ADVERTISEMENT

‘ಹಲಗಲಿ’ಯಲ್ಲಿ ‘ಜಡಗ’ನಾದ ಧನಂಜಯ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 0:04 IST
Last Updated 16 ಆಗಸ್ಟ್ 2025, 0:04 IST
ಧನಂಜಯ 
ಧನಂಜಯ    

ಹೇಮಂತ್ ಎಂ.ರಾವ್‌ ನಿರ್ದೇಶನದ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಘೋಷಣೆ ಬೆನ್ನಲ್ಲೇ ನಟ ಧನಂಜಯ ನಟನೆಯ ಮತ್ತೊಂದು ಸಿನಿಮಾದ ಘೋಷಣೆಯಾಗಿದೆ. ಸುಕೇಶ್ ನಾಯಕ್ ನಿರ್ದೇಶನದ ಐತಿಹಾಸಿಕ ಸಿನಿಮಾ ‘ಹಲಗಲಿ’ಯಲ್ಲಿ ‘ಜಡಗ’ನಾಗಿ ಧನಂಜಯ ಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ಚಿತ್ರದಲ್ಲಿನ ಅವರ ಪಾತ್ರದ ಲುಕ್‌ ಇತ್ತೀಚೆಗೆ ಬಿಡುಗಡೆಯಾಗಿದೆ. ಧನಂಜಯ ಅವರಿಗೆ ನಾಯಕಿಯಾಗಿ ‘ಕಾಂತಾರ’ ಖ್ಯಾತಿಯ ಸಪ್ತಮಿ ಗೌಡ ಕಾಣಿಸಿಕೊಳ್ಳಲಿದ್ದಾರೆ. ಕಲ್ಯಾಣ್ ಚಕ್ರವರ್ತಿ ಧೂಳಿಪಾಳ್ಳ ನಿರ್ಮಾಣದ ಈ ಬಹುತಾರಾಗಣದ ಚಿತ್ರವು ಎರಡು ಭಾಗಗಳಲ್ಲಿ ಮೂಡಿ ಬರಲಿದ್ದು, ಮಣ್ಣಿನ ಕಥೆಯನ್ನು ಜನರ ಎದುರಿಗೆ ಇಡಲಿದೆ. ಕನ್ನಡ ನಾಡಿನ ಸ್ವಾತಂತ್ರ್ಯ ಪೂರ್ವದ ವೀರರ ಕಥೆ ಇದಾಗಿದ್ದು, ಸಿನಿಮಾದ ಶೂಟಿಂಗ್ ಆರಂಭವಾಗಿದೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಧನಂಜಯ, ‘ಈ ಚಿತ್ರದಲ್ಲಿ ‘ಜಡಗ’ ಎಂಬ ಪಾತ್ರ ಮಾಡಿದ್ದೇನೆ. ಮೊದಲಿನಿಂದಲೂ ಐತಿಹಾಸಿಕ ಸಿನಿಮಾ ಮಾಡಬೇಕು ಎನ್ನುವ ಆಸೆ ಇತ್ತು. ನನ್ನ ವೃತ್ತಿಯ ಆರಂಭದಲ್ಲಿ ಆ ರೀತಿಯ ಪ್ರಯತ್ನ ಮಾಡಿದ್ದೆ. ಅಲ್ಲಮ ಬಯೋಪಿಕ್ ಮಾಡಿದ್ದೆ. ಈಗ ‘ಹಲಗಲಿ’ ಕೈಗೆತ್ತಿಕೊಂಡಿದ್ದೇನೆ. ಐತಿಹಾಸಿಕ ಸಿನಿಮಾಗಳನ್ನು ಶುರು ಮಾಡುತ್ತಾರೆ ಆಮೇಲೆ ನಿಲ್ಲಿಸುತ್ತಾರಾ ಎಂಬ ಭಯವಿತ್ತು. ತಂಡವನ್ನು ಭೇಟಿಯಾದಾಗ ಅವರು ಬ್ರಿಟಿಷ್‌ ಎಪಿಸೋಡ್ ಶೂಟಿಂಗ್ ಮುಗಿಸಿದ್ದರು. ಅಲ್ಲಿಂದ ನಂಬಿಕೆ ಬಂತು’ ಎಂದರು. 

ADVERTISEMENT

ನಿರ್ದೇಶಕ ಸುಕೇಶ್‌ ಮಾತನಾಡಿ, ‘ಇದು ನನ್ನ ಎರಡನೇ ಸಿನಿಮಾ. ನನಗೆ ಐತಿಹಾಸಿಕ ಕಥೆಗಳು ಇಷ್ಟ. ಪುಸ್ತಕಗಳನ್ನು ಓದುವ ಸಂದರ್ಭದಲ್ಲಿ ಹಲಗಲಿ ತಲೆಗೆ ಬಂತು. ಆಯುಧಕ್ಕಾಗಿ ಇಡೀ ಊರೇ ಪ್ರಾಣ ಕೊಟ್ಟಿತ್ತು ಎಂಬುವುದು ನನಗೆ ಆಸಕ್ತಿ ಹುಟ್ಟುಹಾಕಿತು. ಪುಸ್ತಕ ಓದಿದ ಬಳಿಕ ಆ ಊರಿಗೆ ಹೋದೆ. ಅಲ್ಲಿ ಹೋರಾಟ ಮಾಡಿದ ಆಯುಧಗಳನ್ನು ದೇವರಗುಡಿಯಲ್ಲಿ ಇಟ್ಟಿದ್ದಾರೆ. ಕಥೆಯ ಎಳೆ ಮಾಡಿಕೊಂಡೆ. ಕಮರ್ಷಿಯಲ್ ಆಗಿ ಮೂಲ ಕಥೆಗೆ ಯಾವುದೇ ಚ್ಯುತಿಯಾಗದಂತೆ ಸಿನಿಮಾ ಮಾಡುತ್ತಿದ್ದೇವೆ. ಈಗಾಗಲೇ ಶೇ 40 ಶೂಟಿಂಗ್ ಮುಗಿದಿದೆ. ಮೊದಲ ಹಂತದಲ್ಲಿ ಮೈಸೂರಿನಲ್ಲಿ ಚಿತ್ರೀಕರಣ ನಡೆಸಿದ್ದೆವು. ಇದೀಗ ನೆಲಮಂಗಲದಲ್ಲಿ ಅದ್ಧೂರಿ ಸೆಟ್ ಹಾಕಿ ಸಿನಿಮಾ ಮಾಡುತ್ತಿದ್ದೇವೆ’ ಎಂದರು.

ಬ್ರಿಟಿಷರ ವಿರುದ್ಧ ಮೊದಲ ಗೆರಿಲ್ಲಾ ಯುದ್ಧ ಮಾಡಿದ ರಾಜ್ಯದ ಹಲಗಲಿ ಬೇಡರ ಕುರಿತ ಕಥೆ ಇದಾಗಿದೆ. ವಾಸುಕಿ ವೈಭವ್ ಸಂಗೀತ ನಿರ್ದೇಶನ, ‘ಕೆಜಿಎಫ್’ ಖ್ಯಾತಿಯ ವಿಕ್ರಮ್ ಮೋರ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಚಿತ್ರಕ್ಕಾಗಿ ನಾಲ್ಕೈದು ಬೃಹತ್ ಹಳ್ಳಿಯ ಸೆಟ್‌ಗಳನ್ನು ಹಾಕಿದ್ದು, ಹಲಗಲಿ ಗ್ರಾಮವನ್ನೇ ಮರುಸೃಷ್ಟಿ ಮಾಡಲಾಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳ ಹಾಗೂ ಹಿಂದಿಯಲ್ಲಿ ಈ ಸಿನಿಮಾ ಮೂಡಿಬರಲಿದೆ. 

ನನ್ನ ಪಾತ್ರದ ಹೆಸರು ಹೊನ್ನಿ. ಈ ಪಾತ್ರಕ್ಕಾಗಿ ಸಾಕಷ್ಟು ತಯಾರಿ ನಡೆಸಿದ್ದೇನೆ. ಚಿತ್ರಕ್ಕಾಗಿ ಉತ್ತರ ಕರ್ನಾಟಕ ಭಾಷೆ ಕಲಿತಿದ್ದೇನೆ. ನನ್ನ‌ ಲುಕ್ ವಿಭಿನ್ನವಾಗಿದೆ.
–ಸಪ್ತಮಿ ಗೌಡ ನಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.