ADVERTISEMENT

ಎಐ ಬಳಸಿ ರಾಂಝಾನಾ ಸಿನಿಮಾ ಎಡಿಟ್ ಮಾಡಿದ್ದನ್ನು ಸಮರ್ಥಿಸಿಕೊಂಡ ನಿರ್ಮಾಣ ಸಂಸ್ಥೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಆಗಸ್ಟ್ 2025, 16:04 IST
Last Updated 5 ಆಗಸ್ಟ್ 2025, 16:04 IST
   

ಬೆಂಗಳೂರು: ಆನಂದ್‌ ರೈ ನಿರ್ದೇಶನದ ನಟ ಧನುಷ್‌ ಮತ್ತು ಸೋನಂ ಕಪೂರ್‌ ಅಭಿಯನದ 2013ರ ಹಿಂದಿ ಸಿನಿಮಾ ರಾಂಝಾನಾದ ಇತ್ತೀಚಿನ ವಿವಾದದ ಬಗ್ಗೆ ಚಿತ್ರ ನಿರ್ಮಾಪಕರು ಸ್ಪಷ್ಟನೆ ನೀಡಿದ್ದಾರೆ.

ನಟ ಧನುಷ್ ಅವರ ಭಿನ್ನ ಅಭಿಪ್ರಾಯವನ್ನು ಗೌರವಿಸುತ್ತೇವೆ. ಆದರೆ, ನಮ್ಮ ಹೊಸ ನಿರ್ಧಾರದ ಬಗ್ಗೆ ಅವರು ನಮಗೆ ಲಿಖಿತವಾಗಿ ಉತ್ತರ ತಿಳಿಸಿರಲಿಲ್ಲ. ಹೀಗಾಗಿ ಸಂವಹನ ಕೊರತೆ ಆಗಿದೆ ಎಂದು ಚಿತ್ರ ನಿರ್ಮಾನ ಸಂಸ್ಥೆ Eros ತಿಳಿಸಿದೆ.

ಎಐ ನಿಂದ ಆಗುವ ಸಾಧ್ಯತೆಗಳನ್ನು ತಿಳಿಸುವ ನಿಟ್ಟಿನಲ್ಲಿ ನಾವು ಹೊಸ ಪ್ರಯೋಗಕ್ಕೆ ಕೈಹಾಕಿದ್ದಿವಿ. ಆದರೆ, ನಟ ಧನುಷ್ ಎತ್ತಿರುವ ಆತಂಕಗಳ ಬಗ್ಗೆ ನಮಗೆ ಗೌರವವಿದೆ. ಈ ಬಗ್ಗೆ ಕೂತು ಚರ್ಚಿಸುತ್ತೇವೆ. ನಾವು ಮಾಡಿದ್ದು ಕಾನೂನುಬದ್ಧವಾಗಿದೆ ಹಾಗೂ ಸೃಜನಶೀಲ ಕೆಲಸ. ಅಲ್ಲದೇ ಮೂಲ ಚಿತ್ರ ಎಲ್ಲ ವೇದಿಕೆಗಳಲ್ಲಿ ಇದೆ. ಅದಕ್ಕೆ ಯಾವುದೇ ದಕ್ಕೆ ತಂದಿಲ್ಲ ಎಂದು ಸಮರ್ಥಿಸಿಕೊಂಡಿರುವುದಾಗಿ ನ್ಯೂಸ್ 18 ವರದಿ ಮಾಡಿದೆ.

ADVERTISEMENT

ಧನುಷ್ ಹೇಳಿದ್ದೇನು?

2013ರಲ್ಲಿ ಬಿಡುಗಡೆಯಾಗಿದ್ದ ರಾಂಝಾನಾ ಚಿತ್ರವನ್ನು ಕಳೆದ ವಾರ ಮತ್ತೆ ರೀ ರಿಲೀಸ್‌ ಮಾಡಲಾಗಿದೆ. ಆದರೆ ಚಿತ್ರದಲ್ಲಿ ಎಐ (ಕೃತಕ ಬುದ್ದಿಮತ್ತೆ) ತಂತ್ರಜ್ಞಾನವನ್ನು ಬಳಸಿ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಸತ್ತ ನಾಯಕನನ್ನು ಮತ್ತೆ ಬದುಕಿಸಲಾಗಿದೆ. ಇದು ನಿಜಕ್ಕೂ ಆಘಾತಕಾರಿ ಸಂಗತಿಯಾಗಿದೆ ಎಂದು ಧನುಷ್‌ ಎಕ್ಸ್‌ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು.

'ಎಐ ಬದಲಾವಣೆಯಿಂದಾಗಿ ಚಿತ್ರದ ಆತ್ಮವೇ ಕಸಿದುಕೊಂಡಿತಿದೆ. ನನ್ನ ಆಕ್ಷೇಪಣೆಯ ಹೊರತಾಗಿಯೂ ಈ ಚಿತ್ರದಲ್ಲಿ ಬದಲಾವಣೆ ಮಾಡಲಾಗಿದೆ. 12 ವರ್ಷಗಳ ಹಿಂದೆ ನಾನು ಒಪ್ಪಿಕೊಂಡು ನಟಿಸಿದ್ದ ಚಿತ್ರ ಇದಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಸಿನಿಮಾ ಸೇರಿದಂತೆ ಇತರೆ ವಿಷಯಗಳನ್ನೂ ಮಾರ್ಪಡು ಮಾಡಲು ಎಐ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿರುವುದು ಕಳವಳಕಾರಿಯಾಗಿದೆ. ಇದಕ್ಕೆ ಈ ಘಟನೆ ನಿರ್ದಶನವಾಗಿದೆ ಎಂದು ಎಐ ತಂತ್ರಜ್ಞಾನದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು.

ಇಂತಹ ತಂತ್ರಜ್ಞಾನದಿಂದ ಕಥೆ ಹೇಳುವ ಸಮಗ್ರತೆ ಮತ್ತು ಸಿನಿಮಾದ ಪರಂಪರೆಗೆ ಧಕ್ಕೆ ತರುತ್ತದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ತಡೆಗಟ್ಟಲು ಕಠಿಣ ನಿಯಮಗಳನ್ನು ಜಾರಿಗೆ ತರಬೇಕೆಂದು ನಾನು ಪ್ರಾಮಾಣಿಕವಾಗಿ ಭಾವಿಸುತ್ತೇನೆ ಎಂದು ಧನುಷ್ ಹೇಳಿದ್ದಾರೆ.

ತಮ್ಮ ಒಪ್ಪಿಗೆಯಿಲ್ಲದೆ ಕೃತಕ ಬುದ್ಧಿಮತ್ತೆ (ಎಐ) ಸಂಪಾದಿತ ಕ್ಲೈಮ್ಯಾಕ್ಸ್ ದೃಶ್ಯದೊಂದಿಗೆ ಚಿತ್ರವನ್ನು ಮರು ಬಿಡುಗಡೆ ಮಾಡಿದ್ದಕ್ಕಾಗಿ ಚಿತ್ರದ ನಿರ್ದೇಶಕ ಆನಂದ್ ಎಲ್ ರೈ ಕೂಡ ಎರೋಸ್ ಇಂಟರ್ನ್ಯಾಷನಲ್ ಸಂಸ್ಥೆ ವಿರುದ್ಧ ಕಿಡಿಕಾರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.