ಚಿಕ್ಕಣ್ಣ
‘ಉಪಾಧ್ಯಕ್ಷ’ ಗೆಲುವಿನ ಬಳಿಕ ನಟ ಚಿಕ್ಕಣ್ಣ ನಾಯಕನ ಪಾತ್ರಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅವರ ಅಭಿನಯದ ‘ಜೋಡೆತ್ತು’ ಚಿತ್ರ ಇತ್ತೀಚೆಗಷ್ಟೇ ಸೆಟ್ಟೇರಿದೆ. ಅದರ ಬಗ್ಗೆ ಹಾಗೂ ತಮ್ಮ ಸಿನಿಪಯಣ ಕುರಿತು ಅವರು ಮಾತಿಗೆ ಸಿಕ್ಕರು...
ಸಿನಿಮಾ ಮತ್ತು ನಿಮ್ಮ ಪಾತ್ರ ಕುರಿತು ಹೇಳಬಹುದೇ?
ಇದು 80ರ ದಶಕದ ಕಥೆ. ಹಳ್ಳಿ ಹಿನ್ನೆಲೆಯಲ್ಲಿ ಕಥೆ ಸಾಗುತ್ತದೆ. ನಾನು ಮಿಡಲ್‌ಕ್ಲಾಸ್ ಕುಟುಂಬದ ಹುಡುಗನಾಗಿ ಕಾಣಿಸಿಕೊಳ್ಳುತ್ತೇನೆ. ಆ ಊರು, ಈ ಊರು ಎಂದು ಯಾವುದೋ ಒಂದು ಪ್ರಾಂತ್ಯಕ್ಕೆ ಸೀಮಿತವಾಗಿಲ್ಲ. ಒಟ್ಟಾರೆ ಹಳ್ಳಿಗಾಡಿನ ಕಥೆ. ಜೋಡೆತ್ತಿಗೆ ಮೂಲ ಬೇರೆನೇ ಇದೆ. ಯಶ್ ಮತ್ತು ದರ್ಶನ್ ಜೋಡೆತ್ತುಗಳು ಎಂದು ಪ್ರಸಿದ್ಧರಾಗಿದ್ದರು. ಅದಾದ ಬಳಿಕ ಸುನಿಲ್ ಮತ್ತು ನಾನು ಜೋಡೆತ್ತು ಎಂಬಂತೆ ಆಯಿತು. ಆದರೆ ಈ ಶೀರ್ಷಿಕೆ ಯಾವ ವ್ಯಕ್ತಿಗೂ ಸಂಬಂಧಿಸಿದ್ದಲ್ಲ. ಸಿನಿಮಾ ನೋಡಿದಾಗ ಈ ಶೀರ್ಷಿಕೆಗಿಂತ ಉತ್ತಮ ಹೆಸರು ಆಯ್ಕೆ ಮಾಡಲು ಸಾಧ್ಯವಿರಲಿಲ್ಲ ಎನ್ನಿಸುತ್ತದೆ. ಹೀಗಾಗಿ ಈ ಹೆಸರಷ್ಟೆ. ನಾನು ಯಾವ ಸಿನಿಮಾ ಮಾಡಿದರೂ ಹಾಸ್ಯ ಇದೆಯಾ ಎಂದು ಕೇಳುವಂತೆಯೇ ಇಲ್ಲ. ಅದರ ಮೇಲೆ ಏನಿದೆ ಎಂದು ನೋಡಬೇಕು. ಮುಂದಿನ ತಿಂಗಳಿನಿಂದ ಚಿತ್ರೀಕರಣ ಪ್ರಾರಂಭ.
ನಿಮ್ಮ ‘ಲಕ್ಷ್ಮಿಪುತ್ರ’ ಚಿತ್ರ ಯಾವ ಹಂತದಲ್ಲಿದೆ?
ಶೇಕಡ 20ರಷ್ಟು ಚಿತ್ರೀಕರಣ ಬಾಕಿಯಿದೆ. ತಾಯಿ–ಮಗನ ಕಥೆಯಿದೆ. ಜತೆಗೆ ದುಡ್ಡಿನ ಕಥೆಯೂ ಬರುತ್ತದೆ. ಮುಖ್ಯವಾಗಿ ಅಮ್ಮ–ಮಗನ ಬಾಂಧವ್ಯದ ಮೇಲೆ ಕಥೆ ಸಾಗುತ್ತದೆ.
ಈಗ ಹಾಸ್ಯನಟನಾಗಿ, ಸಹ ಕಲಾವಿದನಾಗಿ ನಟಿಸುತ್ತಿಲ್ಲವೆ? ನಾಯಕನಾಗಿಯೇ ಮುಂದುವರಿಯುತ್ತೀರಾ?
ಸಹ ಕಲಾವಿದನ ಪಾತ್ರಗಳಿಗೆ ಯಾರೂ ಕರೆಯುತ್ತಿಲ್ಲ. ಅವಕಾಶ ಬಂದರೆ ಮಾಡುತ್ತೇನಾ ಅಥವಾ ಇಲ್ಲವಾ ಎಂದು ನಿರ್ಧರಿಸಬಹುದು. ಆದರೆ ಪ್ರಾಮಾಣಿಕವಾಗಿ ಹೇಳುತ್ತೇನೆ, ಈಗೀಗ ಅಂಥ ಪಾತ್ರಗಳಿಗೆ ಯಾರೂ ಕರೆಯುತ್ತಲೇ ಇಲ್ಲ. ‘ಉಪಾಧ್ಯಕ್ಷ’ ನಂತರ ನಾಯಕನಾಗಿಯೇ ಕಥೆಗಳು ಬರುತ್ತಿವೆ.
ಇಲ್ಲಿಯವರೆಗೆ ಎಷ್ಟು ಸಿನಿಮಾಗಳು ಆಗಿವೆ? ಈ ಪಯಣ ಹೇಗಿದೆ?
200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದೇನೆ. ಖುಷಿಯಿದೆ. ಚಿತ್ರೋದ್ಯಮ ಚೆನ್ನಾಗಿದೆ. ಸಿನಿಮಾದಲ್ಲಿ ಒಂದು ಸಣ್ಣ ಪಾತ್ರ ಸಿಕ್ಕಿದರೆ ಸಾಕು ಎಂದುಕೊಂಡಿದ್ದೆ. ಆದರೆ ಈಗ ನಾಯಕನಾಗಿಯೇ ಜನ ಒಪ್ಪಿಕೊಂಡಿದ್ದಾರೆ. ಇದು ಖುಷಿಯ ವಿಷಯ. ಚಿತ್ರೋದ್ಯಮ ನಾನು ಕಾಣದೇ ಇದ್ದ ಕನಸು. ಹೀಗೆ ಆಗ್ತೀನಿ ಅಂತ ಗೊತ್ತಿರಲಿಲ್ಲ. ಬಯಸದೇ ಬಂದ ಭಾಗ್ಯವಿದು. ಅಚಾನಕ್ಕಾಗಿ ‘ಕಿರಾತಕ’ ಚಿತ್ರದಲ್ಲಿ ಅವಕಾಶ ಸಿಕ್ಕಿತು. ‘ರಾಜಾಹುಲಿ’ ಚಿತ್ರದಲ್ಲಿ ಜನ ಗುರುತಿಸಿದರು. ‘ಅಧ್ಯಕ್ಷ’ ವೃತ್ತಿ ಜೀವನದ ಟರ್ನಿಂಗ್ ಪಾಯಿಂಟ್. ಸಿನಿ ಪಯಣದಲ್ಲಿ ನನಗೆ ನೋವು, ಅವಮಾನ ಆಗಿದ್ದು ಕಡಿಮೆ. ಇಲ್ಲಿ ಕಹಿಗಿಂತ ಸಿಹಿ ಸಿಕ್ಕಿದ್ದೇ ಹೆಚ್ಚು.
ಹಿಂದೊಮ್ಮೆ ನಿಮ್ಮನ್ನು ಆಡಿಕೊಂಡವರ ಕುರಿತು ಅಸಮಾಧಾನದ ಮಾತುಗಳನ್ನಾಡಿದ್ದೀರಲ್ಲವೇ?
‘ಉಪಾಧ್ಯಕ್ಷ’ ಸಮಯದಲ್ಲಿ ಆಡಿದ್ದೆ. ಅದಕ್ಕೆ ಏನೂ ಮಾಡಲು ಸಾಧ್ಯವಿಲ್ಲ. ಅದು ಎಲ್ಲ ಕ್ಷೇತ್ರಗಳಲ್ಲಿಯೂ ಇದ್ದಿದ್ದೆ. ಯಾರೋ ಹತ್ತು ಜನ ಆ ರೀತಿ ಮಾತನಾಡಿರುತ್ತಾರೆ. ಆದರೆ 90 ಜನ ಒಳೆಯದ್ದನ್ನೇ ಹೇಳಿರುತ್ತಾರೆ. ದೇವರೆ ಬಂದು ಸಿನಿಮಾ ಮಾಡಿದರು ಋಣಾತ್ಮಕವಾಗಿ ಮಾತನಾಡುವವರು ಇದ್ದೇ ಇರುತ್ತಾರೆ. ಹೀಗಾಗಿ ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.
ನಾಯಕನಾಗಿ ಸಿನಿಮಾ ಮಾಡುವುದು ಎಷ್ಟು ಸವಾಲು?
ದೊಡ್ಡ ಜವಾಬ್ದಾರಿ. ಸಣ್ಣ ಪಾತ್ರ ಮಾಡುವಾಗ ಸಿನಿಮಾ ಹಿಟ್, ಪ್ಲಾಪ್ ಎಂಬುದು ಲೆಕ್ಕಕ್ಕೆ ಬರುತ್ತಿರಲಿಲ್ಲ. ಹಿಟ್ ಆದರೆ ನಮಗೆ ಪ್ಲಸ್ ಆಗುತ್ತಿತ್ತು. ಸೋತರೆ ನಮ್ಮ ವೃತ್ತಿ ಮೇಲೆ ಅಷ್ಟೇನು ಪರಿಣಾಮ ಬೀರುತ್ತಿರಲಿಲ್ಲ. ಪಾತ್ರ ಚೆನ್ನಾಗಿದೆ, ಅದಕ್ಕೆ ನ್ಯಾಯ ಒದಗಿಸಿದ್ದಾರೆ, ಸಿನಿಮಾ ಚೆನ್ನಾಗಿಲ್ಲ ಎಂದು ಮಾತಾಡಿಕೊಳ್ಳುತ್ತಿದ್ದರು. ಆದರೆ ನಾಯಕನಾಗಿ ಹಾಗಲ್ಲ. ಗೆಲುವು ಬಹಳ ಮಹತ್ವದ್ದಾಗುತ್ತದೆ. ಸಿನಿಮಾ ಗೆದ್ದರೆ ಮಾತ್ರ ನಿರ್ಮಾಪಕರಿಗೆ ಹಣ ಬರುವುದು. ಅವರು ಮುಂದೆ ಸಿನಿಮಾಗಳನ್ನು ಮಾಡಲು ಸಾಧ್ಯವಾಗುತ್ತದೆ.
ಉದ್ಯಮದ ದಿಕ್ಕೇ ಬದಲಾದ ಹೊತ್ತಿನಲ್ಲಿ ಹೊಸ ನಾಯಕನಾಗಿ ನೆಲೆ ಕಾಣುವುದು ಸವಾಲಿನ ಸಂಗತಿಯಾ?
ಆ ರೀತಿ ಯಾವ ಸವಾಲೂ ಇಲ್ಲ. ‘ಸು ಫ್ರಂ ಸೋ’ದಲ್ಲಿ ಇದ್ದವರೆಲ್ಲ ಹೊಸಬರೆ ಅಲ್ವಾ? ಅದು ಗೆದ್ದಿಲ್ವಾ? ಇಲ್ಲಿಗೆ ಬರಬೇಕಿದ್ದರೆ ಎಲ್ಲರೂ ಹೊಸಬರಾಗಿಯೇ ಇರುತ್ತಾರಲ್ವಾ? ಗೆದ್ದ ಮೇಲೆ ಹಳಬರಾಗುವುದು. ಸಿನಿಮಾ ಚೆನ್ನಾಗಿದ್ದರೆ, ಕಥೆ ಇಷ್ಟವಾದರೆ ಹೊಸಬರು, ಹಳಬರು ಎಂಬ ವಿಷಯವೇ ಬರುವುದಿಲ್ಲ. ಸಿನಿಮಾ ಚೆನ್ನಾಗಿ ಮಾಡುವುದಷ್ಟೇ ಮುಖ್ಯ. ನಾನು ಮಾಡುವುದು ಹಾಸ್ಯ, ಕೌಟುಂಬಿಕ ಮನರಂಜನೆ ಚಿತ್ರಗಳು. ಹೀಗಾಗಿ ನನಗಂತೂ ಇದು ಸವಾಲಾಗುವುದಿಲ್ಲ. ಜನರ ಬಾಯಿಂದ, ಬಾಯಿಗೆ ಚಿತ್ರ ಪ್ರಚಾರವಾಗಬೇಕಷ್ಟೆ.
ಮುಂದಿನ ಗುರಿಗಳೇನು?
ನಾಯಕನಾದ ಮೇಲೆ ಮುಂದಿನ ಗುರಿ ಅಂತೇನಿಲ್ಲ. ಬಹಳ ಹಿಂದೆಯೆ ಸಿನಿಮಾ ನಿರ್ಮಾಣ ಮಾಡಿದ್ದೆ. ‘ರ್‍ಯಾಂಬೋ–2’ ಚಿತ್ರದ ನಿರ್ಮಾಪಕರುಗಳಲ್ಲಿ ನಾನೂ ಒಬ್ಬನಾಗಿದ್ದೆ. ಮತ್ತೆ ದೇವರು ಶಕ್ತಿ ಕೊಟ್ಟರೆ ಚಿತ್ರ ನಿರ್ಮಾಣ ಕನಸಿದೆ. ಆದರೆ ನಿರ್ದೇಶನ, ಅದರ ಜವಾಬ್ದಾರಿಗಳು ನನ್ನ ಜಾಯಮಾನಕ್ಕೆ ಆಗಿಬರುವಂಥದ್ದಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.