ADVERTISEMENT

ಒಂಟಿ ಜೀವನವೇ ಉತ್ತಮ: ನಿರ್ದೇಶಕ ಪುರಿ ಜಗನ್ನಾಥ್ ಸಲಹೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 7:47 IST
Last Updated 29 ಸೆಪ್ಟೆಂಬರ್ 2020, 7:47 IST
‍ಪುರಿ ಜಗನ್ನಾಥ್‌
‍ಪುರಿ ಜಗನ್ನಾಥ್‌   

ಡ್ಯಾಶಿಂಗ್ ನಿರ್ದೇಶಕ ಎಂದೇ ಖ್ಯಾತಿ ಪಡೆದಿರುವ ಪುರಿ ಜಗನ್ನಾಥ್‌ ಕೋವಿಡ್‌–19 ಲಾಕ್‌ಡೌನ್ ಬಿಡುವಿನ ವೇಳೆಯನ್ನು ಎಂಜಾಯ್ ಮಾಡುತ್ತಿದ್ದಾರೆ. ಇತ್ತೀಚೆಗೆ ಈ ನಿರ್ದೇಶಕ ಪಾಡ್‌ಕಾಸ್ಟ್ ಮೂಲಕ ವಿವಿಧ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ತಮ್ಮ ಪಾಡ್‌ಕಾಸ್ಟ್‌ಗೆ ‘ಪುರಿ ಮ್ಯೂಸಿಂಗ್ಸ್’ ಎಂದು ಹೆಸರಿಸಿದ್ದಾರೆ ಜಗನ್ನಾಥ್‌.

ಇತ್ತೀಚಿನ ತಮ್ಮ ಪಾಡ್‌ಕಾಸ್ಟ್‌ ಒಂದರಲ್ಲಿ ‘ಯುವಕರೇ ಮದುವೆಯಾಗಬೇಡಿ, ಮದುವೆಯ ಬಂಧನಕ್ಕೆ ಒಳಗಾಗುವುದಕ್ಕಿಂತ ಒಂಟಿ ಜೀವನ ನಡೆಸುವುದೇ ಉತ್ತಮ’ ಎಂದು ಸಲಹೆ ನೀಡಿದ್ದಾರೆ.

ಮದುವೆಯಾಗ ಬೇಡಿ ಎಂದು ಪುರಿ ಹೇಳಿರುವ ಬಗ್ಗೆ ಅನೇಕ ಟೀಕೆಗಳು ವ್ಯಕ್ತವಾಗಿತ್ತು. ಆದರೆ ತಲೆ ಕೆಡಿಸಿಕೊಳ್ಳದ ನಿರ್ದೇಶಕ ಸಲಹೆ ನೀಡುವುದನ್ನು ಮುಂದುವರಿಸಿದ್ದಾರೆ.

ADVERTISEMENT

ಈ ಬಗ್ಗೆ ಇನ್ನಷ್ಟು ಮಾತನಾಡಿರುವ ಇವರು ‘ಒಂಟಿ ಜೀವನ ಪ್ರಾಮುಖ್ಯವನ್ನು ಮುಂದಿನ ಪೀಳಿಗೆಯವರು ಅರಿಯಬೇಕು, ರಾಜರಂತೆ ಬದುಕುವ ಕಲೆಯನ್ನು ರೂಢಿಸಿಕೊಳ್ಳಬೇಕು’ ಎಂದಿದ್ದಾರೆ.

ಪುರಿ ಜಗನ್ನಾಥ್ ಹೊರ ತರುತ್ತಿರುವ ಬಹುತೇಕ ಎಲ್ಲಾ ಪಾಡ್‌ಕಾಸ್ಟ್ ವಿಷಯಗಳು ಪ್ರೀತಿ ಹಾಗೂ ಮದುವೆಗೆ ಸಂಬಂಧಿಸಿದ್ದಾಗಿರುತ್ತವೆ. ತಮ್ಮ ಗುರು, ನಿರ್ದೇಶಕ ರಾಮ್‌ ಗೋಪಾಲ್ ವರ್ಮಾರಂತೆ ತಮ್ಮ ಅಭಿಮಾನಿಗಳಿಗೆ ಏಕಾಂಗಿ ಜೀವನವನ್ನು ನಡೆಸಿ ಎಂದು ಧೈರ್ಯ ತುಂಬುತ್ತಿದ್ದಾರೆ.

ಇವರ ಮ್ಯೂಸಿಂಗ್ಸ್ ಪಾಡ್‌ಕಾಸ್ಟ್‌ಗೂ ಅಭಿಮಾನಿ ಬಳಗ ಹುಟ್ಟಿಕೊಂಡಿದೆ. ಈ ಹಿಂದೆ ನಿರ್ದೇಶಕರಾದ ದೇವ ಕಟ್ಟಾ, ಗೋಪಿಚಂದ್ ಮಾಲಿನ್ನೈ ಹಾಗೂ ಹರೀಶ್‌ ಶಂಕರ್ ಪಾಡ್‌ಕಾಸ್ಟ್ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದರು.

ಇವರು ಈಗಾಗಲೇ ಕಂಫರ್ಟ್ ಜೋನ್‌, ಫ್ರೆಂಡ್‌ಶಿಪ್‌, ಲವ್‌, ಮ್ಯಾರೇಜ್‌ ಹಾಗೂ ನಾಯಿಗಳ ವಿಷಯದ ಮೇಲೆ ಪಾಡ್‌ಕಾಸ್ಟ್ ಪ್ರಸಾರ ಮಾಡಿದ್ದಾರೆ. ಸ್ವತ ಪ್ರಾಣಿ ಪ್ರೇಮಿಯಾಗಿರುವ ಜಗನ್ನಾಥ್ ಪ್ರಾಣಿಗಳಿಂದ ನಾವು ಬಹಳ ವಿಷಯಗಳನ್ನು ಕಲಿಯಬಹುದು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.