ADVERTISEMENT

ಡೆಮೊ ಪೀಸ್ ಆಟ ಶುಕ್ರವಾರದಿಂದ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2020, 19:30 IST
Last Updated 11 ಫೆಬ್ರುವರಿ 2020, 19:30 IST
ಭರತ್ ಬೋಪಣ್ಣ ಮತ್ತು ಸೋನಲ್ ಮೊಂತೇರೊ
ಭರತ್ ಬೋಪಣ್ಣ ಮತ್ತು ಸೋನಲ್ ಮೊಂತೇರೊ   

ಸೋನಲ್ ಮೊಂತೇರೊ ಮತ್ತು ಭರತ್ ಬೋಪಣ್ಣ ಅವರು ಕ್ಯೂಟ್ ಜೋಡಿಯಾಗಿ ಕಾಣಿಸಿಕೊಂಡಿರುವ ಸಿನಿಮಾ ‘ಡೆಮೊ ಪೀಸ್’ ಪ್ರೇಮಿಗಳ ದಿನ (ಫೆ. 14) ತೆರೆಗೆ ಬರುತ್ತಿದೆ. ಈ ಚಿತ್ರ ನಿರ್ಮಾಣ ಮಾಡಿರುವವರು ನಟಿ ಸ್ಪರ್ಶ ರೇಖಾ.

‘ಈ ಚಿತ್ರದಲ್ಲಿ ಎಲ್ಲರೂ ಹೊಸಬರು. ಇದು ಪಕ್ಕಾ ಕಮರ್ಷಿಯಲ್ ಆಯಾಮ ಹೊಂದಿರುವ ಸಿನಿಮಾ. ಯುವಕರಿಗೆ ಭರಪೂರ ಮನರಂಜನೆ ನೀಡುವ ಚಿತ್ರ ಇದು’ ಎನ್ನುವುದು ರೇಖಾ ಅವರ ಮಾತು. ಈ ಚಿತ್ರದ ಮೂಲಕ ಅವರು ಮೊದಲ ಬಾರಿಗೆ ಸಿನಿಮಾ ನಿರ್ಮಾಣಕ್ಕೆ ಕೈಹಾಕಿದ್ದಾರೆ.

ಎ. ವಿವೇಕ್ ಅವರು ಈ ಚಿತ್ರ ನಿರ್ದೇಶಿಸಿದ್ದಾರೆ. ‘ಒಂದಿಷ್ಟು ಪ್ರಯೋಗಗಳನ್ನು ನಡೆಸಲು ನಾವು ಡೆಮೊ ಪೀಸ್‌ ಬಳಕೆ ಮಾಡುತ್ತೇವೆ. ಈ ಚಿತ್ರದ ದ್ವಿತೀಯಾರ್ಧದಲ್ಲಿ ಒಂದು ‍ಪ್ರಯೋಗ ಇದೆ. ಹಾಗಾಗಿ ಚಿತ್ರಕ್ಕೆ ಈ ಶೀರ್ಷಿಕೆ ನೀಡಲಾಗಿದೆ’ ಎಂದು ಹೇಳುತ್ತಾರೆ ವಿವೇಕ್.

ADVERTISEMENT

ಈ ಚಿತ್ರದ ನಾಯಕ ಹಣವೇ ಸರ್ವಸ್ವ ಎನ್ನುವ ಮಾತಿನಲ್ಲಿ ನಂಬಿಕೆ ಇಟ್ಟವ. ಆತ ಹಣದ ಹಿಂದೆ ಹೋಗುತ್ತಾನೆ. ಇದು ನಾಯಕ ಕೇಂದ್ರಿತ ಸಿನಿಮಾ ಎಂದು ಚಿತ್ರದ ಕಥೆಯ ಒಂದು ಎಳೆಯನ್ನು ವಿವೇಕ್‌ ತಿಳಿಸಿದರು.

‘ನಾಯಕನ ಹೆಸರು ಹರ್ಷ. ಆತ ಕಾಲೇಜು ಹುಡುಗ. ಶೋಕಿ ಮತ್ತು ಮೋಜು ಮಾಡುವುದು ಅವನಿಗೆ ಇಷ್ಟ. ತನಗೆ ಸಾಕಷ್ಟು ಪಾಕೆಟ್ ಮನಿ ಸಿಗುತ್ತಿಲ್ಲ ಎಂದು ಬೇಸರಗೊಂಡಿರುತ್ತಾನೆ’ ಎಂದು ತಮ್ಮ ಪಾತ್ರದ ಬಗ್ಗೆ ಭರತ್ ವಿವರಣೆ ನೀಡಿದರು. ರೇಖಾ ಅವರು ಇದರಲ್ಲಿ ನಾಯಕನ ತಾಯಿಯ ಪಾತ್ರವನ್ನು ಕೂಡ ನಿಭಾಯಿಸಿದ್ದಾರೆ.

ಸೋನಲ್ ಅವರು ಚಿತ್ರದ ಕಥೆಯನ್ನೂ ಕೇಳದೆ, ಇದರಲ್ಲಿ ನಟಿಸಲು ಒಪ್ಪಿಕೊಂಡರಂತೆ. ‘ಇದಕ್ಕೆ ಕಾರಣ ರೇಖಾ ಮೇಡಂ’ ಎನ್ನುತ್ತಾರೆ ಸೋನಲ್. ಸೋನಲ್ ಅವರು ಇದರಲ್ಲಿ ಸಣ್ಣ ಪಾತ್ರವೊಂದನ್ನು ನಿಭಾಯಿಸಿದ್ದಾರೆ. ‘ಪಾತ್ರ ಸಣ್ಣದಾದರೂ ವೀಕ್ಷಕರ ಮನಸ್ಸಿನಲ್ಲಿ ಉಳಿದುಕೊಳ್ಳುತ್ತದೆ’ ಎಂದು ಸೋನಲ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.