ADVERTISEMENT

ಬಿಜೆಪಿ ತಾರಾ ಪ್ರಚಾರಕಿಯಾಗಿದ್ದ ರಾಗಿಣಿ: ಬಂಧನದ ಬೆನ್ನಲ್ಲೇ ಫೋಟೊ, ವಿಡಿಯೊ ವೈರಲ್

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2020, 16:07 IST
Last Updated 4 ಸೆಪ್ಟೆಂಬರ್ 2020, 16:07 IST
ಟ್ವಿಟರ್‌ ಚಿತ್ರ-  ನಟಿ ರಾಗಿಣಿ ಮತ್ತು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ
ಟ್ವಿಟರ್‌ ಚಿತ್ರ- ನಟಿ ರಾಗಿಣಿ ಮತ್ತು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ   

ಬೆಂಗಳೂರು: ಡ್ರಗ್‌ ಪೂರೈಕೆ ಜಾಲದಲ್ಲಿ ಸಕ್ರಿಯವಾಗಿರುವ ಆರೋಪದ ಮೇಲೆ ಸಿಸಿಬಿ ಪೊಲೀಸರು ಶುಕ್ರವಾರ ಬಂಧಿಸಿರುವ ಚಿತ್ರನಟಿ ರಾಗಿಣಿ ದ್ವಿವೇದಿ 2019ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಪರ ತಾರಾ ಪ್ರಚಾರಕಿಯಾಗಿದ್ದರು.

ಸಚಿವ ಕೆ.ಸಿ.ನಾರಾಯಣ ಗೌಡ 2019ರಲ್ಲಿ ನಡೆದ ಕೆ.ಆರ್‌.ಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದರು. ಆಗ ರಾಗಿಣಿ ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡು ಬಿಜೆಪಿ ಪರ ಪ್ರಚಾರ ಮಾಡಿದ್ದರು. ಶುಕ್ರವಾರ ಬೆಳಿಗ್ಗೆ ಸಿಸಿಬಿ ಪೊಲೀಸರು ನಟಿಯ ಮನೆ ಮೇಲೆ ದಾಳಿ ನಡೆಸಿದ ಸುದ್ದಿ ಬಹಿರಂಗವಾಗುತ್ತಿದ್ದಂತೆಯೇ ರಾಗಿಣಿ ಅವರು ಉಪ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಫೋಟೊ, ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಲಾರಂಭಿಸಿದವು.

2019ರ ಲೋಕಸಭಾ ಚುನಾವಣೆಗೂ ಮೊದಲೇ ರಾಗಿಣಿ ಬಿಜೆಪಿ ಸೇರಲು ಉತ್ಸುಕರಾಗಿದ್ದರು. ಆದರೆ, ಅವರ ಆಸೆ ಕೈಗೂಡಿರಲಿಲ್ಲ. ಆ ಬಳಿಕ ನಡೆದ ಕೆ.ಆರ್‌.ಪೇಟೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿಯ ರೋಡ್‌ ಷೋಗಳಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಪಕ್ಷದ ನಾಯಕರೊಂದಿಗೆ ಮನೆ,ಮನೆಗೂ ತೆರಳಿ ಮತ ಯಾಚಿಸಿದ್ದರು.

ಡ್ರಗ್‌ ಪೂರೈಕೆ ಜಾಲಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಪೊಲೀಸರು ಬಂಧಿಸಿರುವ ಮತ್ತೊಬ್ಬ ಆರೋಪಿ ಕಾರ್ತಿಕ್‌ ರಾಜ್‌ ಕೂಡ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಎಂಬ ಟೀಕೆ, ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರದಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.