
ಧನ್ವೀರ್, ಗಿಲ್ಲಿ ನಟ
ಚಿತ್ರ: ಯೂಟ್ಯೂಬ್
‘ಕೈವ’ ಬಳಿಕ ಧನ್ವೀರ್ ನಟನೆಯಲ್ಲಿ ಮೂಡಿಬರುತ್ತಿರುವ ‘ಹಯಗ್ರೀವ’ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಫೆಬ್ರುವರಿ 27ರಂದು ಹಯಗ್ರೀವ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಇದೀಗ ಈ ಸಿನಿಮಾದ ಆಕ್ಷನ್ ಟೀಸರ್ ಬಿಡುಗಡೆಯಾಗಿದೆ.
ಆನಂದ್ ಆಡಿಯೊ ಯೂಟ್ಯೂಬ್ ಚಾನೆಲ್‌ನಲ್ಲಿ ಹಯಗ್ರೀವ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಅದರಲ್ಲಿ ಧನ್ವೀರ್ ಜೊತೆಗೆ ಗಿಲ್ಲಿ ನಟ ಕಾಣಿಸಿಕೊಂಡಿದ್ದಾರೆ. ಟೀಸರ್‌ನಲ್ಲಿ ಧನ್ವೀರ್ ಅವರ ಹಿಂದೆ ನಿಂತುಕೊಂಡ ಗಿಲ್ಲಿ ನಟ ‘ಏಯ್ ಕರೆಕ್ಟಾಗಿ ನೋಡೋ ಈ ಕಟೌಟ್‌ನಾ.. ಕಿಡ್ ತರ ಕಾಣಿಸ್ತಾನಾ ನಿನ್ನ ಕಣ್ಣಿಗೆ?’ ಎಂದು ಮಾಸ್ ಡೈಲಾಗ್ ಹೊಡೆದಿದ್ದಾರೆ.
ಬಿಗ್‌ಬಾಸ್ ಸೀಸನ್ 12ರ ಮೂಲಕ ಅತಿ ಹೆಚ್ಚು ಗಮನ ಸೆಳೆದಿರುವ ಗಿಲ್ಲಿ ನಟ ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಮೊದಲ ಬಾರಿಗೆ ಗಿಲ್ಲಿ ನಟ ಅವರು ಧನ್ವೀರ್ ಅವರ ಜೊತೆಗೆ ನಟಿಸಿದ್ದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.
ವಿಶೇಷ ಏನೆಂದರೆ ನಟ ದರ್ಶನ್ ಹುಟ್ಟುಹಬ್ಬದ ದಿನವೇ ಧನ್ವೀರ್ ಗೌಡ ಅವರು ತಮ್ಮ ಐದನೇ ಸಿನಿಮಾದ ಟೀಸರ್ ಅನ್ನು ಬಿಡುಗಡೆ ಮಾಡಿದ್ದಾರೆ. ಟೀಸರ್‌ಗೂ ಮುನ್ನ ಜೈಲಿನಲ್ಲಿರುವ ದರ್ಶನ್ ಅವರಿಗೆ ನುಡಿಗಳಲ್ಲಿ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ.
‘ಕಬ್ಬಿಣದ ಬಾಗಿಲುಗಳು ನಿಮ್ಮನ್ನು ದೂರ ಮಾಡಿರಬಹುದು. ಆದರೆ ಈ ಜನರ ಹೃದಯಗಳಲ್ಲಿ ನೀವು ಇನ್ನು ನಮ್ಮ ಹೆಮ್ಮೆಯಾಗಿ ಉಳಿದಿದ್ದೀರಿ. ಒಬ್ಬ ಮನುಷ್ಯನನ್ನು ಗೋಡೆಗಳ ಹಿಂದೆ ಇಡಬಹುದು. ಆದರೆ ಒಂದು ಹೆಸರನ್ನು ಪ್ರಭಾವವನ್ನು ಯಾರೂ ಬಂಧಿಸೋಕೆ ಸಾಧ್ಯ? ನೀವು ಇಂದು ಹೋರಾಟದಲ್ಲಿ ಇದ್ದೀರಿ. ಆದರೆ ಈ ಜನ, ಈ ಪ್ರೀತಿ, ಈ ನಂಬಿಕೆ ಕವಚವಾಗಿದೆ. ಕಾಲ ಪರೀಕ್ಷಿಸಬಹುದು. ಆದರೆ ಇತಿಹಾಸ ತೀರ್ಪು ಕೊಡುತ್ತದೆ. ಇದು ಅಂತ್ಯವಲ್ಲ. ಮಹಾ ಆರಂಭ. ದರ್ಶನ್ ಅಣ್ಣ ಎಂದರೆ ಕೇವಲ ಹೆಸರಲ್ಲ. ಲಕ್ಷಾಂತರ ಜನರಿಗೆ ಸ್ಫೂರ್ತಿ, ಧೈರ್ಯ, ಪ್ರೀತಿ ನಂಬಿಕೆ. ಈ ಹುಟ್ಟುಹಬ್ಬದಲ್ಲಿ ನಿಮಗೆ ಕಾಣದ ಪ್ರಪಂಚವೇ ನಿಮ್ಮ ಜಯಘೋಷದಿಂದ ತುಂಬಿದೆ. ಶುಭಾಶಯಗಳು ಅಣ್ಣ. ನೀವು ಕೇಲವ ನಟನಲ್ಲ ನೀವೊಂದು ಹೆಮ್ಮೆ’ ಎಂದು ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ್ದಾರೆ.
ಧನ್ವೀರ್
ಸಮೃದ್ಧಿ ಮಂಜುನಾಥ್ ತಮ್ಮ ಕೆ.ವೆ.ಸಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ರಘುಕುಮಾರ್ ಒ.ಆರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಧನ್ವೀರ್‌ಗೆ ಜೋಡಿಯಾಗಿ ‘ಸಲಗ’ ಖ್ಯಾತಿಯ ಸಂಜನಾ ಆನಂದ್ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಮತ್ತೊಬ್ಬ ನಾಯಕನಿದ್ದು, ಅವರು ಯಾರು ಎಂದು ಚಿತ್ರ ಬಿಡುಗಡೆಯವರೆಗೂ ಗೌಪ್ಯವಾಗಿಡಲಾಗುವುದು ಎಂದಿದೆ ಚಿತ್ರತಂಡ.
‘ಚಿತ್ರದಲ್ಲಿ ಮುಖ್ಯವಾಗಿ ಪೌರಾಣಿಕ ಅಂಶಗಳ ಜೊತೆಗೆ ಕ್ರೈಮ್ ಇದೆ. ಪ್ರೀತಿ, ಭಾವನಾತ್ಮಕ ಅಂಶಗಳ ಜೊತೆಗೆ ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಎಲ್ಲಾ ಅಂಶಗಳು ಚಿತ್ರದಲ್ಲಿದೆ. ಬೆಂಗಳೂರಿನಲ್ಲಿ ಇಡೀ ಚಿತ್ರದ ಚಿತ್ರೀಕರಣ ನಡೆದಿದೆ. ರಂಗಾಯಣ ರಘು, ತಾರಾ, ಸಾಧು ಕೋಕಿಲ, ರವಿಶಂಕರ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.