ADVERTISEMENT

ಬಾಲಿವುಡ್‌ | ಮತ್ತೆ ಬಂದ ಕಮಾಂಡೊ: 29ರಂದು ದೇಶದಾದ್ಯಂತ ಬಿಡುಗಡೆ

ಕೆ.ಎಂ.ಸಂತೋಷ್‌ ಕುಮಾರ್‌
Published 23 ನವೆಂಬರ್ 2019, 12:38 IST
Last Updated 23 ನವೆಂಬರ್ 2019, 12:38 IST
ಕಮಾಂಡೊ ಸಿನಿಮಾದಲ್ಲಿ ವಿದ್ಯುತ್‌ ಜಮ್ವಾಲ್‌
ಕಮಾಂಡೊ ಸಿನಿಮಾದಲ್ಲಿ ವಿದ್ಯುತ್‌ ಜಮ್ವಾಲ್‌   

ಕಮಾಂಡೊ ಸರಣಿಯ ಎರಡುಚಿತ್ರಗಳು ಪ್ರೇಕ್ಷಕರ ನೆನಪಿನಿಂದ ಮಾಸಿಲ್ಲ. ಕಮಾಂಡೊ 2013ರಲ್ಲಿ ಮತ್ತು 2017ರಲ್ಲಿ ಕಮಾಂಡೊ 2 ಚಿತ್ರ ತೆರೆಕಂಡಿದ್ದವು.ಈಗ ಈ ಸರಣಿಯ ಮೂರನೇ ಚಿತ್ರ ‘ಕಮಾಂಡೊ 3’ ಬಾಲಿವುಡ್‌ ಅಂಗಳದಲ್ಲಿ ದೂಳೆಬ್ಬಿಸಲು ಸಜ್ಜಾಗಿದೆ. ಇದೇ 29ರಂದು ದೇಶದಾದ್ಯಂತ ಚಿತ್ರವು ಬಿಡುಗಡೆ ಕಾಣುತ್ತಿದೆ.

ಆ್ಯಕ್ಷನ್‌, ಥ್ರಿಲ್ಲರ್‌, ಸಸ್ಪೆನ್ಸ್‌ ಅಂಶಗಳಿಂದ ತುಂಬಿರುವ ಈ ಚಿತ್ರದ ಟ್ರೇಲರ್ ಹಿಂದಿ ಸಿನಿಮಾಗಳಲ್ಲಿ ಸದ್ಯ ಟ್ರೆಂಡಿಂಗ್‌ನಲ್ಲಿದ್ದು ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿದೆ. ಈ ಸಿನಿಮಾದ ಹಾಡುಗಳುಈಗಾಗಲೇ ಚಿತ್ರರಸಿಕರ ಮನಗೆದ್ದಿವೆ.

ದೊಡ್ಡ ಬಜೆಟ್‌ನಲ್ಲಿ ಅದ್ದೂರಿಯಾಗಿ ನಿರ್ಮಿಸಿರುವ ಚಿತ್ರದಲ್ಲಿನಾಯಕನಾಗಿ ವಿದ್ಯುತ್ ಜಮ್ವಾಲ್, ನಾಯಕಿಯಾಗಿ ಆಧಾ ಶರ್ಮಾ, ಪ್ರಮುಖ ಪಾತ್ರಗಳಲ್ಲಿ ಗುಲ್ಶನ್‌ ದೇವಯ್ಯ, ಆಂಗೀರಾ ಧರ್‌ ನಟಿಸಿದ್ದಾರೆ. ರೂಪದರ್ಶಿಯಾಗಿದ್ದ ಆಂಗೀರಾ ಧರ್‌ ಈ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿಕೊಡುತ್ತಿದ್ದಾರೆ.

ADVERTISEMENT

ಈ ಚಿತ್ರಕ್ಕೆ ಆದಿತ್ಯ ದತ್‌ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ರಿಲಯನ್ಸ್‌ ಎಂಟರ್‌ಟೈನ್‌ಮೆಂಟ್‌ ಮತ್ತು ಮೋಷನ್‌ ಪಿಕ್ಚರ್ಸ್‌ ಕ್ಯಾಪಿಟಲ್‌ ಬ್ಯಾನರ್‌ನಡಿ ವಿಪೂಲ್‌ ಅಮೃತ್‌ಲಾಲ್‌ ಶಾ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. 2017ರಲ್ಲಿ ತೆರೆಕಂಡ ಕಪ್ಪು ಹಣದ ಕುರಿತಾದ ‘ಕಮಾಂಡೊ 2’ ಚಿತ್ರದ ಮುಂದುವರಿದ ಭಾಗವಾಗಿ ಈ ಸಿನಿಮಾ ಮೂಡಿ ಬಂದಿದೆ ಎಂದಿದೆ ಚಿತ್ರತಂಡ.

ಒಬ್ಬ ನಿಗೂಢ ವ್ಯಕ್ತಿ ಲಂಡನ್‌ನಲ್ಲಿ ತನ್ನ ನೆಲೆ ಮಾಡಿಕೊಂಡು, ಭಾರತದ ಮೇಲೆ ದಾಳಿ ಮಾಡಲು ಸಂಚು ರೂಪಿಸಿರುತ್ತಾನೆ. ಚಿತ್ರದ ನಾಯಕ ಕರಣ್‌ ಸಿಂಗ್‌ ದೋಗ್ರಾ ಬ್ರಿಟಿಷ್‌ ಗುಪ್ತಚರ ಅಧಿಕಾರಿಗಳ ಸಹಾಯದಿಂದ ಆ ಶತ್ರುವಿನ ಬೇಟೆಯಾಡಲು ಹೊರಡುತ್ತಾನೆ. ಶತ್ರುವಿನ ಸಂಭಾವ್ಯ ದಾಳಿಯನ್ನು ತಡೆದು, ದೇಶವನ್ನು ರಕ್ಷಿಸಿಕೊಳ್ಳಲು ಕರಣ್‌ಗೆ ಸಾಧ್ಯವಾ? ಎನ್ನುವುದು ಚಿತ್ರದ ಕಥಾಹಂದರಷ್ಟೇ ಅಲ್ಲ, ಚಿತ್ರದಕುತೂಹಲವೂ ಆಗಿದೆ.

ಕರಣ್ ಸಿಂಗ್ ಡೋಗ್ರಾ ಪಾತ್ರದಲ್ಲಿ ಜಮ್ವಾಲ್‌ ಸಮರಕಲೆಯ ಫೈಟಿಂಗ್‌ ದೃಶ್ಯಗಳು, ಚೇಸಿಂಗ್‌ನಲ್ಲೂಮಿಂಚು ಹರಿಸಿದ್ದಾರಂತೆ. ಅಲ್ಲದೆ ಕುಸ್ತಿ ಅಖಾಡದಲ್ಲಿ ಜಟ್ಟಿಗಳ ವಿರುದ್ಧ ತೊಡೆ ತಟ್ಟಿದ್ದಾರಂತೆ.ಈ ಚಿತ್ರದಲ್ಲಿ ಗುಪ್ತಚರ ಅಧಿಕಾರಿ ಭಾವನಾ ರೆಡ್ಡಿ ಪಾತ್ರದಲ್ಲಿ ಆಧಾ ಶರ್ಮಾ ನಟಿಸಿದ್ದಾರೆ.ಆ್ಯಕ್ಷನ್‌ ಪ್ರಧಾನ ಪಾತ್ರವಾಗಿರುವುದರಿಂದ ಸೂಪರ್ ಬೈಕ್‌ ರೈಡಿಂಗ್‌ ಜತೆಗೆ, ಈ ಚಿತ್ರಕ್ಕಾಗಿ ಅವರು ಸಮರ ಕಲೆಯನ್ನು ಕಲಿತು ಪೈಟ್‌ ಕೂಡ ಮಾಡಿದ್ದಾರಂತೆ.ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಬೇಕಿದ್ದ ಈ ಚಿತ್ರವನ್ನು ನವೆಂಬರ್‌ಗೆ ಚಿತ್ರತಂಡ ಮುಂದೂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.