
ದರ್ಶನ್, ವಿಜಯಲಕ್ಷ್ಮಿ ದರ್ಶನ್
ಚಿತ್ರ: ಇನ್‌ಸ್ಟಾಗ್ರಾಂ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಡಿ ಡೆವಿಲ್' ನಾಳೆ (ಡಿ.11) ತೆರೆಗೆ ಬರಲಿದೆ.
ದರ್ಶನ್ ಅವರು, ಸಿನಿಮಾ ಕುರಿತು ತಮ್ಮ ಅಭಿಮಾನಿಗಳಿಗೆ ಜೈಲಿನಿಂದಲೇ ಸಂದೇಶ ಕಳುಹಿಸಿದ್ದಾರೆ.
ಸದ್ಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ ಪರವಾಗಿ ಅವರ ಪತ್ನಿ ವಿಜಯಲಕ್ಷ್ಮೀ ಅವರು ಇನ್‌ಸ್ಟಾಗ್ರಾಂನಲ್ಲಿ ಮಂಗಳವಾರ ಪೋಸ್ಟ್ ಹಂಚಿಕೊಂಡಿದ್ದಾರೆ.
ಈ ಪೋಸ್ಟ್‌ಗೆ 4,300ಕ್ಕೂ ಹೆಚ್ಚು ಜನರು ಪ್ರತಿಕ್ರಿಯಿಸಿದ್ದು, 1.95 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.
ಜೈಲಿನಲ್ಲಿ ದರ್ಶನ್ ರಂಪಾಟ!
ಕೊಲೆ ಪ್ರಕರಣದ ಎರಡನೇ ಆರೋಪಿಯಾಗಿರುವ ದರ್ಶನ್ ಅವರು ತಾವಿರುವ ಬ್ಯಾರಕ್‌ನಲ್ಲಿ ಇತರೆ ಆರೋಪಿಗಳೊಂದಿಗೆ ರಂಪಾಟ ಮಾಡಿದ್ದಾರೆ ಎನ್ನುವ ವದಂತಿ ಸೋಮವಾರ ಹಬ್ಬಿತ್ತು.
ಪತ್ರಿಕೆಗಳನ್ನು ಓದುವ ಸಲುವಾಗಿ ದರ್ಶನ್ ಕೆಲವು ದಿನಗಳಿಂದ ಬೆಳಿಗ್ಗೆ ಬೇಗನೇ ಎಳುತ್ತಿದ್ದಾರೆ. ಆ ಸಂದರ್ಭದಲ್ಲಿ ಇತರೆ ಆರೋಪಿಗಳನ್ನು ಒದ್ದು ಎಬ್ಬಿಸುತ್ತಿದ್ದಾರೆ. ಅಲ್ಲದೇ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂದು ಹೇಳಲಾಗಿದೆ.
'ದರ್ಶನ್ ಅವರನ್ನು ಇರಿಸಲಾಗಿರುವ ಬ್ಯಾರಕ್‌ನಲ್ಲಿ ಗಲಾಟೆ ಆಗಿರುವ ಮಾಹಿತಿ ಇಲ್ಲ. ವದಂತಿ ಹಬ್ಬಿರುವ ಕಾರಣ ಪರಿಶೀಲನೆ ನಡೆಸಲಾಗುತ್ತಿದೆ. ಜೈಲಿನ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ' ಎಂದು ಕಾರಾಗೃಹದ ಎಸ್.ಪಿ ಅಂಶುಕುಮಾರ್ ತಿಳಿಸಿದ್ದರು.
ವಿಜಯಲಕ್ಷ್ಮೀ ಹಂಚಿಕೊಂಡಿರುವ ಸಂದೇಶ ಇಲ್ಲಿದೆ...
ಪ್ರೀತಿಯ ಸೆಲೆಬ್ರಿಟಿಗಳೇ,
ನನ್ನ ಹೃದಯಾಂತರಾಳದ ಈ ಸಂದೇಶವನ್ನು ವಿಜಯಲಕ್ಮೀ ನಿಮಗೆ ತಲುಪಿಸುತ್ತಿದ್ದಾರೆ. ನೀವು ತೋರುತ್ತಿರುವ ಪ್ರೀತಿ, ಕಾಳಜಿ, ನಿರಂತರವಾಗಿ ನೀಡುತ್ತಿರುವ ಬೆಂಬಲ, ರಾಜ್ಯದಾದ್ಯಂತ ಮಾಡುತ್ತಿರುವ ಪ್ರಚಾರದ ಬಗ್ಗೆ ಅವರು ಪ್ರತಿ ಸಲವೂ ತಿಳಿಸುತ್ತಾರೆ. ದೂರದಲ್ಲಿದ್ದರೂ, ಪ್ರತಿ ಕ್ಷಣವೂ ನೀವು ನನ್ನೊಂದಿಗೆ ಇದ್ದೀರಿ ಎಂದು ಭಾವಿಸುತ್ತೇನೆ.
ಈ ವಿಚಾರವನ್ನು ನಾನು ನಿಮಗೆ ಹೇಳಲು ಬಯಸುತ್ತೇನೆ. ಜನರು ಆಡುವ ಮಾತುಗಳ ಬಗ್ಗೆ ದಯವಿಟ್ಟು ತಲೆಕೆಡಿಸಿಕೊಳ್ಳಬೇಡಿ. ಯಾವುದೇ ರೀತಿಯ ಗೊಂದಲಗಳಾಗಲು, ವದಂತಿಗಳು ಹರಿದಾಡಲು ಬಿಡಬೇಡಿ. ನಕಾರಾತ್ಮಕ ವಿಚಾರಗಳು ನಿಮ್ಮನ್ನು ಅಲುಗಾಡಿಸಲು ಅವಕಾಶ ನೀಡಬೇಡಿ. ನೀವೇ ನನ್ನ ಶಕ್ತಿ. ನನ್ನ ಕುಟುಂಬ. ನೀವು ನನ್ನ ಮೇಲೆ ಇಟ್ಟಿರುವ ನಂಬಿಕೆಯ ಕಾರಣದಿಂದಲೇ ನಾನು ಎಂದೆಂದಿಗಿಂತಲೂ ಹೆಚ್ಚಾಗಿ ಇಂದು ಗಟ್ಟಿಯಾಗಿ ನಿಂತಿದ್ದೇನೆ. ನನ್ನ ಜೀವನದ ಈ ಹಂತದಲ್ಲಿ ನೀವೇ ನನ್ನ ದೊಡ್ಡ ಶಕ್ತಿ. ನೀವೆಲ್ಲರೂ, ನಮ್ಮ ಡೆವಿಲ್ ಸಿನಿಮಾಗೆ ಪ್ರೀತಿ ತೋರಬೇಕೆಂದು ಬಯಸುತ್ತೇನೆ.
ನಾನು ನಾನಾಗಿರುವುದು ನಿಮ್ಮಿಂದಲೇ. ನನ್ನ ಮೇಲೆ ಯಾವಾಗಲೂ ತೋರುವ ಅಪಾರ ಪ್ರೀತಿಯನ್ನು ಡೆವಿಲ್‌ಗೂ ತೋರುತ್ತೀರಿ ಎಂಬುದು ನನಗೆ ಗೊತ್ತಿದೆ. ನನ್ನ ಅನುಪಸ್ಥಿತಿಯಲ್ಲಿಯೂ ಪ್ರತಿಯೊಂದು ಪ್ರಶ್ನೆ, ಸಂದೇಹ, ಅಭಿಪ್ರಾಯಕ್ಕೆ ಪದಗಳ ಬದಲಾಗಿ ಸಿನಿಮಾದ ಅಭೂತಪೂರ್ವ ಯಶಸ್ಸಿನ ಮೂಲಕ ಉತ್ತರಿಸಬೇಕು ಎಂದು ಬಯಸುತ್ತೇನೆ. ಅದೇ ನಿಮ್ಮ ಧ್ವನಿಯಾಗಲಿದೆ. ಅದೇ ನಮ್ಮ ಹೇಳಿಕೆಯೂ ಆಗಲಿದೆ. ನೀವು ಮಾಡುತ್ತಿರುವ ಪ್ರಚಾರ, ತೋರುತ್ತಿರುವ ಶ್ರದ್ಧೆ ಮತ್ತು ಪ್ರದರ್ಶಿಸುತ್ತಿರುವ ಒಗ್ಗಟ್ಟಿನ ಬಗ್ಗೆ ಕೇಳಿದಾಗ ಹೆಮ್ಮೆಯ ಭಾವನೆ ಮೂಡುತ್ತದೆ. ನಾನು ನಿಮ್ಮೆಲ್ಲರನ್ನೂ ಭೇಟಿಯಾಗಲು, ಕಣ್ತುಂಬಿಕೊಳ್ಳಲು ಕಾತರನಾಗಿದ್ದೇನೆ. ನನ್ನ ಸುತ್ತಲೂ ಗೋಡೆಯಂತೆ ನಿಂತಿರುವ ನಿಮಗೆ ಧನ್ಯವಾದಗಳು. ನೀವು ನನ್ನನ್ನು ನಂಬುತ್ತಿರುವ ಹಾಗೆಯೇ, ನಿಮ್ಮೆಲ್ಲರಲ್ಲೂ ನಂಬಿಕೆ ಇಟ್ಟಿದ್ದೇನೆ. ಸತ್ಯವನ್ನು ಹೇಗೆ ತಿಳಿಸಬೇಕು ಎಂದು ಸಮಯಕ್ಕೆ ಗೊತ್ತಿದೆ ಎಂಬುದನ್ನು ನೆನಪಿಡಿ. ಕಾಲವೇ ಎಲ್ಲಕ್ಕೂ ಉತ್ತರ ನೀಡಲಿದೆ. ಅಲ್ಲಿಯವರೆಗೆ ನಿಮ್ಮ ತಲೆಯನ್ನು ಮೇಲೆತ್ತಿ, ಹೃದಯವನ್ನು ಗಟ್ಟಿಗೊಳಿಸಿ, ಅಚಲ ಪ್ರೀತಿಯನ್ನು ಕಾಪಾಡಿಕೊಳ್ಳಿ.
ಪ್ರೀತಿಯಿಂದ
ನಿಮ್ಮ ದಾಸ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.