ADVERTISEMENT

ದರ್ಶನ್‌ರ The Devilಗೆ ಅಭಿಮಾನಿಗಳು ಫುಲ್ ಮಾರ್ಕ್ಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಡಿಸೆಂಬರ್ 2025, 7:50 IST
Last Updated 11 ಡಿಸೆಂಬರ್ 2025, 7:50 IST
<div class="paragraphs"><p>ನಟ ದರ್ಶನ್&nbsp;</p></div>

ನಟ ದರ್ಶನ್ 

   

ದಿ ಡೆವಿಲ್ ಸಿನಿಮಾ ಇಂದು (ಗುರುವಾರ) ರಾಜ್ಯಾದ್ಯಂತ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ರಾಜ್ಯಾದ್ಯಂತ 500ಕ್ಕೂ ಅಧಿಕ ಪರದೆಯಲ್ಲಿ ಬಿಡುಗಡೆಯಾಗಿರುವ ದಿ ಡೆವಿಲ್‌ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ದ್ವಿಪಾತ್ರ ಅಭಿನಯದಲ್ಲಿ ನಟ ದರ್ಶನ್:

ದಿ ಡೆವಿಲ್ ಸಿನಿಮಾದಲ್ಲಿ ನಟ ದರ್ಶನ್ ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಪಾತ್ರದಲ್ಲಿ ಸಾಮಾನ್ಯ ವ್ಯಕ್ತಿಯಾಗಿಯೂ, ಇನ್ನೊಂದು ಪಾತ್ರದಲ್ಲಿ ಮುಖ್ಯಮಂತ್ರಿ ಮಗ ಹಾಗೂ ವಿದೇಶದಲ್ಲಿರುವ ಡಾನ್ ಪಾತ್ರದಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸಿನಿಮಾ ಆರಂಭವಾಗಿ 20 ನಿಮಿಷಗಳವರೆಗೂ ಪ್ರೇಕ್ಷಕರನ್ನು ಕಥೆ ಅಲ್ಲಲ್ಲಿ ಸುತ್ತಾಡಿಸುತ್ತದೆ. ಬಳಿಕ ಅಸಲಿ ಕಥೆ ತೆರೆದುಕೊಳ್ಳುತ್ತಾ ಸಾಗುತ್ತದೆ.

ADVERTISEMENT

ರಾಜಕೀಯ ಕುಟುಂಬವೊಂದು ತಮ್ಮ ಲಾಭಕ್ಕಾಗಿ ಸಾಮಾನ್ಯ ವ್ಯಕ್ತಿಯನ್ನು ಹೇಗೆಲ್ಲಾ ಬಳಸಿಕೊಳ್ಳುತ್ತದೆ ಎಂಬುದೇ ಸಿನಿಮಾ ಕಥೆಯ ಹಂದರ. ಸಿನಿಮಾದಲ್ಲಿ ‘ರಾಬರ್ಟ್’ ರೀತಿಯಲ್ಲಿ ದರ್ಶನ್‌ ಕಾಣಿಸಿಕೊಂಡಿದ್ದರಾದರೂ, ಇದು ಸಂಪೂರ್ಣ ವಿಭಿನ್ನ ಕಥೆಯಾಗಿದೆ. ರಾಜಕಾರಣಿಯಾಗಿಯೂ ದರ್ಶನ್‌ರನ್ನು ನೋಡುವ ಅವಕಾಶ ಪ್ರೇಕ್ಷಕರಿಗೆ ಈ ಸಿನಿಮಾದಲ್ಲಿ ಸಿಗಲಿದೆ. ಹಾಗಾಗಿ ದರ್ಶನ್ ಲುಕ್‌ ರಾಬರ್ಟ್ ರೀತಿಯಲ್ಲಿದ್ದರೂ ಸಂಪೂರ್ಣ ಹೊಸತನದ ಕಥೆ ಹೆಣೆಯುವಲ್ಲಿ ನಿರ್ದೇಶಕ ಮಿಲನ ಪ್ರಕಾಶ್ ಪ್ರಯತ್ನಕ್ಕೆ ಪ್ರೇಕ್ಷಕರು ಪೂರ್ಣ ಅಂಕ ನೀಡಿದ್ದಾರೆ.

ಪುಟ್ಟ ಹೊಟೆಲ್ ನಡೆಸುತ್ತಿರುವ ಕೃಷ್ಣ (ದರ್ಶನ್) ಸಿನಿಮಾ ಹೀರೋ ಆಗುವ ಕನಸು ಕಾಣುತ್ತಾನೆ. ಇತ್ತ ಸಿಎಂ ಪುತ್ರನಾಗಿದ್ದರೂ, ರಾಜಕೀಯದಲ್ಲಿ ಯಾವುದೇ ಆಸಕ್ತಿ ಹೊಂದಿರದ ಧನುಷ್ ರಾಜಶೇಖರ್ (ದರ್ಶನ್) ಇಬ್ಬರ ಹೋಲಿಕೆಯೂ ಒಂದೇ ಆಗಿರುವುದರಿಂದ ಹೀರೋ ಆಗುವ ಕನಸು ಕಾಣುತ್ತಿದ್ದ ಕೃಷ್ಣನನ್ನು ಸ್ವ ಹಿತಾಸಕ್ತಿಗೆ ಬಳಸಿಕೊಳ್ಳಲು ಮುಖ್ಯಮಂತ್ರಿ ಸಲಹೆಗಾರ ಅನಂತ್ ನಂಬಿಯಾರ್ (ಅಚ್ಯುತ್ ಕುಮಾರ್) ಕಥೆ ಹೆಣೆಯುತ್ತಾರೆ.

ಸಿನಿಮಾದಲ್ಲಿ ಕೃಷ್ಣ ಹೀರೋ ಆಗುತ್ತಾರಾ? ಮುಖ್ಯಮಂತ್ರಿ ಪುತ್ರ ಧನುಷ್ ರಾಜಕಾರಣಿ ಆಗುತ್ತಾರಾ? ಎಂಬುದು ಸಿನಿಮಾದ ಕುತೂಹಲ ಹೆಚ್ಚಿಸಿದೆ. ತಮ್ಮ ಬದುಕಿನ ಮೂಲವೇ ಬೇರೆಯಾದರೂ ಎರಡೂ ಪಾತ್ರಗಳು ಹೇಗೆಲ್ಲಾ ಮುಖಾಮುಖಿಯಾಗಲಿವೆ ಎಂಬುದೇ ಸಿನಿಮಾದ ಮೂಲ ಕಥೆ.

‘ಕಾಟೇರ’ ಬಳಿಕ ದರ್ಶನ್‌ ಅವರನ್ನು ಏಕಪರದೆ ಮೇಲೆ ನೋಡಿದ ಅಭಿಮಾನಿಗಳು ಸಿಕ್ಕಾಪಟ್ಟೆ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಮಾತ್ರವಲ್ಲ, ಸಿನಿಮಾಗೆ ಪೂರ್ಣ ಅಂಕ ನೀಡಿದ್ದಾರೆ.

ಪಾತ್ರಕ್ಕೆ ಜೀವ ತುಂಬಿದ ಅಚ್ಯುತ್ ಕುಮಾರ್

ಇಡೀ ಸಿನಿಮಾಕ್ಕೆ ಮುಖ್ಯಮಂತ್ರಿ ಸಲಹೆಗಾರ (ಚುನಾವಣಾ ಚಾಣಕ್ಯ) ಅನಂತ್ ನಂಬಿಯಾರ್ ಪಾತ್ರದಲ್ಲಿ ನಟಿಸಿರುವ ಅಚ್ಯುತ್ ಕುಮಾರ್ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಒಂದರ್ಥದಲ್ಲಿ ಸಿನಿಮಾ ಕಥೆಯ ಸೂತ್ರದಾರ ಇವರೇ ಎಂಬುವಷ್ಟು. ಸಿನಿಮಾದಲ್ಲಿ ಅವರು ಕೇವಲ ಸಿಎಂ ಸಲಹೆಗಾರ ಆಗಿರದೆ ಪೂರ್ತಿ ಸಿನಿಮಾದ ಕಿಂಗ್ ಮೇಕರ್ ಆಗಿದ್ದಾರೆ.

ಹುಲಿ ಕಾರ್ತಿಕ್ ನಟನೆಗೆ ಅಭಿಮಾನಿಗಳು ಫಿದಾ

ಇನ್ನೂ ದರ್ಶನ್ ಅವರಿಗೆ ಸ್ನೇಹಿತನಾಗಿ ನಟಿಸಿರುವ ಹುಲಿ ಕಾರ್ತಿಕ್ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಎಲ್ಲಿಯೂ ಬೋರ್ ಆಗದ ಹಾಗೆ ಅವರು ನಟಿಸಿದ್ದಾರೆ.

ರಚನಾ ರೈ ನಟನೆ

ನಟಿ ರಚನಾ ರೈ ಅವರು ಕೃಷ್ಣನಿಗೆ ಉತ್ತಮ ಜೋಡಿಯಾಗಿದ್ದಾರೆ. ರುಕ್ಮಿಣಿ ಪಾತ್ರದಲ್ಲಿ ಕಾಣಿಸಿಕೊಂಡ ಅವರು, ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ರಚನಾ ರೈ ನಟನೆ ಯಾವುದೇ ಹಂತದಲ್ಲಿಯೂ ಹೆಚ್ಚು ಅಥವಾ ಕಡಿಮೆ ಎನಿಸುವಂತಿಲ್ಲ.

ಹಾಡುಗಳು

ಆಯಾ ಸಂದರ್ಭಕ್ಕೆ ತಕ್ಕಂತೆ ಬರುವ ‘ಇದ್ರೆ ನೆಮ್ದಿಯಾಗಿರ್ಬೇಕ್’ ಹಾಗೂ ‘ಒಂದೇ ಒಂದು ಸಲ’ ಹಾಡುಗಳು ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿವೆ. ಇವುಗಳನ್ನು ಕೇಳುವುದಕ್ಕಿಂತ ಪರದೆ ಮೇಲೆ ವೀಕ್ಷಿಸುವಾಗ ಖುಷಿ ಎನಿಸುತ್ತದೆ ಎಂದು ಪ್ರೇಕ್ಷಕರು ಹೇಳಿದ್ದಾರೆ.

ಗಿಲ್ಲಿ ನಟ, ವಿನಯ್ ನಟನೆ

ಪ್ರಮುಖ ವಿಲನ್ ರೋಲ್ ಒಂದರಲ್ಲಿ ಕಾಣಿಸಿಕೊಂಡಿರುವ ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ, ಮೊದಲಾರ್ಧದಲ್ಲಿ ಉತ್ತಮವಾಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಗಿಲ್ಲಿ ನಟನ ಕಾಮಿಡಿ ಸಾಂದರ್ಭಿಕ ಎನಿಸದೇ ಇದ್ದರೂ, ಕುಡುಕನ ಪಾತ್ರದ ನಟನೆಗೆ ಪ್ರೇಕ್ಷಕರಿಂದ ಶಿಳ್ಳೆ, ಕೇಕೆಯ ಮೆಚ್ಚುಗೆ ವ್ಯಕ್ತವಾಯಿತು.

ಸಿನಿಮಾ ಮುಗಿದ ಬಳಿಕ ಚಿತ್ರಮಂದಿರದಿಂದ ಹೊರ ಬರುತ್ತಿದ್ದ ಪ್ರೇಕ್ಷಕರ ಮೊಗದಲ್ಲಿ ಯಶಸ್ಸಿನ ಕಳೆ ಇತ್ತು. ಚಿತ್ರ ಗೆದ್ದ ಸಂಭ್ರಮವನ್ನು ಅಭಿಮಾನಿಗಳು ಮಾಧ್ಯಮಗಳಿಗೆ ಹಂಚಿಕೊಳ್ಳುತ್ತಿದ್ದರು. ಇನ್ನೂ ಕೆಲವರು ತಮ್ಮ ಸ್ನೇಹಿತರಿಗೆ ಕರೆ ಮಾಡಿ ಸಿನಿಮಾ ವೀಕ್ಷಿಸುವಂತೆ ಶಿಫಾರಸು ಮಾಡುತ್ತಿದ್ದುದು ಕಂಡುಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.