ADVERTISEMENT

ಧ್ರುವಗೆ ನೋಟಿಸ್‌| ನನ್ನನ್ನು ಕನ್ನಡ ವಿರೋಧಿ ಎಂದು ಬಿಂಬಿಸಲು ಯತ್ನ: ರಾಘವೇಂದ್ರ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 0:17 IST
Last Updated 12 ಆಗಸ್ಟ್ 2025, 0:17 IST
<div class="paragraphs"><p>ಧ್ರುವ ಸರ್ಜಾ</p></div>

ಧ್ರುವ ಸರ್ಜಾ

   

ಬೆಂಗಳೂರು: ನಟ ಧ್ರುವ ಸರ್ಜಾ ವಿರುದ್ಧ ಮುಂಬೈನಲ್ಲಿ ದೂರು ನೀಡಿದ್ದ ನಿರ್ದೇಶಕ, ನಿರ್ಮಾಪಕ ರಾಘವೇಂದ್ರ ಹೆಗಡೆ, ‘ಧ್ರುವ ಸರ್ಜಾ ಅವರಿಗೆ ನೋಟಿಸ್‌ ಕಳುಹಿಸಿದ ಮೇಲೆ ನನ್ನನ್ನು ಕನ್ನಡ ವಿರೋಧಿ ಎಂದು ಬಿಂಬಿಸುವ ಪ್ರಯತ್ನವಾಗಿದೆ. ನಾನು ಕನ್ನಡ ವಿರೋಧಿಯಲ್ಲ’ ಎಂದಿದ್ದಾರೆ. 

ವಿಡಿಯೊವೊಂದರ ಮುಖಾಂತರ ಪ್ರತಿಕ್ರಿಯೆ ನೀಡಿರುವ ಅವರು, ‘ಮುಂಬೈನಲ್ಲಿರುವ ನಾನು ನಿರ್ದೇಶಕ, ನಿರ್ಮಾಪಕನಾಗಬೇಕು ಎಂಬ ಕನಸು ಕಂಡಾಗ ಕಂಡಿದ್ದು ನನ್ನ ತಾಯ್ನಾಡು ಕರ್ನಾಟಕ. ಹೀಗೆ ‘ಜಗ್ಗುದಾದ’ ಚಿತ್ರ ನಿರ್ದೇಶಿಸಿದೆ. ಎರಡನೇ ಸಿನಿಮಾ ಮಾಡಬೇಕು ಎಂದು ಧ್ರುವ ಸರ್ಜಾ ಅವರಿಗೆ ಹಣ ನೀಡಿದೆ. ‘KD’ ಸಿನಿಮಾ ಮುಗಿಸಿದ ಬಳಿಕ ಸಿನಿಮಾ ಮಾಡೋಣ ಎಂದು ಅವರು ಹೇಳಿದ್ದರು. ಹೀಗೆ ಕಾಯುತ್ತಾ ಎಂಟು ವರ್ಷ ವ್ಯರ್ಥವಾಯಿತು’ ಎಂದಿದ್ದಾರೆ. 

ADVERTISEMENT

‘ತಮಿಳಿನಲ್ಲಿ ‘ಅಮರನ್‌’ ಸಿನಿಮಾ ಬಿಡುಗಡೆಯಾದಾಗ ‘I am a soldier’ನ ಶೇ 60–70 ಭಾಗ ಆ ಸಿನಿಮಾದಲ್ಲಿದೆ ಎಂದು ಧ್ರುವ ಅವರು ಹೇಳಿದರು. ನಂತರದಲ್ಲಿ ಅವರೇ ಒಬ್ಬ ಬರಹಗಾರರನ್ನು ನೀಡಿದರು. ಅವರು ಬರೆದ ಕನ್ನಡದ ಕಥೆ ಒಪ್ಪಿಗೆಯಾಯಿತು. 2025ರ ಫೆಬ್ರುವರಲ್ಲಿ ನಾನು ಧ್ರುವ ಸರ್ಜಾ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾದೆ. ಆ ಸಂದರ್ಭದಲ್ಲಿ ಅರ್ಜುನ್‌ ಸರ್ಜಾ ಅವರೂ ಇದ್ದರು. ಯಾವ ಮಟ್ಟದಲ್ಲಿ ಸಿನಿಮಾ ಮಾಡುತ್ತೀರಿ ಎಂದು ಅವರು ಪ್ರಶ್ನಿಸಿದರು. ಕನ್ನಡ ಸಿನಿಮಾವನ್ನೇ ಮಾಡುತ್ತೇನೆ. ಪ್ಯಾನ್‌ ಇಂಡಿಯಾ ಮಾಡಿದರೆ ಖರ್ಚು ಹೆಚ್ಚು ಎಂದಿದ್ದೆ. ‘ಮಾರ್ಟಿನ್‌’ ದೊಡ್ಡ ಲೆವೆಲ್‌ನಲ್ಲಿ ಮಾಡಿದ್ದೇವೆ. ‘KD’ಯೂ ದೊಡ್ಡಮಟ್ಟದಲ್ಲಿ ಬರುತ್ತಿದೆ ಹಾಗೂ ಮುಂಬೈ ನಿರ್ಮಾಪಕರೊಬ್ಬರಿಗೆ ಡೇಟ್ಸ್‌ ಕೊಟ್ಟಿದ್ದೇನೆ. ಆನಂತರ ನೀವು ಮಾಡಿ ಎಂದು ಧ್ರುವ ಹೇಳಿದರು. ಇವರು ಹೇಳಿದಂತೆ ಕೇಳಿದರೆ ಇನ್ನೂ ನಾಲ್ಕೈದು ವರ್ಷ ಸಿನಿಮಾ ಆಗುವುದಿಲ್ಲ ಎಂದು ಲೆಕ್ಕಾಚಾರ ಹಾಕಿದೆ. ಹೀಗಾಗಿ ಅಗ್ರಿಮೆಂಟ್‌ ಪ್ರಕಾರವೇ ನನ್ನ ಹಣ ವಾಪಸ್‌ ಕೊಡಲು ನೋಟಿಸ್‌ ಕಳುಹಿಸಿದ್ದೆ’ ಎಂದು ತಿಳಿಸಿದ್ದಾರೆ.

‘ನಾನು ಬೇರೆ ಭಾಷೆ ಸಿನಿಮಾ ಮಾಡುವುದಿದ್ದರೆ ಕನ್ನಡದ ನಾಯಕನನ್ನು ಏಕೆ ಆರಿಸುತ್ತಿದ್ದೆ. ಸಮಯ ವ್ಯರ್ಥವಾಗುತ್ತಿರುವುದರಿಂದ ನನಗೆ ಮಾನಸಿಕ ಕಿರುಕುಳವಾಗಿದೆ. ಇದಕ್ಕೆ ಧ್ರುವ ಸರ್ಜಾ ಅವರು ಕಾರಣ. ನಾನೊಬ್ಬ ಸಾಮಾನ್ಯನಾಗಿದ್ದರೆ ಬಡ್ಡಿ ಲೆಕ್ಕ ನೋಡಿ ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು. ನಾನೊಬ್ಬ ಉದ್ಯಮಿಯಾದ ಕಾರಣ ತಡೆದುಕೊಂಡಿದ್ದೇನೆ’ ಎಂದು ಅವರು ಹೇಳಿದ್ದಾರೆ.    

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.