ಶಾರುಖ್ ಖಾನ್ ಹಾಗೂ ಧರ್ಮೇಂದ್ರ
ಚಿತ್ರ ಕೃಪೆ: @iamsrk
ಮುಂಬೈ: ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ ಅವರು ನಿನ್ನೆ (ಸೋಮವಾರ) ನಿಧನರಾಗಿದ್ದಾರೆ. ಅವರ ನಿಧನಕ್ಕೆ ಅನೇಕ ಸಿನಿ ತಾರೆಯರು, ರಾಜಕೀಯ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಈ ನಡುವೆ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರು ಧರ್ಮೇಂದ್ರ ನನಗೆ ತಂದೆಯಂತಿದ್ದರು ಎಂದು ಹೇಳಿದ್ದಾರೆ.
ಧರ್ಮೇಂದ್ರ ಅವರ ನಿಧನವು ವಿಶ್ವದಾದ್ಯಂತ ಇರುವ ಸಿನಿ ಪ್ರೇಮಿಗಳಿಗೆ ಭರಿಸಲಾಗದ ನಷ್ಟ ಎಂದು ಶಾರುಖ್ ಖಾನ್ ತಿಳಿಸಿದ್ದಾರೆ. ಪವನ್ ಹನ್ಸ್ ಸ್ಮಶಾನದಲ್ಲಿ ನಡೆದ ಧರ್ಮೇಂದ್ರ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಶಾರುಖ್, ಸೋಮವಾರ ತಮ್ಮ ಎಕ್ಸ್ ಖಾತೆಯಲ್ಲಿ ಸಂತಾಪ ಸೂಚಿಸಿದ್ದಾರೆ.
‘ಧರಮ್ ಜಿ, ನೀವು ನನಗೆ ತಂದೆಯ ಸ್ಥಾನದಲ್ಲಿದ್ದವರು..... ನೀವು ತೋರಿದ ಪ್ರೀತಿಗೆ ನನ್ನ ಕೃತಜ್ಞತೆಗಳು. ಅವರ ನಿಧನ ಕೇವಲ ಅವರ ಕುಟುಂಬಕ್ಕೆ ಮಾತ್ರವಲ್ಲ ಪ್ರಪಂಚದಾದ್ಯಂತ ಇರುವ ಸಿನಿಮಾ ಪ್ರೇಮಿಗಳಿಗೆ ತುಂಬಲಾಗದ ನಷ್ಟವಾಗಿದೆ’.
‘ನೀವು ಚಿರಾಯು... ನಿಮ್ಮ ಆತ್ಮ ಸದಾ ಕಾಲವು ನಿಮ್ಮ ಚಲನಚಿತ್ರಗಳು ಮತ್ತು ನಿಮ್ಮ ಸುಂದರ ಕುಟುಂಬದ ಮೂಲಕ ಶಾಶ್ವತವಾಗಿ ಜೀವಿಸುತ್ತದೆ. ಯಾವಾಗಲೂ ನಿಮ್ಮನ್ನು ಪ್ರೀತಿಸುತ್ತೇನೆ’ ಎಂದು ಶಾರುಖ್ ಅವರು ಸಂತಾಪ ಸೂಚಿಸಿದ್ದಾರೆ.
2007ರಲ್ಲಿ ಬಿಡುಗಡೆಯಾದ ಶಾರುಖ್ ಖಾನ್ ಅವರ ‘ಓಂ ಶಾಂತಿ ಓಂ’ ಸಿನಿಮಾದಲ್ಲಿ ಧರ್ಮೇಂದ್ರ ಅವರು ಅತಿಥಿ ಪಾತ್ರ ನಿರ್ವಹಿಸಿದ್ದರು ಮಾತ್ರವಲ್ಲ, ‘ದೀವಾಂಗಿ ದೀವಾಂಗಿ’ ಹಾಡಿನಲ್ಲಿ ಹೆಜ್ಜೆ ಹಾಕಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.