ADVERTISEMENT

ದುಂದುವೆಚ್ಚಕ್ಕೆ ಕಡಿವಾಣ ಹಾಕೆಂದು ರಾಜಮೌಳಿಗೆ ಖಡಕ್‌ ಸೂಚನೆ ಕೊಟ್ಟ ನಿರ್ಮಾಪಕ?

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2020, 11:15 IST
Last Updated 12 ಆಗಸ್ಟ್ 2020, 11:15 IST
ರಾಮ್‌ಚರಣ್‌, ಅಜಯ್‌ ದೇವಗನ್‌, ಜೂನಿಯರ್‌ ಎನ್‌ಟಿಆರ್‌ ಮತ್ತು ಎಸ್‌.ಎಸ್. ರಾಜಮೌಳಿ
ರಾಮ್‌ಚರಣ್‌, ಅಜಯ್‌ ದೇವಗನ್‌, ಜೂನಿಯರ್‌ ಎನ್‌ಟಿಆರ್‌ ಮತ್ತು ಎಸ್‌.ಎಸ್. ರಾಜಮೌಳಿ   

‘ಬಾಹುಬಲಿ’ ಸರಣಿ ‌ಸಿನಿಮಾಗಳ ಬಳಿಕ ‌ಎಸ್.ಎಸ್. ರಾಜಮೌಳಿ ಆ್ಯಕ್ಷನ್‌ ಕಟ್‌ ಹೇಳಿರುವ ಚಿತ್ರ ‘ಆರ್‌ಆರ್‌ಆರ್’. ಟಾಲಿವುಡ್‌ನ ಸೂಪರ್‌ ಸ್ಟಾರ್‌ಗಳಾದ ಜೂನಿಯರ್‌ ಎನ್‌ಟಿಆರ್‌ ಮತ್ತು ರಾಮ್ ಚರಣ್‌ ಇದರಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. ₹ 400 ಕೋಟಿ ವೆಚ್ಚದಡಿ ನಿರ್ಮಾಣವಾಗುತ್ತಿರುವ ಚಿತ್ರ ಇದು. ಹಾಗಾಗಿ, ಇಡೀ ಭಾರತೀಯ ಚಿತ್ರರಂಗವೇ ಇದರತ್ತ ಕೌತುಕದ ಕಣ್ಣು ನೆಟ್ಟಿದೆ.

ಡಿ.ವಿ.ವಿ. ದಾನಯ್ಯ ಇದಕ್ಕೆ ಬಂಡವಾಳ ಹೂಡಿದ್ದಾರೆ. ಸ್ವಾತಂತ್ರ್ಯ ಪೂರ್ವದ ಸೆಟ್‌ ಅಳವಡಿಸಿ ಚಿತ್ರೀಕರಿಸಲಾಗುತ್ತಿದೆ. ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮರಾಜು ಮತ್ತು ಕೋಮರಾಮ ಭೀಮ ಅವರ ಪಾತ್ರದ ಸುತ್ತ ಇದರ ಚಿತ್ರಕಥೆ ಹೆಣೆಯಲಾಗಿದೆ. ಸೆಟ್‌ಗಳ ನಿರ್ಮಾಣಕ್ಕಾಗಿಯೇ ದೊಡ್ಡ ಮೊತ್ತವನ್ನು ವ್ಯಯಿಸಲಾಗಿದೆಯಂತೆ.

2021ರ ಜನವರಿ 8ರಂದು ಈ ಸಿನಿಮಾ ಬಿಡುಗಡೆಗೆ ಚಿತ್ರತಂಡ ನಿರ್ಧರಿಸಿತ್ತು. ಆದರೆ, ಕೋವಿಡ್‌–19 ಪರಿಣಾಮ ನಿರ್ಮಾಪಕರ ಎಲ್ಲಾ ಲೆಕ್ಕಾಚಾರ ತಲೆಕೆಳಕಾಗಿದೆ. ಮತ್ತೊಂದೆಡೆ ಕೊರೊನಾ ಸೋಂಕು ಇಡೀ ಚಿತ್ರೋದ್ಯಮದ ಆರ್ಥಿಕತೆಯ ಮೇಲೆ ಬರೆ ಎಳೆದಿದೆ. ಸಿನಿಮಾ ಮಾರುಕಟ್ಟೆ ಕುಸಿದಿರುವ ಪರಿಣಾಮ ‘ಆರ್‌ಆರ್‌ಆರ್‌’ನಂತಹ ಬಿಗ್‌ ಬಜೆಟ್‌ ಸಿನಿಮಾಗಳ ನಿರ್ಮಾಣಕ್ಕೆ ನಿರ್ಮಾಪಕರು ಆಸಕ್ತಿ ತೋರಿಸುತ್ತಿಲ್ಲ.

ADVERTISEMENT

ಈಗಾಗಲೇ, ‘ಆರ್‌ಆರ್‌ಆರ್‌’ ಚಿತ್ರದ ಬಿಡುಗಡೆ ಹಕ್ಕುಗಳು ಮಾರಾಟವಾಗಿವೆ. ಆದರೆ ಹಣ ಹೂಡಿರುವವರು ಮತ್ತು ವಿತರಕರಿಗೆ ತಾವು ಹೂಡಿರುವ ಬಂಡವಾಳ ವಾಪಸ್‌ ಬರುತ್ತದೆಯೇ ಎಂಬ ಚಿಂತೆ ಕಾಡುತ್ತಿದೆಯಂತೆ. ಹಾಗಾಗಿಯೇ, ಸಿನಿಮಾದ ಖರ್ಚನ್ನು ಕಡಿಮೆ ಮಾಡುವಂತೆ ನಿರ್ಮಾಪಕ ದಾನಯ್ಯ ಅವರಿಗೆ ದುಂಬಾಲು ಬಿದ್ದಿದ್ದಾರೆ. ಹಾಗಾಗಿ, ಚಿತ್ರದ ಖರ್ಚನ್ನು ತಗ್ಗಿಸುವಂತೆ ದಾನಯ್ಯ ಅವರು ರಾಜಮೌಳಿ ಅವರಿಗೆ ಖಡಕ್‌ ಸೂಚನೆ ನೀಡಿದ್ದಾರೆ ಎಂಬ ಸುದ್ದಿ ಟಾಲಿವುಡ್‌ ಅಂಗಳದಿಂದ ಹೊರಬಿದ್ದಿದೆ.

ಕಳೆದ ಜೂನ್‌ನಲ್ಲಿ ವಿತರಕರು ಹೂಡಿರುವ ಹಣವನ್ನು ವಾಪಸ್‌ ಪಡೆಯುವಂತೆ ಬೇಡಿಕೆ ಮುಂದಿಟ್ಟಿದ್ದು ದೊಡ್ಡ ಸುದ್ದಿಯಾಗಿತ್ತು.ಅಮೆರಿಕದಲ್ಲಿ ‘ಆರ್‌ಆರ್‌ಆರ್‌’ ಚಿತ್ರ ಪ್ರದರ್ಶನದ ಹಕ್ಕುಗಳು ₹ 60 ಕೋಟಿಗೆ ಮಾರಾಟವಾಗಿವೆ. ವಿತರಣೆಯ ಹಕ್ಕು ಪಡೆದ ಕಂಪನಿಯು ₹ 3 ಕೋಟಿ ಮುಂಗಡವನ್ನೂ ಪಾವತಿಸಿತ್ತು. 2021ರ ಜನವರಿ 8ರಂದು ಸಿನಿಮಾ ಬಿಡುಗಡೆಯಾಗಲಿದೆ ಎಂಬ ಒಪ್ಪಂದ ಮೇರೆಗೆ ಈ ಹಣ ನೀಡಲಾಗಿತ್ತಂತೆ. ಚಿತ್ರೀಕರಣ ವಿಳಂಬವಾದರೆ ಚಿತ್ರದ ಬಿಡುಗಡೆಯ ದಿನಾಂಕವೂ ಮುಂದಕ್ಕೆ ಹೋಗಲಿದೆ ಎಂಬುದು ವಿತರಕರ ಆತಂಕ. ಹಾಗಾಗಿಯೇ, ಮುಂಗಡ ಹಣ ವಾಪಸ್‌ ಪಡೆಯಲು ಅವರು ನಿರ್ಧರಿಸಿದ್ದರು.

ಇದರಲ್ಲಿ ಬಾಲಿವುಡ್‌ ನಟಿ ಅಲಿಯಾ ಭಟ್‌, ನಟ ಅಜಯ್‌ ದೇವಗನ್‌, ಐರಿಸ್‌ ಬೆಡಗಿ ಒಲಿವಿಯಾ ಮೊರಿಸ್‌ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ತೆಲುಗಿನಲ್ಲಿ ಚಿತ್ರೀಕರಣವಾಗಲಿದೆ. ಆ ನಂತರ ಕನ್ನಡ, ಹಿಂದಿ, ತಮಿಳು, ಮಲಯಾಳ ಸೇರಿದಂತೆ ಭಾರತೀಯ ಹತ್ತು ಭಾಷೆಗಳಿಗೆ ಡಬ್‌ ಆಗಿ ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.