ADVERTISEMENT

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ: ಸಿನಿ ಪಯಣ ನೆನೆದು ಮೋಹನ್‌ಲಾಲ್ ಭಾವುಕ

ಪಿಟಿಐ
Published 21 ಸೆಪ್ಟೆಂಬರ್ 2025, 5:34 IST
Last Updated 21 ಸೆಪ್ಟೆಂಬರ್ 2025, 5:34 IST
ಮೋಹನ್‌ಲಾಲ್
ಮೋಹನ್‌ಲಾಲ್   

ಕೊಚ್ಚಿ: ಮಲಯಾಳಂ ಚಿತ್ರರಂಗದ ಹಿರಿಯ ನಟ ಮೋಹನ್‌ಲಾಲ್‌ ಅವರಿಗೆ ಭಾರತೀಯ ಸಿನಿಮಾ ಕ್ಷೇತ್ರದ ಅತ್ಯುನ್ನತ ಗೌರವ ‘ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ’ಯನ್ನು ಕೇಂದ್ರ ಸರ್ಕಾರ ಶನಿವಾರ ಘೋಷಿಸಿದೆ.

ಈ ಸಂಬಂಧ ಮೊದಲ ಬಾರಿಗೆ ಪ್ರಕ್ರಿಯಿಸಿರುವ ಮೋಹನ್‌ಲಾಲ್‌, ನನ್ನ ಸಿನಿ ಪಯಣದಲ್ಲಿ ಭಾಗಿಯಾದ ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ. ನನಗೆ ಸಂದ ಗೌರವವನ್ನು ಮಲಯಾಳಂ ಚಲನಚಿತ್ರೋದ್ಯಮಕ್ಕೆ ಅರ್ಪಿಸುತ್ತೇನೆ ಎಂದಿದ್ದಾರೆ.

ಚಿತ್ರೋದ್ಯಮಕ್ಕೆ ಇನ್ನಷ್ಟು ಪ್ರಶಸ್ತಿಗಳು ಬರಲಿ. ಈ ಮನ್ನಣೆ ಹೊಸ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ. ಈ ವೇಳೆ ಸಿನಿ ಪಯಣವನ್ನು ಮೆಲುಕು ಹಾಕಿದ ಮೋಹನ್‌ಲಾಲ್‌ ಭಾವುಕರಾದರು. ಪ್ರೇಕ್ಷಕರು, ಪೋಷಕರು ಮತ್ತು ದೇಶಕ್ಕೂ ನಾನು ಋಣಿಯಾಗಿದ್ದೇನೆ. ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದ್ದಾರೆ.

ADVERTISEMENT

ಸಿನಿಮಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಭಾರತೀಯ ಸಿನಿಮಾದ ಪಿತಾಮಹ ದಾದಾಸಾಹೇಬ್‌ ಫಾಲ್ಕೆ ಹೆಸರಿನಲ್ಲಿ ಈ ಪ್ರಶಸ್ತಿ ಸ್ಥಾಪಿಸಲಾಗಿದೆ.

2023ನೇ ಸಾಲಿನ ಪ್ರಶಸ್ತಿಗೆ 65 ವರ್ಷದ ಮೋಹನ್‌ಲಾಲ್‌ ಅವರನ್ನು ಆಯ್ಕೆ ಮಾಡಿರುವ ವಿಷಯವನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್‌ ಶನಿವಾರ ‘ಎಕ್ಸ್‌’ನಲ್ಲಿ ಪ್ರಕಟಿಸಿದ್ದಾರೆ. ಸೆಪ್ಟೆಂಬರ್‌ 23ರಂದು ನಡೆಯಲಿರುವ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

‘ಸಿನಿಮಾ ಕ್ಷೇತ್ರದಲ್ಲಿ ಮೋಹನ್‌ಲಾಲ್ ಅವರ ಅಸಾಧಾರಣ ಪ್ರಯಾಣವು ಹಲವು ಪೀಳಿಗೆಗಳಿಗೆ ಸ್ಫೂರ್ತಿ ನೀಡುತ್ತದೆ’ ಎಂದು ಸಚಿವಾಲಯ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.