ADVERTISEMENT

2026ರ ಜ.23ಕ್ಕೆ ದುನಿಯಾ ವಿಜಯ್‌ ನಟನೆಯ 'ಲ್ಯಾಂಡ್‌ಲಾರ್ಡ್' ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2025, 23:30 IST
Last Updated 2 ನವೆಂಬರ್ 2025, 23:30 IST
   

‘ಕಾಟೇರ’ ಸಿನಿಮಾದ ಕಥೆಗಾರ, ನಿರ್ದೇಶಕ ಜಡೇಶ ಕೆ. ಹಂಪಿ ನಿರ್ದೇಶನದ, ‘ದುನಿಯಾ’ ವಿಜಯ್‌ ನಟನೆಯ ಸಿನಿಮಾ ‘ಲ್ಯಾಂಡ್‌ಲಾರ್ಡ್‌’ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಚಿತ್ರವು 2026ರ ಜ.23ರಂದು ತೆರೆಕಾಣಲಿದೆ. 

ಸಾರಥಿ ಫಿಲಂಸ್ ಲಾಂಛನದಲ್ಲಿ ಕೆ.ವಿ. ಸತ್ಯಪ್ರಕಾಶ್ ಹಾಗೂ ಹೇಮಂತ್ ಗೌಡ ಕೆ.ಎಸ್ ನಿರ್ಮಿಸಿರುವ ಈ ಸಿನಿಮಾದಲ್ಲಿ ನಾಯಕಿಯಾಗಿ ರಚಿತಾ ರಾಮ್‌ ನಟಿಸಿದ್ದು, ಇತ್ತೀಚೆಗೆ ಚಿತ್ರದ ಸರ್ವೈವರ್ ಟೀಸರ್ ಬಿಡುಗಡೆಯಾಯಿತು. ಜನವರಿ 20 ದುನಿಯಾ ವಿಜಯ್ ಅವರ ಜನ್ಮದಿನ. ಆ ಸಂದರ್ಭದಲ್ಲೇ ಚಿತ್ರ ಬಿಡುಗಡೆ ಮಾಡಿ ಅಭಿಮಾನಿಗಳಿಗೆ ಜನ್ಮದಿನದ ಕೊಡುಗೆ ನೀಡಲಿದೆ ಚಿತ್ರತಂಡ.

ಟೀಸರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ದುನಿಯಾ ವಿಜಯ್‌, ‘ಸಾಕಷ್ಟು ಬಾಣಗಳು ನಾಟಿದರೂ ಆ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಅಭಿಮಾನಿಗಳು ನೀಡಿದ್ದಾರೆ. ಕಣ್ಣೀರನ್ನು ಒರೆಸಿದವರು ಅವರು. ಚಿತ್ರರಂಗದಲ್ಲಿ ದುನಿಯಾ ವಿಜಯ್‌ ಮುಗಿದೇಹೋದ ಎನ್ನುವಾಗ ತೊಡೆತಟ್ಟಿದವರು ಅವರು. ನಿಮ್ಮ ಜೊತೆ ನಾವಿದ್ದೇವೆ ಎಂದ ಅಭಿಮಾನಿ ಸಲಗ ಇವರು. ಪ್ರತಿಯೊಬ್ಬರಿಗೂ ಬದುಕಿನಲ್ಲಿ ನೋವು, ನಲಿವು, ಕಷ್ಟ ಬರುವುದು ಸಹಜ. ಇಂಥ ಸಮಯದಲ್ಲಿ ಕೈಹಿಡಿದ ಅಭಿಮಾನಿಗಳಿಗೆ ನಾನು ಚಿರಋಣಿ. ನಮ್ಮ ಕನ್ನಡ ಚಲನಚಿತ್ರರಂಗ ದೊಡ್ಡ ಮಟ್ಟಕ್ಕೆ ಹೋಗಿ ನಿಲ್ಲಬೇಕು ಎನ್ನುವುದೇ ನನ್ನ ಕನಸು. ನನ್ನ ಬೆನ್ನಿಗೆ ಎಷ್ಟೇ ಏಟು ಬಿದ್ದಿದ್ದರೂ, ಎಷ್ಟೇ ನೋವಿದ್ದರೂ ಅದನ್ನು ತೋರಿಸದೆ ನನ್ನಿಬ್ಬರು ಮಕ್ಕಳನ್ನು ಈ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿಸಿದ್ದೇನೆ. ಅವರಿಗೂ ನಿಮ್ಮ ಆಶೀರ್ವಾದವಿರಲಿ’ ಎಂದರು. 

ADVERTISEMENT

‘ಈ ‘ಲ್ಯಾಂಡ್‌ಲಾರ್ಡ್‌’ ಕೊನೆಯವರೆಗೂ ನೆನಪಿನಲ್ಲಿ ಉಳಿಯುವ ಸಿನಿಮಾ ಆಗಲಿದೆ. ಮೈಲಿಗಲ್ಲು ಸ್ಥಾಪಿಸಲಿದೆ. ಪ್ರತಿಯೊಬ್ಬನಿಗೂ ಬದುಕಲು ಅರ್ಹತೆ ಇದೆ, ಸಮಾನತೆ ಬೇಕು ಎನ್ನುವುದು ಮನಸ್ಸಿನಲ್ಲಿದ್ದರೆ ಅವರು ಖಂಡಿತಾ ‘ಲ್ಯಾಂಡ್‌ಲಾರ್ಡ್‌’ ನೋಡಬೇಕು. ಕನ್ನಡ ಚಿತ್ರರಂಗದ ಪ್ರಚಂಡ ಕಲಾವಿದರಲ್ಲಿ ಉಮಾಶ್ರೀ ಅವರೂ ಒಬ್ಬರು. ಅವರೂ ಈ ಸಿನಿಮಾದ ಭಾಗವಾಗಿದ್ದಾರೆ. ಅವರ ಜೊತೆ ತೆರೆಹಂಚಿಕೊಂಡಾಗ ನನ್ನ ತಾಯಿಯ ಜೊತೆಗೇ ನಟಿಸುತ್ತಿದ್ದೇನೆ ಎನ್ನುವ ಭಾವ ಮೂಡಿತ್ತು’ ಎಂದರು ವಿಜಯ್‌. 

‘ಈ ಸಿನಿಮಾದಲ್ಲಿ ಸುಮಾರು 60 ಸಿನಿಮಾ ಹಾಗೂ ರಂಗಭೂಮಿ ಕಲಾವಿದರು ನಟಿಸಿದ್ದಾರೆ. ಎಲ್ಲಾ ಪಾತ್ರಗಳೂ ಒಂದೆಡೆ ಬಂದು ಸೇರುತ್ತವೆ. ಇದುವೇ ಚಿತ್ರದ ವಿಶೇಷ. ನನ್ನ ಸಿನಿಪಯಣದಲ್ಲಿ ಇಷ್ಟು ಬಜೆಟ್‌ನ ಸಿನಿಮಾವನ್ನು ಮಾಡಿರಲಿಲ್ಲ. ಇದೊಂದು ಬಿಗ್‌ಕ್ಯಾನ್ವಾಸ್‌ ಚಿತ್ರ. ಅನುಭವಪಟ್ಟ, ಕಣ್ಣಾರೆ ಕಂಡ ವಿಷಯಗಳನ್ನು ನಾನು ಸಿನಿಮಾ ಕಥೆಯಲ್ಲಿ ಅಳವಡಿಸುತ್ತೇನೆ. ಈ ಸಿನಿಮಾ ಮಾಡಲು ಶಿವರಾಮ ಕಾರಂತರ ‘ಚೋಮನ ದುಡಿ’ ಕೃತಿ ಸ್ಫೂರ್ತಿ’ ಎನ್ನುತ್ತಾರೆ ಜಡೇಶ್‌ ಕೆ.ಹಂಪಿ. 

‘ಇದೊಂದು 80ರ ಕಾಲಘಟ್ಟದಲ್ಲಿ ನಡೆಯುವ ಈ ನೆಲದ ಕಥೆ. 45 ವರ್ಷಗಳ ಹಿಂದಿನದ್ದನ್ನು ತೆರೆಯ ಮೇಲೆ ತರುವುದು ಸುಲಭವಾಗಿರಲಿಲ್ಲ. ರಚಿತಾರಾಮ್, ರಿತನ್ಯಾ, ಶಿಶಿರ್ ಬೈಕಾಡಿ,‌ ರಾಕೇಶ್ ಅಡಿಗ, ಅಚ್ಯುತ್ ಕುಮಾರ್, ಮಿತ್ರ, ಅಭಿಷೇಕ್ ದಾಸ್ ಹೀಗೆ ಕಲಾವಿದರ ದಂಡೇ ಈ ಸಿನಿಮಾದಲ್ಲಿದೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದಲ್ಲಿ ಹಾಡುಗಳು ಚೆನ್ನಾಗಿ ಬಂದಿವೆ. ಯೋಗರಾಜ್ ಭಟ್ ಅವರು ಬರೆದು ದುನಿಯಾ ವಿಜಯ್ ಹಾಗೂ ರಚಿತರಾಮ್ ಅವರು ಅಭಿನಯಿಸಿರುವ ಹಾಡೊಂದು ಸದ್ಯದಲ್ಲೇ ಬಿಡುಗಡೆಯಾಗಲಿದೆ’ ಎಂದರು ಜಡೇಶ್‌. 

ಈ ಸಿನಿಮಾದಲ್ಲಿ ನನ್ನ ವೃತ್ತಿ ಜೀವನದಲ್ಲೇ ಇಲ್ಲಿಯವರೆಗೂ ಮಾಡದಂಥ ಪಾತ್ರ ಮಾಡಿದ್ದೇನೆ. ಇದರ ಕಥೆ ಕೇಳಿ ಮೈಜುಂ ಎಂದಿತ್ತು. ವಿಜಯ್‌ ಅವರ ಜೊತೆ ಎರಡನೇ ಸಿನಿಮಾವಿದು. ಮೊದಲ ಸಿನಿಮಾ ಗ್ಲ್ಯಾಮರಸ್‌ ಆಗಿ ಕಾಣಿಸಿಕೊಂಡಿದ್ದ ನಾನು ಇಲ್ಲಿ 18 ವರ್ಷದ ಮಗಳಿರುವ ತಾಯಿಯಾಗಿ ನಟಿಸಿದ್ದೇನೆ.
ರಚಿತಾ ರಾಮ್‌, ನಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.