ADVERTISEMENT

ಕಾಂತಾರವನ್ನು ಶ್ಲಾಘಿಸಿದ ಡಾಲಿ ಧನಂಜಯ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಅಕ್ಟೋಬರ್ 2022, 9:34 IST
Last Updated 24 ಅಕ್ಟೋಬರ್ 2022, 9:34 IST
   

ರಿಷಬ್‌ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಐದನೇ ವಾರವೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬಹು ನಿರೀಕ್ಷಿತ ಡಾಲಿ ಧನಂಜಯ್‌ ಅಭಿನಯದ ‘ಹೆಡ್‌ಬುಷ್‌’ಚಿತ್ರ ತೆರೆಗೆ ಬಂದರೂ ಕಾಂತಾರದ ಕ್ರೇಜ್‌ ಕಡಿಮೆಯಾಗಿಲ್ಲ. ತಮ್ಮ ಚಿತ್ರ ಪ್ರದರ್ಶನ ಕಾಣುತ್ತಿರುವುದರ ನಡುವೆಯೇ ಡಾಲಿ ಧನಂಜಯ್‌ ಕಾಂತಾರವನ್ನು ವೀಕ್ಷಿಸಿ, ಕನ್ನಡದ ಹೆಮ್ಮೆಯ ಚಿತ್ರ ಎಂದಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಡಾಲಿ, “ಕಾಂತಾರ” ನನ್ನ “ಹೆಡ್ ಬುಷ್” ಸಿನಿಮಾ ಕೆಲಸದ ನಡುವೆ ನೋಡೋದು ತಡವಾಯಿತು. ಪ್ರೀತಿಯ ಗೆಳೆಯ ರಿಷಬ್ ಒಳಗಿನ ಬರಹಗಾರ, ನಟ ಹಾಗು ನಿರ್ದೇಶಕನ ಅಭಿಮಾನಿಯಾದೆ. ಎಂತಹ ಅನುಭವಿದು. ಗೆಳತಿ ಸಪ್ತಮಿಯ ಮುಗ್ಧತೆ ಇಷ್ಟವಾಯಿತು. ಕಾಂತಾರ ಖಂಡಿತವಾಗಿಯೂ ಕನ್ನಡದ ಹೆಮ್ಮೆಯ ಚಿತ್ರ ಎಂದಿದ್ದಾರೆ.

ಶೂನ್ಯ ನಿರ್ದೇಶಿಸಿ, ಅಗ್ನಿ ಶ್ರೀಧರ್‌ ರಚಿಸಿರುವ ಹೆಡ್‌ಬುಷ್‌ ಬೆಂಗಳೂರು ಭೂಗತ ಜಗತ್ತಿನ ಜಯರಾಜ್‌ ಬದುಕಿನ ಕಥೆ. ರಕ್ತಸಿಕ್ತ ಅಧ್ಯಾಯದ ಚಿತ್ರಕ್ಕೆ ಡಾಲಿ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದಾಗ್ಯೂ ಕಾಂತಾರ ಬಾಕ್ಸ್‌ ಆಫೀಸ್‌ನಲ್ಲಿ ಹೊಸತಾಗಿ ತೆರೆಗೆ ಬಂದ ಚಿತ್ರಗಳನ್ನು ಮೀರಿ ಗಳಿಕೆ ಕಾಣುತ್ತಿದೆ. ಹಿಂದಿ ಸೇರಿದಂತೆ ಡಬ್‌ ಉಳಿದ ಭಾಷೆಗಳಲ್ಲಿಯೂ ಎರಡನೇ ವಾರವೂ ಚಿತ್ರ ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿದೆ.

ADVERTISEMENT

ಬಾಲಿವುಡ್‌ ಸೇರಿದಂತೆ ತಮಿಳು, ತೆಲುಗಿನ ಅನೇಕ ನಟ,ನಟಿಯರು, ನಿರ್ದೇಶಕರು ಈಗಾಗಲೇ ಕಾಂತಾರವನ್ನು ಮೆಚ್ಚಿ ಟ್ವೀಟ್‌ ಮಾಡಿದ್ದಾರೆ.

‘ಕಾಂತಾರ’, ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಘರ್ಷದ ಕಥೆಯಾಗಿದ್ದು, ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ರಿಷಬ್‌ ಶೆಟ್ಟಿ ಜೊತೆಗೆ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ. ಹೊಂಬಾಳೆ ಫಿಲಂಸ್‌ ಚಿತ್ರವನ್ನು ನಿರ್ಮಿಸಿದೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಅರವಿಂದ್ ಕಶ್ಯಪ್ ಛಾಯಾಗ್ರಹಣವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.