ಸಂಗೀತ ನಿರ್ದೇಶಕ ಚಂದನ್ ಮತ್ತು ನಿವೇದಿತಾ ಗೌಡ ವಿಚ್ಛೇದನದ ಬಳಿಕ ತೆರೆಯ ಮೇಲೆ ಮತ್ತೆ ಒಂದಾಗಿದ್ದಾರೆ. ಪುನೀತ್ ಶ್ರೀನಿವಾಸ್ ನಿರ್ದೇಶನದ ‘ಮುದ್ದು ರಾಕ್ಷಸಿ’ ಚಿತ್ರೀಕರಣದಲ್ಲಿ ಇಬ್ಬರೂ ಒಟ್ಟಿಗೆ ಭಾಗಿಯಾಗಿದ್ದಾರೆ. ಇದರೊಂದಿಗೆ ಈ ಜೋಡಿಯ ಮದುವೆ ಬಳಿಕ ಪ್ರಾರಂಭಗೊಂಡಿದ್ದ ಚಿತ್ರದ ಚಿತ್ರೀಕರಣ ಇತ್ತೀಚೆಗಷ್ಟೇ ಮುಕ್ತಾಯಗೊಂಡಿದೆ.
ಸೈಕೋ, ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರವಿದು.‘ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣವಷ್ಟೇ ಬಾಕಿ ಉಳಿದಿತ್ತು. ನಾಯಕ–ನಾಯಕಿ ಒಬ್ಬರನ್ನೊಬ್ಬರು ಅಪ್ಪಿಕೊಂಡು ಬೀಳ್ಕೊಡುವ ದೃಶ್ಯ ಚಿತ್ರೀಕರಿಸಲಾಯಿತು. ಆಗ ನಿವೇದಿತಾ ತುಸು ಹೆಚ್ಚು ಭಾವುಕರಾದರು. ಈ ಜೋಡಿ ವೈಯಕ್ತಿಕ ಜೀವನದಲ್ಲಿ ಜೊತೆಯಾಗಿದ್ದಾಗ ಒಪ್ಪಿಕೊಂಡಿದ್ದ ಚಿತ್ರವಿದು. ಬೆಂಗಳೂರು ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ’ ಎಂದರು ನಿರ್ದೇಶಕರು.
ಮೊದಲು ಚಿತ್ರಕ್ಕೆ ‘ಕ್ಯಾಂಡಿ ಕ್ರಷ್’ ಎಂಬ ಶೀರ್ಷಿಕೆ ಇಡಲಾಗಿತ್ತು. ‘ಕ್ಯಾಂಡಿ ಕ್ರಷ್’ ಎಂಬ ಹೆಸರಿನ ಕಂಪನಿಯೊಂದು ಶಿರ್ಷೀಕೆ ಬದಲಿಸುವಂತೆ ನೊಟೀಸ್ ನೀಡಿದ ಬಳಿಕ ಚಿತ್ರ ತಂಡ ಶೀರ್ಷಿಕೆ ಬದಲಿಸಿತ್ತು.
ಶ್ರೀಚೌಡೇಶ್ವರಿ ಸಿನಿ ಕಂಬೈನ್ಸ್ ಮೂಲಕ ಮೋಹನ್ ಕುಮಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಎಂ.ಎಸ್.ತ್ಯಾಗರಾಜ್ ಸಂಗೀತ ಸಂಯೋಜನೆ ಮಾಡಿದ್ದು, ಎ.ಕರುಣಾಕರ್ ಛಾಯಾಚಿತ್ರಗ್ರಹಣವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.