ADVERTISEMENT

ಶ್ರುತಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಅರ್ಜುನ್ ಸರ್ಜಾ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2018, 12:01 IST
Last Updated 25 ಅಕ್ಟೋಬರ್ 2018, 12:01 IST
   

ಬೆಂಗಳೂರು: ಬಹುಚರ್ಚಿತ ಸ್ಯಾಂಡಲ್‌ವುಡ್#MeToo ಪ್ರಕರಣ ಗುರುವಾರ ಹೊಸ ತಿರುವು ಪಡೆದುಕೊಂಡಿದೆ. #MeToo ಆರೋಪಿ ಸ್ಥಾನದಲ್ಲಿರುವ ನಟ ಅರ್ಜುನ್‌ ಸರ್ಜಾ ತಮ್ಮ ಸೋದರಳಿಯ ಧ್ರುವ ಸರ್ಜಾ ಮೂಲಕ ನಗರದ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ₹5 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಇಂದು ಸಂಜೆ 4 ಗಂಟೆಗೆ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿಸಂಧಾನ ಸಭೆ ನಿಗದಿಯಾಗಿತ್ತು. ಮಾನನಷ್ಟ ಮೊಕದ್ದಮೆ ಹಿನ್ನೆಲೆಯಲ್ಲಿ ಸಂಧಾನ ಸಭೆ ನಡೆಯುವುದು ಅನುಮಾನ ಎಂಬ ಮಾತುಗಳು ಕೇಳಿಬರುತ್ತಿವೆ.

ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷ ಅಂಬರೀಷ್ ಅಧ್ಯಕ್ಷತೆಯಲ್ಲಿ ಸಂಧಾನ ಪ್ರಯತ್ನಗಳು ನಡೆಯಲಿವೆ ಎಂದು ಮೂಲಗಳು ಹೇಳಿವೆ. ಸಂಧಾನ ಮಾತುಕತೆಯಲ್ಲಿಹಿರಿಯ ಕಲಾವಿದರಾದ ಸರೋಜಾದೇವಿ, ಲೋಕನಾಥ್, ಸುಧಾರಾಣಿ, ಪ್ರೇಮಾ, ಚಲನಚಿತ್ರವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್‌.ಎ.ಚಿನ್ನೇಗೌಡ, ನಿರ್ದೇಶಕರ ಸಂಘದ ಅಧ್ಯಕ್ಷ ಡಾ.ವಿ.ನಾಗೇಂದ್ರ ಪ್ರಸಾದ್ ಮತ್ತುನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ಸಹ ಭಾಗವಹಿಸಬೇಕಿತ್ತು.

ಸಂಧಾನ ಮಾತುಕತೆಗಾಗಿ ರೂಪಿಸಿರುವ ಸಮಿತಿಯಲ್ಲಿ ಮೂವರು ಹೆಂಗಸರು ಮತ್ತು ಐವರು ಗಂಡಸರು ಇದ್ದಾರೆ. ಈ ಪೈಕಿ ನಾಗೇಂದ್ರ ಪ್ರಸಾದ್, ಮುನಿರತ್ನ, ಸರೋಜಾದೇವಿ, ಚಿನ್ನೇಗೌಡರು ಈಗಾಗಲೇ ಬಹಿರಂಗವಾಗಿ ಅರ್ಜುನ್ ಸರ್ಜಾ ಪರ ಹೇಳಿಕೆಗಳನ್ನು ನೀಡಿದವರು ಎನ್ನುವುದು ಗಮನಾರ್ಹ ಸಂಗತಿ.

ADVERTISEMENT

ಫೇಸ್‌ಬುಕ್‌ನಲ್ಲಿ ನಿಲುವು ಸ್ಪಷ್ಟಪಡಿಸಿದ ಶ್ರುತಿ

ಪ್ರಕರಣದ ಬಗ್ಗೆ ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟ್ ಪ್ರಕಟಿಸಿರುವ ಶ್ರುತಿ, ‘ಮತ್ತೆ ಮಾತನಾಡಬೇಕಾದ ಕಾಲ ಬಂದಿದೆ. ಸತ್ಯ ಏನು ಎನ್ನುವುದು ನನಗೆ ಹಾಗೂ ಅರ್ಜುನ್ ಸರ್ಜಾ ಅವರಿಗೆ ಮಾತ್ರ ಗೊತ್ತು’ ಎಂದು ಹೇಳಿಕೊಂಡಿದ್ದಾರೆ.

‘ನಾನು ಯಾರ ಪ್ರಚೋದನೆಗೂ ಒಳಗಾಗಿ ನಿಜ ಹೇಳಲು ಮುಂದೆ ಬರಲಿಲ್ಲ. ಅರ್ಜುನ್ ಸರ್ಜಾ ಅವರ ಬಗ್ಗೆ ಮಾಡಿರುವ ಆರೋಪಕ್ಕೆ ನಾನು ಬದ್ಧಳಾಗಿದ್ದೇನೆ. ಅವರು ನ್ಯಾಯಾಲಯಕ್ಕೆ ಹೋದರೆ, ನಾನು ಕಾನೂನು ಪ್ರಕಾರ ಎದುರಿಸಲು ಸಿದ್ಧ. ಘಟನೆಗೆ ಸಂಬಂಧಿಸಿದಂತೆ ಸಾಕ್ಷ್ಯಾಧಾರ ಕೊಡುವ ಅಗತ್ಯ ಇರುವುದು ನ್ಯಾಯಾಲಯಕ್ಕೆ ಮಾತ್ರ; ಇನ್ಯಾರಿಗೂ ಅಲ್ಲ. ನನಗೆ ಬೆದರಿಕೆಗಳು ಬರುತ್ತಿವೆ. ನನ್ನ ಆತ್ಮವಿಶ್ವಾಸ ಕುಗ್ಗಿಸುವ ಪ್ರಯತ್ನ ನಡೆದಿದೆ. ಸತ್ಯವೇ ನನ್ನ ರಕ್ಷಾ ಕವಚ’ ಎಂದು ಹೇಳಿದ್ದಾರೆ.

‘ಕಲಾವಿದರನ್ನು ರಕ್ಷಿಸುವ ಮತ್ತು ನ್ಯಾಯ ಒದಗಿಸುವ ಜವಾಬ್ದಾರಿ ಹೊತ್ತಿರುವಚಲನಚಿತ್ರ ವಾಣಿಜ್ಯ ಮಂಡಳಿಯ ಹಿರಿಯರಾದ ಮುನಿರತ್ನ, ಸಾ.ರಾ.ಗೋವಿಂದು, ಚಿನ್ನೇಗೌಡರು ತರ್ಕಬದ್ಧ ಹಾಗೂ ಸಮಾನ ನ್ಯಾಯ ಕೊಡಬೇಕು. ಮಹಿಳೆಯರಿಗೆ ಚಲನಚಿತ್ರ ಸುರಕ್ಷಿತ ಅಲ್ಲ ಎಂದು ಸ್ಪಷ್ಟವಾಗಿ ಕಾಣುತ್ತಿರುವಾಗ ಅದನ್ನು ಸರಿಪಡಿಸಬೇಕು. ಆದರೆ ಮಾಧ್ಯಮಗಳಲ್ಲಿ ಕುಳಿತು ಸ್ತ್ರೀವಿರೋಧಿ ಮಾತುಗಳನ್ನು ಆಡುತ್ತಿದ್ದೀರಿ. ಕಾಲ ಬದಲಾಗಿದೆ. ಸಾಧ್ಯವಾದರೆ ನೀವೂ ಬದಲಾಗಿ’ ಎಂದು ಮನವಿ ಮಾಡಿದ್ದಾರೆ.

ಸಭೆಗೆ ಹಲವರ ವಿರೋಧ

‘ಸಂಧಾನ ಸಭೆಯ ಹೆಸರಿನಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಹೆಂಗಸರ ಬಾಯ್ಮುಚ್ಚಿಸುವ ಕೆಲಸ ಮಾಡುತ್ತಿದೆ. ಇಂಥ ಸಭೆಗಳಿಂದ ಯಾವುದೇ ಪ್ರಯೋಜನವಿಲ್ಲ’ ಎಂದು ಹಲವರು ಹರಿಹಾಯ್ದಿದ್ದಾರೆ.

ಈ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ದಿನೇಶ್ ಕುಕ್ಕುಜಡ್ಕ, ‘ಈ ಹಿಂದೆಯೂ ಐಂದ್ರಿತಾ ರೇ ಅನ್ನೋ ಹೆಣ್ಣುಮಗಳೊಬ್ಬಳು ಸುಪ್ರಸಿದ್ಧ ನಿರ್ದೇಶಕ ರೊಬ್ಬರ ಮೇಲೆ ಹೀಗೇ ಆರೋಪ ಮಾಡಿದಾಗ, ಹಿರಿಯ ನಟರೆಲ್ಲಾ ಸೇರಿ ಫಿಲಂ ಚೇಂಬರ್‌ನಲ್ಲಿಇದೇ ತರ ಸಂಧಾನಸಭೆ ನಡೆಸಿದ್ದರು. ಮತ್ತು ಆ ಬಳಿಕ ಆ ಹೆಣ್ಣುಮಗಳ ಕೆರಿಯರ್ ಹೆಚ್ಚುಕಮ್ಮಿ ಕೊನೆಯಾಯಿತು’ ಎಂದು ನೆನಪಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.