ADVERTISEMENT

Kollywood: ತಮಿಳು ಚಿತ್ರದಲ್ಲಿ ದುನಿಯಾ ವಿಜಯ್‌

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 23:30 IST
Last Updated 12 ಅಕ್ಟೋಬರ್ 2025, 23:30 IST
ದುನಿಯಾ ವಿಜಯ್‌
ದುನಿಯಾ ವಿಜಯ್‌   

‘ಭೀಮ’ ಚಿತ್ರದ ಗೆಲುವಿನ ಬಳಿಕ ನಟ ದುನಿಯಾ ವಿಜಯ್‌ ಮಾರುಕಟ್ಟೆ ವ್ಯಾಪ್ತಿ ಇನ್ನಷ್ಟು ವಿಸ್ತಾರಗೊಂಡಿದೆ. ಇದೀಗ ಅವರು ನಯನತಾರ ನಟನೆಯ ‘ಮೂಕುತಿ ಅಮ್ಮನ್‌ 2’ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುಂದರ್‌ ಸಿ. ನಿರ್ದೇಶನದ ಚಿತ್ರದ ಚಿತ್ರೀಕರಣ ಇತ್ತೀಚೆಗಷ್ಟೇ ಮುಕ್ತಾಯಗೊಂಡಿದ್ದು ಇದರ ವಿಡಿಯೊವನ್ನು ವಿಜಯ್‌ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

‘ನನ್ನನ್ನು ತಮಿಳು ಚಿತ್ರರಂಗಕ್ಕೆ ಪರಿಚಯಿಸುತ್ತಿರುವ ಸುಂದರ್‌ ಸಿ. ಅವರಿಗೆ ಧನ್ಯವಾದಗಳು’ ಎಂದು ವಿಜಯ್‌ ಕೆಲ ದಿನಗಳ ಹಿಂದೆ ಹೇಳಿಕೊಂಡಿದ್ದರು. ನಯನತಾರ ಈ ಚಿತ್ರದಲ್ಲಿ ದೇವಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ಕಳೆದ ಮಾರ್ಚ್‌ನಲ್ಲಿ ಚಿತ್ರ ಸೆಟ್ಟೇರಿತ್ತು. ವಿಜಯದಶಮಿಯಂದು ಚಿತ್ರತಂಡ ಚಿತ್ರದ ಮೊದಲ ಪೋಸ್ಟರ್‌ ಬಿಡುಗಡೆ ಮಾಡಿ, ಚಿತ್ರದಲ್ಲಿ ದುನಿಯಾ ವಿಜಯ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದನ್ನು ಅಧಿಕೃತಗೊಳಿಸಿತ್ತು. ಆದರೆ ಅವರ ಪಾತ್ರ ಏನು ಎಂಬ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಬಹಿರಂಗಪಡಿಸಿಲ್ಲ. ಯೋಗಿ ಬಾಬು, ಅಭಿನಯ ಮುಂತಾದವರು ಚಿತ್ರದಲ್ಲಿದ್ದಾರೆ.

ADVERTISEMENT

‘ಮೂಕುತಿ ಅಮ್ಮನ್‌’ ಚಿತ್ರದಲ್ಲಿಯೂ ನಯನತಾರ ದೇವಿಯಾಗಿ ಕಾಣಿಸಿಕೊಂಡಿದ್ದರು. ಆರ್‌ಜೆ ಬಾಲಾಜಿ ನಿರ್ದೇಶನದ ಜೊತೆಗೆ ಪ್ರಮುಖ ಪಾತ್ರದಲ್ಲಿ ನಟಿಸಿರುವ ಚಿತ್ರಕ್ಕೆ ಈಶ್ವರಿ ಕೆ.ಗಣೇಶ್‌ ಬಂಡವಾಳ ಹೂಡಿದ್ದರು.

ಪುರಿ ಜಗನ್ನಾಥ್‌ ನಿರ್ದೇಶಿಸಿ ವಿಜಯ್‌ ಸೇತುಪತಿ ನಟಿಸುತ್ತಿರುವ ಚಿತ್ರದಲ್ಲಿಯೂ ದುನಿಯಾ ವಿಜಯ್‌ ನಟಿಸುತ್ತಿದ್ದಾರೆ. ಜಡೇಶ್‌ ಹಂಪಿ ನಿರ್ದೇಶನದಲ್ಲಿ ದುನಿಯಾ ವಿಜಯ್‌ ನಟನೆಯ ‘ಲ್ಯಾಂಡ್‌ ಲಾರ್ಡ್‌’ ಚಿತ್ರ ಬಿಡುಗಡೆಗೆ ಸಿದ್ಧವಿದ್ದು, ಈ ತಿಂಗಳ ಅಂತ್ಯದಲ್ಲಿ ತೆರೆಗೆ ಬರುವ ನಿರೀಕ್ಷೆಯಿದೆ. ವಿಜಯ್‌ ನಟಿಸಿ, ನಿರ್ದೇಶಿಸುತ್ತಿರುವ ‘ಸಿಟಿ ಲೈಟ್ಸ್‌’ ಚಿತ್ರದ ಚಿತ್ರೀಕರಣ ಮುಕ್ತಾಯ ಹಂತದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.