‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’
ಚಂದನವನದ ಚಂದದ ಘಮಲನ್ನು ಪಸರಿಸುವ ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ ಮೂರನೇ ಆವೃತ್ತಿಗೆ ದಿನಗಣನೆ ಆರಂಭವಾಗಿದೆ. ಜೂನ್ 27ರ ಶುಕ್ರವಾರ ಕಾರ್ಯಕ್ರಮ ನಡೆಯಲಿದೆ. ‘ಪ್ರಜಾವಾಣಿ’ಯು ತನ್ನ 75ನೇ ವರ್ಷದ ಸಂದರ್ಭದಲ್ಲಿ ಪ್ರಾರಂಭಿಸಿದ್ದ ಈ ಕಾರ್ಯಕ್ರಮವು ಕರ್ನಾಟಕದ ಶ್ರೀಮಂತ ಸಿನಿಮಾ ಪರಂಪರೆಯನ್ನು ಆಚರಿಸುವ, ಸಂಭ್ರಮಿಸುವ, ಬೆಸೆಯುವ ವೇದಿಕೆಯಾಗಿ ಇದೀಗ ಚಂದನವನದಲ್ಲಿ ಬೇರೂರಿದೆ.
ಈ ವರ್ಣರಂಜಿತ, ಅರ್ಥಗರ್ಭಿತ ಕಾರ್ಯಕ್ರಮದ ಮೊದಲೆರಡು ಆವೃತ್ತಿಗಳು ಅತ್ಯಂತ ಯಶಸ್ವಿಯಾಗಿ, ಅದ್ದೂರಿಯಾಗಿ ನಡೆದಿವೆ. ಮೊದಲ ಆವೃತ್ತಿಯಲ್ಲಿ ಹಿರಿಯ ನಟ ಅನಂತನಾಗ್ ಅವರು ಜೀವಮಾನ ಸಾಧನೆ ಪುರಸ್ಕಾರಕ್ಕೆ ಭಾಜನರಾಗಿದ್ದರು. ಎರಡನೇ ಆವೃತ್ತಿಯಲ್ಲಿ ಚತುರ್ಭಾಷಾ ತಾರೆ ಬಿ.ಸರೋಜಾದೇವಿಯವರ ಮುಡಿಗೆ ಈ ಪುರಸ್ಕಾರ ಸೇರಿತ್ತು. ಎರಡನೇ ಆವೃತ್ತಿಯಲ್ಲಿ ಪ್ರಾರಂಭಗೊಂಡ ‘ಕನ್ನಡ ಸಿನಿ ಧ್ರುವತಾರೆ’ ಪ್ರಶಸ್ತಿಗೆ ನಟ ಶಿವರಾಜ್‌ಕುಮಾರ್ ಭಾಜನರಾಗಿದ್ದರು. 2024ರಲ್ಲಿ ಪ್ರಾರಂಭವಾದ ಚೊಚ್ಚಲ ‘ವರ್ಷದ ಅತ್ಯುತ್ತಮ ಸಾಧನೆ’ ಗರಿ ನಟ ಧನಂಜಯ ಮುಡಿಗೇರಿತ್ತು. ನಟರಾದ ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಕಿಶೋರ್, ರಂಗಾಯಣ ರಘು, ಸಂಚಾರಿ ವಿಜಯ್, ಶಿಶಿರ್ ಬೈಕಾಡಿ, ನಿರ್ದೇಶಕರಾದ ತರುಣ್ ಕಿಶೋರ್ ಸುಧೀರ್, ಹೇಮಂತ್ ಎಂ.ರಾವ್, ಕಿರಣ್ ರಾಜ್, ಶಶಾಂಕ್ ಸೋಗಾಲ್, ನಿತಿನ್ ಕೃಷ್ಣಮೂರ್ತಿ, ನಟಿಯರಾದ ಉಮಾಶ್ರೀ, ಗಾನವಿ ಲಕ್ಷ್ಮಣ್, ರುಕ್ಮಿಣಿ ವಸಂತ್, ಸಂಗೀತ ನಿರ್ದೇಶಕರಾದ ವಿ.ಹರಿಕೃಷ್ಣ, ಅಜನೀಶ್ ಲೋಕನಾಥ್ ಮುಂತಾದ ಗಣ್ಯರು ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಇದರ ಜೊತೆಗೆ ಚಿತ್ರೋದ್ಯಮಕ್ಕೆ ದಿಕ್ಸೂಚಿಯಾಗಬಲ್ಲ ಸಿನಿಮಾಗಳನ್ನು ಗುರುತಿಸುವ ಕೆಲಸವನ್ನೂ ‘ಪ್ರಜಾವಾಣಿ’ ಮಾಡುತ್ತಿದೆ. ಈ ಮೂಲಕ ತೆರೆಹಿಂದೆ ಕೆಲಸ ಮಾಡುವ ತಂತ್ರಜ್ಞರನ್ನೂ ಶ್ಲಾಘಿಸುತ್ತಿದೆ. 2024ರಲ್ಲಿ ಚಿತ್ರಮಂದಿರಗಳಲ್ಲಿ ತೆರೆಕಂಡ ಸಿನಿಮಾಗಳನ್ನು ಮೂರನೇ ಆವೃತ್ತಿಗೆ ಪರಿಗಣಿಸಲಾಗಿದೆ. ಪ್ರಶಸ್ತಿಗೆ ನಾಮನಿರ್ದೇಶಿತರಾದವರ ಹೆಸರು, ವಿವರ ಹಾಗೂ ಸಿನಿಮಾಗಳನ್ನು ಪ್ರಕಟಿಸಲಾಗಿದ್ದು, ಒಟ್ಟು 25 ಪ್ರಶಸ್ತಿಗಳು ಪ್ರತಿಭಾನ್ವಿತರ ಕೈಸೇರಲು ದಿನಗಣನೆ ಆರಂಭವಾಗಿದೆ.
ಇನ್ನಷ್ಟು ಮಾಹಿತಿಗಳಿಗಾಗಿ
ವೆಬ್‌ಸೈಟ್ ನೋಡಿ.
www.prajavani.net/cinesamman/season3
‘ಪ್ರಜಾವಾಣಿ’ ಪ್ರಶಸ್ತಿ ಇಂಧನದಂತಿತ್ತು
ದಿಗ್ಗಜರ ನಡುವೆ ಪ್ರಶಸ್ತಿ ಸ್ವೀಕರಿಸಿದ್ದು ನನಗೆ ಖುಷಿ, ಹೆಮ್ಮೆ ಎನಿಸಿತ್ತು. ಅವರ ಜೊತೆ ಸ್ಪರ್ಧಿಸಿ ಗೆದ್ದೆ ಎಂಬ ಅಭಿಮಾನವೂ ಇತ್ತು. ಓರ್ವ ನಟನಿಗೆ ಈ ರೀತಿಯ ಗುರುತಿಸುವಿಕೆ ಬಹಳ ಮುಖ್ಯ. ಇದರಿಂದ ನನಗೆ ಚಿತ್ರರಂಗ ಇನ್ನಷ್ಟು ತೆರೆದುಕೊಂಡಿತು. ಪ್ರಶಸ್ತಿಗಳು ಬೆನ್ನುತಟ್ಟಿ, ನೀನಿನ್ನೂ ಉತ್ತಮ ಸಿನಿಮಾಗಳನ್ನು ನೀಡಬೇಕು ಎಂದು ಹೇಳುತ್ತವೆ. ‘ಡೇರ್‌ಡೆವಿಲ್ ಮುಸ್ತಾಫಾ’ಗೆ ‘ಪ್ರಜಾವಾಣಿ’ ನೀಡಿದ ಪ್ರಶಸ್ತಿ ನನಗೆ ಒಂದು ರೀತಿ ಇಂಧನದಂತಿತ್ತು. ಎಲ್ಲಾ ವಿಭಾಗಗಳಲ್ಲೂ ಬಹಳ ಪಾರದರ್ಶಕವಾದ, ಪ್ರಾಮಾಣಿಕವಾದ ಆಯ್ಕೆ ಪ್ರಕ್ರಿಯೆ ಎದ್ದು ಕಾಣುತ್ತಿತ್ತು. ಪ್ರಶಸ್ತಿ ಕಾರ್ಯಕ್ರಮಗಳ ಪೈಕಿ ಪ್ರಜಾವಾಣಿ ಆಯೋಜಿಸಿದ್ದ ಸಮಾರಂಭ ಬಹಳ ನೈಜವಾಗಿತ್ತು. ಕಾರ್ಯಕ್ರಮವನ್ನು ಆಯೋಜಿಸಿದ್ದ ರೀತಿ ಅತ್ಯಂತ ಅದ್ಭುತವಾಗಿತ್ತು.
–ಶಿಶಿರ್ ಬೈಕಾಡಿ, ನಟ
ಪಾರದರ್ಶಕ ಮತ್ತು ಸ್ಪಷ್ಟ ನಿರ್ಧಾರ
‘ಪ್ರಜಾವಾಣಿ ಸಿನಿ ಸಮ್ಮಾನ’ 3ನೇ ಆವೃತ್ತಿಗೆ ಹೆಜ್ಜೆ ಇಟ್ಟಿದೆ. ಇಡೀ ಕನ್ನಡ ಚಲನಚಿತ್ರ ಪರಿವಾರಕ್ಕೆ ಖುಷಿ ನೀಡುವ ಚಿತ್ರೋತ್ಸವವಿದು. ಹೊಸಬರಿಗೆ, ತಂತ್ರಜ್ಞರಿಗೆ ಸ್ಫೂರ್ತಿ ನೀಡುವ ಉತ್ಸವ. ಬೇರೆ ಪ್ರಶಸ್ತಿ ಕಾರ್ಯಕ್ರಮಗಳಿಗಿಂತ ಬಹಳ ಭಿನ್ನ. ಇಲ್ಲಿ ಪ್ರಶಸ್ತಿ ಪಡೆದರೆ ಒಂದು ರೀತಿಯ ಗೌರವ. ಏಕೆಂದರೆ ಇಲ್ಲಿನ ಆಯ್ಕೆ ಪ್ರಕ್ರಿಯೆ ಅಷ್ಟು ಪಾರದರ್ಶಕ ಮತ್ತು ಸ್ಪಷ್ಟವಾಗಿದೆ. ನನ್ನದೊಂದು ಮನವಿ, ಕರ್ನಾಟಕದ ಪ್ರಾದೇಶಿಕ ಭಾಷೆಗಳಿಗೆ ಒಂದು ಪ್ರತ್ಯೇಕ ವಿಭಾಗವಿರಬೇಕು. ಪ್ರತಿ ವರ್ಷ ತುಳು, ಬ್ಯಾರಿ, ಕೊಂಕಣಿ, ಕೊಡವ ಭಾಷೆಯಂಥ ಯಾವುದಾದರೂ ಒಂದು ಉಪ ಭಾಷೆಯ ಚಿತ್ರಕ್ಕೂ ಪ್ರಶಸ್ತಿ ನೀಡಬೇಕು. ಇದರಿಂದ ಆ ಭಾಷೆಯ ಚಿತ್ರಗಳಿಗೂ ಮನ್ನಣೆ ಸಿಕ್ಕಂತಾಗುತ್ತದೆ. ಇಂಥ ಪ್ರಕ್ರಿಯೆಯ ಭಾಗವಾಗಿ ಉತ್ತಮ ಚಿತ್ರಗಳನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಿದೆ. ಇದಕ್ಕಾಗಿ ‘ಪ್ರಜಾವಾಣಿ’ ಬಳಗಕ್ಕೆ ಕೃತಜ್ಞ.
–ಶಿವಧ್ವಜ ಶೆಟ್ಟಿ, ಸದಸ್ಯರು, ತಾಂತ್ರಿಕ ತೀರ್ಪುಗಾರ ಮಂಡಳಿ
ಅರ್ಹ ವ್ಯಕ್ತಿಗಳಿಗೆ ಸಮ್ಮಾನ
‘ಪ್ರಜಾವಾಣಿ ಸಿನಿ ಸಮ್ಮಾನ’ದ ಮುಖ್ಯ ತೀರ್ಪುಗಾರರ ಮಂಡಳಿಯ ಭಾಗವಾಗಿರುವುದಕ್ಕೆ ತುಂಬ ಖುಷಿಯಿದೆ. ಕಳೆದ ಮೂರು ವರ್ಷಗಳಿಂದ ಬಹಳ ಅರ್ಥಪೂರ್ಣವಾಗಿ ನಡೆಯುತ್ತಿರುವ ಪ್ರಶಸ್ತಿ ಪ್ರದಾನ ಸಮಾರಂಭವಿದು. ನಾನು ಮೊದಲ ಸಲ ಈ ಪ್ರಕ್ರಿಯೆಯ ಭಾಗವಾಗಿರುವೆ. ಆಯ್ಕೆ ಪ್ರಕ್ರಿಯೆ ತುಂಬ ಸ್ಪಷ್ಟತೆಯಿಂದ ಕೂಡಿದೆ. ತೀರ್ಪುಗಾರರ ಆಯ್ಕೆ ಪ್ರಕ್ರಿಯೆಯಿಂದ ಹಿಡಿದು, ತಾಂತ್ರಿಕ ತೀರ್ಪುಗಾರರಿಂದ ಆಯ್ಕೆ, ಓದುಗರ ಆಯ್ಕೆಯನ್ನೂ ಪರಿಗಣಿಸಿರುವುದು ವಿಶಿಷ್ಟ ಪರಿಕಲ್ಪನೆ. ಚಿತ್ರರಂಗದ ಅರ್ಹ ವ್ಯಕ್ತಿಗಳಿಗೆ ಪ್ರಶಸ್ತಿ ನೀಡುವ ಕೆಲಸವನ್ನು ‘ಪ್ರಜಾವಾಣಿ’ ಮಾಡುತ್ತಿರುವುದು ಅಭಿನಂದನೀಯ. ಈ ವರ್ಷ ಕೂಡ ಅರ್ಹರಿಗೆ ಪ್ರಶಸ್ತಿ ಸಿಗಲಿದೆ ಎನ್ನುವ ಭರವಸೆ ನನಗಿದೆ.
–ಅನು ಪ್ರಭಾಕರ್, ಸದಸ್ಯರು, ಮುಖ್ಯ ತೀರ್ಪುಗಾರ ಮಂಡಳಿ
ಇಲ್ಲಿ ಪ್ರಶಸ್ತಿ ಹಂಚಲ್ಲ
‘ಪ್ರಜಾವಾಣಿ’ಯು ತನ್ನ ವಿಶ್ವಾಸಾರ್ಹತೆಯಿಂದ ಗುರುತಿಸಿಕೊಂಡಿದೆ. ಇಂತಹ ಸಂಸ್ಥೆ ನೀಡುವ ಪ್ರಶಸ್ತಿಗೂ ಅಷ್ಟೇ ವಿಶ್ವಾಸಾರ್ಹತೆ ಇರುತ್ತದೆ. ಇಲ್ಲಿ ಮುಖ್ಯವಾಗಿ ಪ್ರಶಸ್ತಿಗಳನ್ನು ಹಂಚಲ್ಲ. ಅರ್ಹರನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡಲಾಗಿದೆ. ಚಿಕ್ಕಂದಿನಿಂದಲೂ ಓದಿಕೊಂಡು ಬಂದ ಪತ್ರಿಕೆ ಇದು. ಇಂತಹ ಪತ್ರಿಕೆಯಿಂದ ನನಗೆ ಪ್ರಶಸ್ತಿ ಸಿಕ್ಕಾಗ
ಖುಷಿಯಾಗಿತ್ತು. ಚೊಚ್ಚಲ ಸಿನಿಮಾವನ್ನು ಒಂದೇ ಸಲ ಮಾಡಲು ಸಾಧ್ಯ. ಹೀಗಿರುವಾಗ ನನ್ನ ಮೊದಲ ಸಿನಿಮಾ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ಗೆ ಜನಮನ್ನಣೆ, ಪ್ರಶಸ್ತಿ, ವಿಮರ್ಶಕರ ಮೆಚ್ಚುಗೆ ಸಿಕ್ಕಾಗ ಖುಷಿ ದುಪ್ಪಟ್ಟಾಗಿತ್ತು.
–ನಿತಿನ್ ಕೃಷ್ಣಮೂರ್ತಿ, ನಿರ್ದೇಶಕ
ಸಹ ಪ್ರಾಯೋಜಕರು: ಟಿಟಿಕೆ ಪ್ರೆಸ್ಟೀಜ್, ಫ್ರೀಡಂ ಹೆಲ್ತಿ ಕುಕ್ಕಿಂಗ್ ಆಯಿಲ್, ಹೋಂಡಾ, ವಿ, ಸದ್ಗುರು ಆಯುರ್ವೇದ, ದಿ ಬೆಂಗಳೂರ್ ಸಿಟಿ ಕೊ–ಆಪರೇಟಿವ್ ಬ್ಯಾಂಕ್, ದಿ ಜನತಾ ಕೊ–ಆಪರೇಟಿವ್ ಬ್ಯಾಂಕ್, ಕೆಎಸ್‌ಡಿಎಲ್, ಎನ್‌ಬಿಸಿಸಿ ಲಿಮಿಟೆಡ್. ಮೊಬಿಲಿಟಿ ಪಾರ್ಟ್‌ನರ್: ಮರ್ಸಿಡೀಸ್ ಬೆಂಜ್–ಅಕ್ಷಯ್ ಮೋಟರ್ಸ್.
ಬ್ಯಾಂಕಿಂಗ್ ಪಾರ್ಟ್‌ನರ್: ಕೆನರಾ ಬ್ಯಾಂಕ್. ಸ್ಟೈಲ್ ಪಾರ್ಟ್‌ನರ್: ಬಿ.ಎಸ್. ಚನ್ನಬಸಪ್ಪ ಆ್ಯಂಡ್ ಸನ್ಸ್. ಟ್ರಾವೆಲ್ ಪಾರ್ಟ್‌ನರ್: ಟ್ರಾವೆಲ್‌ಮಾರ್ಟ್. ವಾರ್ಡ್‌ರೋಬ್ ಪಾರ್ಟ್‌ನರ್: ನ್ಯುಮೆನ್.ನಾಲೆಜ್ ಪಾರ್ಟ್‌ನರ್ಸ್: ಇನ್‌ಸೈಟ್ಸ್‌ಐಎಎಸ್ ಮತ್ತು ಗೀತಂ ಬೆಂಗಳೂರು.ಇನ್‌ಶ್ಯೂರೆನ್ಸ್ ಪಾರ್ಟ್‌ನರ್: ನ್ಯಾಷನಲ್ ಇನ್‌ಶ್ಯೂರೆನ್ಸ್.
ಟೆಲಿಕಾಸ್ಟ್ ಪಾರ್ಟ್‌ನರ್: ಜೀ ಕನ್ನಡ. ಆಡಿಟ್ ಪಾರ್ಟ್‌ನರ್: ಇ ಆ್ಯಂಡ್ ವೈ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.