಡವು ತಮ್ಮ ಐತಿಹಾಸಿಕ ಗೆಲುವನ್ನು ಜೂಲನ್ ಗೋಸ್ವಾಮಿ ಅವರೊಂದಿಗೆ ಆಚರಿಸಿದೆ.

ಜೂಲನ್‌ ಅವರು 2002ರಿಂದ 2022ರವರೆಗೆ ಭಾರತವನ್ನು ಪ್ರತಿನಿಧಿಸಿದ್ದ ವೇಗದ ಬೌಲರ್ ಆಗಿದ್ದಾರೆ. 2008 ರಿಂದ 2011 ರವರೆಗೆ ಕ್ಯಾಪ್ಟನ್‌ ಆಗಿ ಮಹಿಳಾ ತಂಡವನ್ನು ಮುನ್ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.