ADVERTISEMENT

ಮಾನಹಾನಿ ಪ್ರಕರಣ: ಕಂಗನಾ ರನೌತ್‌ಗೆ ಸಮನ್ಸ್‌ ಜಾರಿ

ಪಿಟಿಐ
Published 1 ಫೆಬ್ರುವರಿ 2021, 9:52 IST
Last Updated 1 ಫೆಬ್ರುವರಿ 2021, 9:52 IST
ಕಂಗನಾ ರನೌತ್‌
ಕಂಗನಾ ರನೌತ್‌   

ಮುಂಬೈ: ಖ್ಯಾತ ಗೀತ ರಚನೆಕಾರ ಜಾವೇದ್ ಅಖ್ತರ್ ಅವರು ದಾಖಲಿಸಿದ್ದ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ ನಟಿ ಕಂಗನಾ ರನೌತ್ ಅವರಿಗೆ ಮುಂಬೈ ಕೋರ್ಟ್‌ ಸಮನ್ಸ್‌ ಜಾರಿ ಮಾಡಿದೆ.

‘ಜಾವೇದ್‌ ಅಖ್ತರ್‌ ಅವರು ಕಂಗನಾ ರನೌತ್‌ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುವ ಅಗತ್ಯವಿದೆ’ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಡಿಸೆಂಬರ್‌ನಲ್ಲಿ ಅಂಧೇರಿ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ರವರು ಜುಹೂ ಪೊಲೀಸರಿಗೆ ನಿರ್ದೇಶನ ನೀಡಿದ್ದರು.

ADVERTISEMENT

ಈ ಬಗ್ಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಿರುವ ‍ಪೊಲೀಸರು, ‘ಹೆಚ್ಚಿನ ತನಿಖೆಯ ನಡೆಸುವ ಅವಶ್ಯಕತೆ ಇದೆ’ ಎಂದು ಹೇಳಿದ್ದಾರೆ.

ಈ ವರದಿಯನ್ನು ಪರಿಶೀಲಿಸಿದ ಮ್ಯಾಜಿಸ್ಟ್ರೇಟ್‌ ಆರ್‌.ಆರ್‌ ಖಾನ್‌ ಅವರು, ಕಂಗನಾ ರನೌತ್‌ಗೆ ಸಮನ್ಸ್‌ ಜಾರಿ ಮಾಡಿದ್ದಾರೆ. ಮುಂದಿನ ವಿಚಾರಣೆಯ ದಿನಾಂಕವನ್ನು ಮಾರ್ಚ್‌ 1 ಕ್ಕೆ ನಿಗದಿ ಮಾಡಿದ್ದಾರೆ.

‘ಈ ಹಿಂದೆ ಕಂಗನಾ ರನೌತ್‌ಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ಜಾರಿಯಾಗಿತ್ತು. ಆದರೆ ಅವರು ಅದಕ್ಕೆ ಪ್ರತಿಕ್ರಿಯಿಸಿರಲಿಲ್ಲ’ ಎಂದು ಜಾವೇದ್‌ ಅಖ್ತರ್‌ ಅವರ ಪರ ವಕೀಲ ಜೈ ಕುಮಾರ್‌ ಭಾರಧ್ವಜ್‌ ಅವರು ಸೋಮವಾರ ನ್ಯಾಯಾಲಯಕ್ಕೆ ತಿಳಿಸಿದರು.

ಕಂಗನಾ ರನೌತ್‌ ಸಂದರ್ಶನವೊಂದರಲ್ಲಿ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ‍ಪ್ರಕರಣ ಸಂಬಂಧಿಸಿದಂತೆ ತಮ್ಮ ಮೇಲೆ ಆಧಾರ ರಹಿತ ಆರೋಪಗಳನ್ನು ಮಾಡಿದ್ದಾರೆ ಎಂದು ಜಾವೇದ್‌ ಅಖ್ತರ್‌ ಅವರು ಮಾನಹಾನಿ ಮೊಕದ್ದಮೆ ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.