
ನಟಿ, ರೂಪದರ್ಶಿ ಖುಷಿ ಮುಖರ್ಜಿ ಅವರು ಭಾರತ ಟಿ20 ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರ ಬಗ್ಗೆ ನೀಡಿರುವ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿವೆ. ಸೂರ್ಯಕುಮಾರ್ ಯಾದವ್ ಅವರು ಈ ಹಿಂದೆ ನನಗೆ ಆಗಾಗ ಸಂದೇಶಗಳನ್ನು ಕಳುಹಿಸುತ್ತಿದ್ದರು ಎಂದು ಹೇಳಿಕೊಂಡಿದ್ದ ನಟಿ ವಿರುದ್ಧ ₹100 ಕೋಟಿ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ.
'ಟೈಮ್ಸ್ ಆಫ್ ಇಂಡಿಯಾ' ವರದಿಯ ಪ್ರಕಾರ,ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಫೈಜಾನ್ ಅನ್ಸಾರಿ ಅವರು ಜನವರಿ 13 ರಂದು ಖುಷಿ ಮುಖರ್ಜಿ ವಿರುದ್ಧ ₹ 100 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಮುಂಬೈನಲ್ಲಿ ನೆಲೆಸಿರುವ ಅನ್ಸಾರಿ ಅವರು, ಘಾಜಿಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಖುಷಿ ಅವರ ಹೇಳಿಕೆಗಳು ಸುಳ್ಳು ಮತ್ತು ಸೂರ್ಯಕುಮಾರ್ ಯಾದವ್ ಅವರ ಘನತೆಗೆ ಧಕ್ಕೆ ತರುವಂತಿವೆ ಎಂದೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಖುಷಿ ಮುಖರ್ಜಿ ಅವರು ಸೂರ್ಯಕುಮಾರ್ ಯಾದವ್ ಅವರ ಬಗ್ಗೆ ನೀಡಿದ ಹೇಳಿಕೆಗಳು ಕೇವಲ ಪ್ರಚಾರ ಗಿಟ್ಟಿಸಿಕೊಳ್ಳುವ ಹುನ್ನಾರ. ಅಂತರರಾಷ್ಟ್ರೀಯ ಕ್ರಿಕೆಟಿಗನ ಘನತೆಗೆ ಇದರಿಂದ ಹಾನಿಯಾಗಬಹುದು. ಹಾಗಾಗಿ, ನಟಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಖುಷಿ ಮುಖರ್ಜಿ ವಿರುದ್ಧ ತಕ್ಷಣ ಎಫ್‌ಐಆರ್ ದಾಖಲಿಸಬೇಕೆಂದು ನಾವು ಬಯಸುತ್ತೇವೆ. ಲಿಖಿತ ದೂರಿನಲ್ಲಿಯೂ ಈ ಬಗ್ಗೆ ಉಲ್ಲೇಖಿಸಿದ್ದೇನೆ ಮತ್ತು ಕಠಿಣ ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದೇನೆ. ಅವರ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಬೇಕು. ಇನ್‌ಸ್ಟಾಗ್ರಾಮ್‌ನಲ್ಲಿ ಎರಡು ದಶಲಕ್ಷಕ್ಕೂ ಹೆಚ್ಚು ಜನರು ನನ್ನನ್ನು ಫಾಲೋ ಮಾಡುತ್ತಾರೆ. ಕೋಟ್ಯಂತರ ಜನ ನನ್ನ ವಿಡಿಯೋಗಳನ್ನು ವೀಕ್ಷಿಸುತ್ತಾರೆ ಎಂದು ಅನ್ಸಾರಿ ಹೇಳಿದ್ದಾರೆ.
ಈ ವಿಷಯವನ್ನು ಜಗತ್ತಿನ ಮೂಲೆ ಮೂಲೆಗೂ ಕೊಂಡೊಯ್ಯುವುದು ನನ್ನ ಜವಾಬ್ದಾರಿ. ನಾನು ಯಾರಿಗೂ ಹೆದರುವುದಿಲ್ಲ. ನನಗೆ ನ್ಯಾಯ ಮಾತ್ರ ಬೇಕು. ಎಷ್ಟೇ ತೊಂದರೆಗಳು ಎದುರಾದರೂ ಖುಷಿ ಮುಖರ್ಜಿ ವಿರುದ್ಧ ತಕ್ಷಣ ಎಫ್‌ಐಆರ್ ದಾಖಲಿಸಬೇಕೆಂದು ನಾನು ಒತ್ತಾಯಿಸುತ್ತೇನೆ. ಎಲ್ಲವನ್ನೂ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಈ ಹಿಂದೆ ನಾವು ಪೂನಂ ಪಾಂಡೆ ವಿರುದ್ಧ ₹100 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದೆವು ಎಂದು ಅನ್ಸಾರಿ ತಿಳಿಸಿದ್ದಾರೆ.
ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಖುಷಿ ಮುಖರ್ಜಿ, ‘ಸೂರ್ಯಕುಮಾರ್ ಅವರು ಈ ಹಿಂದೆ ಆಗಾಗ ನನಗೆ ಸಂದೇಶ ಕಳುಹಿಸುತ್ತಿದ್ದರು, ಆದರೆ, ಈಗ ಅವರು ನನ್ನ ಸಂಪರ್ಕದಲ್ಲಿಲ್ಲ’ ಎಂದು ಹೇಳಿದ್ದರು.
ಕ್ರಿಕೆಟಿಗರೊಂದಿಗೆ ಡೇಟಿಂಗ್ ಮಾಡಲು ಬಯಸುತ್ತೀರಾ ಎಂದು ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಖುಷಿ, ‘ನಾನು ಯಾವುದೇ ಆಟಗಾರನೊಂದಿಗೆ ಡೇಟಿಂಗ್ ಮಾಡಲು ಬಯಸುವುದಿಲ್ಲ, ಈ ಹಿಂದೆ ಕೆಲವು ಕ್ರಿಕೆಟಿಗರು ನನ್ನ ಸಂಪರ್ಕದಲ್ಲಿದ್ದರು. ಸೂರ್ಯಕುಮಾರ್ ಯಾದವ್ ನನಗೆ ತುಂಬಾ ಸಂದೇಶ ಕಳುಹಿಸುತ್ತಿದ್ದರು’ ಎಂದು ಖುಷಿ ತಿಳಿಸಿದ್ದರು.
‘ಈಗ ನಾವು ಹೆಚ್ಚು ಮಾತನಾಡುವುದಿಲ್ಲ ಮತ್ತು ಯಾರೊಂದಿಗೂ ಸಂಪರ್ಕ ಹೊಂದುವುದು ನನಗೆ ಇಷ್ಟವಿಲ್ಲ’ ಎಂದೂ ಅವರು ಹೇಳಿದ್ದರು.
ವಿವಾದದ ಬೆನ್ನಲೇ ಖುಷಿ ಮುಖರ್ಜಿ 'ಎನ್‌ಡಿಟಿವಿ'ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಹೇಳಿಕೆಗಳ ಬಗ್ಗೆ ಸ್ಪಷ್ಟನೆ ನೀಡಿದ್ದರು. ಸೂರ್ಯಕುಮಾರ್ ಯಾದವ್ ಅವರೊಂದಿಗೆ ಯಾವುದೇ ಪ್ರಣಯ ಸಂಬಂಧ ಇಲ್ಲ ಎಂದಿದ್ದ ಅವರು, ತಮ್ಮ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.