ADVERTISEMENT

ಯಶಸ್ಸಿನ ಬೆನ್ನೇರಿ ಕೃಷ್ಣ ಸವಾರಿ

ಸಂದರ್ಶನ

ಕೆ.ಎಂ.ಸಂತೋಷಕುಮಾರ್
Published 12 ನವೆಂಬರ್ 2020, 16:56 IST
Last Updated 12 ನವೆಂಬರ್ 2020, 16:56 IST
ಡಾರ್ಲಿಂಗ್‌ ಕೃಷ್ಣ
ಡಾರ್ಲಿಂಗ್‌ ಕೃಷ್ಣ   

‘ಲವ್‌ ಮಾಕ್ಟೇಲ್’ ಖ್ಯಾತಿಯ ಡಾರ್ಲಿಂಗ್‌ ಕೃಷ್ಣ ಅವರಿಗೆ ನಿಜಕ್ಕೂ ಈಗ ಅದೃಷ್ಟ ಖುಲಾಯಿಸಿದೆ. ಈಗ ಅವರ ಖಾತೆಯಲ್ಲಿರುವ ಹೊಸ ಸಿನಿಮಾಗಳ ಸಂಖ್ಯೆ ಏರುತ್ತಿದೆ. ಈಗ ಅವರು ಬ್ಯುಸಿ ನಟ. ತಮ್ಮ ಬಾಳ ಸಂಗಾತಿಯಾಗಲಿರುವ ನಟಿ, ನಿರ್ಮಾಪಕಿ ಮಿಲನಾ ನಾಗಾರಾಜ್‌ ಜತೆಗೆ ಸೇರಿ ನಟಿಸಿ, ನಿರ್ದೇಶಿಸಿ ಹಾಗೂ ನಿರ್ಮಿಸಿದ್ದ ‘ಲವ್‌ ಮಾಕ್ಟೇಲ್‌’ ಭರ್ಜರಿ ಯಶಸ್ಸನೇ ತಂದುಕೊಟ್ಟಿತು. ಈ ಯಶಸ್ಸಿನ ಅಲೆಯಲ್ಲಿ ಮೈಮರೆಯದೇ ಅವರು ‘ಲವ್‌ ಮಾಕ್ಟೇಲ್‌–2’ ಸೀಕ್ವೆಲ್‌ ಶುರು ಮಾಡಿದ್ದಾರೆ. ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳುವ ಜತೆಗೆ ನಾಯಕನಾಗಿಯೂ ನಟಿಸುತ್ತಿದ್ದಾರೆ.

2020ರಲ್ಲಿ ಕೊರೊನಾ ಲಾಕ್‌ಡೌನ್‌ ಎಲ್ಲರ ಕೈ ಕಟ್ಟಿ ಹಾಕಿದ್ದರೂ ಯೋಚನೆಗಳು ಮತ್ತು ಯೋಜನೆಗಳನ್ನೇನು ಕಟ್ಟಿಹಾಕಲು ಸಾಧ್ಯವಾಗಲಿಲ್ಲ ಎನ್ನುವುದಕ್ಕೆ ಡಾರ್ಲಿಂಗ್‌ ಕೃಷ್ಣ ಈ ವರ್ಷ ಕೈಗೆತ್ತಿಕೊಂಡಿರುವ ಸಿನಿಮಾಗಳೇ ಸಾಕ್ಷಿ. ತಮ್ಮ ಹೊಸ ಸಿನಿಮಾಗಳ ಕುರಿತು ಮಾತಿಗಾರಂಭಿಸಿದ ಅವರು, ‘ಲವ್‌ ಮಾಕ್ಟೇಲ್‌ 2 ಶೇ 60ರಷ್ಟು ಚಿತ್ರೀಕರಣ ಪೂರ್ಣಗೊಳಿಸಿರುವೆ. ಈ ಚಿತ್ರದ ಮುಖೇನ ಹೊಸ ಮುಖ ರಚೇಲ್‌ ಡೇವಿಡ್‌ ಅವರನ್ನು ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಪರಿಚಯಿಸುತ್ತಿದ್ದೇವೆ. ಮುಂದಿನ ಹಂತದ ಚಿತ್ರೀಕರಣ ಬೆಂಗಳೂರು ಮತ್ತು ಮಡಿಕೇರಿಯಲ್ಲಿ ನಡೆಸುವ ಯೋಜನೆ ಇದೆ. ಡಿಎ, ಎಡಿಟಿಂಗ್‌ ಹಾಗೂ ಡಬ್ಬಿಂಗ್‌ ಕೆಲಸ ಕೂಡ ಆಗಿದೆ. ಚಿತ್ರಮಂದಿರಗಳ ಸಹಜ ಸ್ಥಿತಿಗೆ ಬರುವವರೆಗೆ ಈ ಸಿನಿಮಾ ಬಿಡುಗಡೆ ಮಾಡುವುದಿಲ್ಲ. ಆ ಕಾರಣಕ್ಕಾಗಿಯೇ ಶೂಟಿಂಗ್‌ ವಿಳಂಬ ಮಾಡುತ್ತಿರುವೆ’ ಎಂದು ಮಾತು ವಿಸ್ತರಿಸಿದರು.

‘ನಾಗಶೇಖರ್‌ ನಿರ್ದೇಶನದಲ್ಲಿ ‘ಶ್ರೀಕೃಷ್ಣ@ಜಿಮೇಲ್‌ಡಾಟ್‌ಕಾಂ’ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದು, ಶೇ 70ರಷ್ಟು ಚಿತ್ರೀಕರಣ ಮುಗಿದಿದೆ. ಇದರಲ್ಲಿ ನನ್ನದು ಸ್ಟೀವರ್ಡ್‌ ಪಾತ್ರ. ಹಾಗೆಯೇ ನಾಯ್ಡು ನಿರ್ದೇಶನದ ‘ವರ್ಜಿನ್‌’ ಚಿತ್ರದಲ್ಲಿ ಮದುವೆಯಾಗುವ ಮಯಸ್ಸಿನಲ್ಲಿರುವ ಯುವಕನ ಪಾತ್ರಕ್ಕೆ ಬಣ್ಣ ಹಚ್ಚುತ್ತಿರುವೆ, ಇದರ ಟಾಕಿ ಪೋರ್ಷನ್‌ ಮುಗಿದಿದೆ. ಮುಂದಿನ ತಿಂಗಳಿನಿಂದ ಚಿತ್ರೀಕರಣ ಶುರುವಾಗಲಿದೆ. ಹಾಗೆಯೇ ದೀಪಕ್ ಅರಸ್ ನಿರ್ದೇಶನದ ‘ಶುಗರ್‌ ಫ್ಯಾಕ್ಟರಿ’ ಚಿತ್ರ ಕೂಡ ಒಪ್ಪಿಕೊಂಡಿರುವೆ. ಶುಗರ್‌ ಫ್ಯಾಕ್ಟರಿ ಎಂದರೆ ಒಂದು ಪಬ್ಬಿನ ಹೆಸರು, ಪಬ್ಬಿನಲ್ಲಿ ನಡೆಯುವ ಘಟನೆಗಳೇ ಈ ಚಿತ್ರದ ಕಥಾಹಂದರ. ಇದೊಂದು ಲವ್‌ ಕಮ್‌ ರೊಮ್ಯಾಂಟಿಕ್‌ ಕಥೆಯ ಚಿತ್ರ. ಮಾಡರ್ನ್‌ ಯುವಕನ ಪಾತ್ರ ನನ್ನದು. ಇಂದಿನ ಕಾಲಘಟ್ಟದ 18–20ರ ಹರೆಯದ ಯುವಕರ ಯೋಚನಾ ಲಹರಿ ಏನಿರುತ್ತವೆ ಎನ್ನುವುದನ್ನು ಈ ಪಾತ್ರ ತೆರೆದಿಡಲಿದೆ’ ಎನ್ನುವ ಮಾತು ಸೇರಿಸಿದರು ಕೃಷ್ಣ. ಈ ಚಿತ್ರದಲ್ಲಿ ಸೋನಲ್‌ ಮೊಂತೆರೊ ಜತೆಗಿನ ನಟನೆಯ ಕೆಮಿಸ್ಟ್ರಿ ಹೇಗಿರಲಿದೆ ಎಂದು ಕೇಳಿದರೆ, ನಟಿಸಿದ ಮೇಲೆ ನೋಡಬೇಕು, ನಾನಿನ್ನು ಅವರನ್ನು ಭೇಟಿ ಮಾಡಿಲ್ಲ. ರಿಹರ್ಸಲ್‌, ವರ್ಕ್‌ಶಾಪ್‌ ಕೂಡ ನಡೆದಿಲ್ಲ ಎಂದಷ್ಟೇ ಹೇಳಿದರು.

ADVERTISEMENT

ವೈಯಕ್ತಿಕ ಬದುಕಿನ ಬಗ್ಗೆ ಪ್ರಶ್ನೆ ಎದುರಾದಾಗ, ‘ನನ್ನ ಮತ್ತು ಮಿಲನಾ ನಾಗರಾಜ್‌ ಅವರ ಪರಿಚಯ, ಮಾತುಕತೆ, ಸ್ನೇಹ, ಪ್ರೀತಿ, ಈಗ ದಾಂಪತ್ಯದತ್ತ ಹೊರಳಿದ್ದೇವೆ. ಮಿಲನಾ ಜತೆಗೆ ನನ್ನ ಜರ್ನಿ ಶುರುವಾಗಿದ್ದು 2014ರಲ್ಲಿ. ಅವರನ್ನು ಭೇಟಿಯಾದಾಗಲೇ ಮದುವೆ ಆಗೋಣವೇ ಎಂದು ಕೇಳಿದ್ದೇ, ಅವರು ಯೋಚಿಸಿ ಹೇಳುವುದಾಗಿ ಸಮಯ ಕೇಳಿದ್ದರು. ಆಗಾಗ ಪರಸ್ಪರ ಮಾತನಾಡುತ್ತಿದ್ದೆವು. ಮಾತುಕತೆಯೇ ಸ್ನೇಹ ಬೆಳೆಸಿತು, ಸ್ನೇಹ ಗಾಢವಾದ ಪ್ರೀತಿಗೆ ತಿರುಗಿಸಿತು. ಬದುಕಿನಲ್ಲಿ ಯಶಸ್ಸು ಸಿಕ್ಕ ತಕ್ಷಣ ಮದುವೆಯಾಗೋಣ ಎಂದು ನಿರ್ಧರಿಸಿದ್ದೆವು. ಅದು 2021ರವರೆಗೆ ಎಳೆಯಿತು’ ಎಂದು ಕೃಷ್ಣ ಹೇಳಿದರು.

‘ನಾವಿಬ್ಬರು ಈ ಅವಧಿಯಲ್ಲಿ ಕಷ್ಟವನ್ನೇ ಹೆಚ್ಚು ನೋಡಿದ್ದೇವೆ, ಕಷ್ಟದಲ್ಲಿ ಜತೆಯಾಗಿದ್ದಾಗಲೇ ಸಂಬಂಧಗಳು ಗಟ್ಟಿಯಾಗುವುದು ಮತ್ತು ಪರಸ್ಪರ ಅರಿತುಕೊಳ್ಳಲು ಸಾಧ್ಯವಾಗುವುದು. ಈ ಆರು ವರ್ಷಗಳ ಅವಧಿ ನಮ್ಮಲ್ಲಿ ಒಂದಿಷ್ಟು ಹೆಚ್ಚು ಅನ್ಯೋನ್ಯತೆಯನ್ನು ಬೆಳೆಸಿದೆ ಎನ್ನಲಡ್ಡಿಯಿಲ್ಲ’ ಎನ್ನಲು ಅವರು ಮರೆಯಲಿಲ್ಲ.

ಮದುವೆ ಹೇಗಿರಲಿದೆ ಎನ್ನುವ ಪ್ರಶ್ನೆಗೆ ‘ಅದ್ಧೂರಿಯೇ ಅಥವಾ ಸಾಮಾನ್ಯವೇ ಎನ್ನುವುದು ಗೊತ್ತಿಲ್ಲ. ನನ್ನ ಪ್ರಕಾರ ಅದ್ಧೂರಿ ಎನ್ನುವುದಕ್ಕೆ ಮಿತಿಯೇ ಇರುವುದಿಲ್ಲ. ಒಂದಂತು ನಿಜ, ನಮ್ಮ ಮದುವೆಯಲ್ಲಿ ವಿಶೇಷತೆಯಂತೂ ಇದ್ದೇ ಇರುತ್ತದೆ. ಯಾವಾಗಲೂ ಸಿನಿಮಾವನ್ನು ಪ್ರೇಕ್ಷಕನ ಇಷ್ಟಕ್ಕೆ ಅನುಸಾರವಾಗಿ ಮಾಡುತ್ತೇವೆ, ಮದುವೆ ಮದುಮಗ– ಮದುಮಗಳ ಇಶಾರೆಗೆ ಅನುಸಾರವಾಗಿ ನಡೆಯಬೇಕು’ ಎನ್ನುವುದು ಕೃಷ್ಣ ಪ್ರತಿಕ್ರಿಯೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.