ADVERTISEMENT

ಈ ವಾರ | ಸೀತಾ ಪಯಣ ಸೇರಿ ತೆರೆಯಲ್ಲಿ ಎಂಟು ಸಿನಿಮಾಗಳು

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 1:05 IST
Last Updated 13 ಫೆಬ್ರುವರಿ 2026, 1:05 IST
ರಾಕ್ಷಸಿ
ರಾಕ್ಷಸಿ   

ಸೀತಾ ಪಯಣ

ಅರ್ಜುನ್‌ ಸರ್ಜಾ ನಿರ್ದೇಶಿಸಿ, ಪ್ರಮುಖ ಪಾತ್ರವೊಂದರಲ್ಲಿ ನಟಿಸಿರುವ ಚಿತ್ರವಿದು. ತಮ್ಮ ಪುತ್ರಿ ಐಶ್ವರ್ಯಾಗಾಗಿ ಸರ್ಜಾ ಈ ಚಿತ್ರವನ್ನು ನಿರ್ದೇಶಿಸಿ, ನಿರ್ಮಿಸಿದ್ದಾರೆ. ಧ್ರುವ ಸರ್ಜಾ ಕೂಡ ಈ ಚಿತ್ರದ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

ಉಪೇಂದ್ರ ಅಣ್ಣನ ಮಗ ನಿರಂಜನ್‌ಗೆ ಐಶ್ವರ್ಯಾ ಜೋಡಿಯಾಗಿದ್ದಾರೆ. ‘ಶೀರ್ಷಿಕೆಯೇ ಸೂಚಿಸುವಂತೆ ಇದೊಂದು ಪಯಣದ ಕುರಿತಾದ ಚಿತ್ರವಾಗಿದ್ದು, ಅಭಿ ಮತ್ತು ಸೀತಾ ಎಂಬ ಹದಿಹರೆಯದವರ ಭಾವನಾತ್ಮಕ ಪಯಣವಿದೆ’ ಎಂದಿದೆ ಚಿತ್ರತಂಡ.

ADVERTISEMENT

ಪ್ರಕಾಶ್‍ ರಾಜ್‌, ಸತ್ಯರಾಜ್‍ ಮುಂತಾದವರು ನಟಿಸಿದ್ದಾರೆ. ಅನೂಪ್‌ ರುಬೆನ್ಸ್‌ ಸಂಗೀತ, ಬಾಲಮುರುಗನ್‌ ಛಾಯಾಚಿತ್ರಗ್ರಹಣವಿದೆ. ‘ದೃಶ್ಯಂ’ ಸಿನಿಮಾ ಖ್ಯಾತಿಯ ಸಂಕಲನಕಾರ ಆಯೂಬ್‌ ಖಾನ್‌ ಈ ಚಿತ್ರದ ಸಂಕಲನ ಮಾಡಿದ್ದಾರೆ. ಕನ್ನಡ, ತೆಲುಗು ಸೇರಿದಂತೆ ಐದು ಭಾಷೆಗಳಲ್ಲಿ ಚಿತ್ರ ತೆರೆ ಕಾಣಲಿದೆ. 

ಮಗ್ಗಿಪುಸ್ತಕ

ಹರಿವರಾಸನಂ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಚಿತ್ರ. ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ ಖ್ಯಾತಿಯ ರಂಜನ್ ಕಾಸರಗೋಡು, ರಾನ್ವಿ ಶೇಖರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಹಾಡೊಂದಕ್ಕೆ ಜನಪ್ರಿಯ ಗಾಯಕ ಎಂ.ಎಂ.ಕೀರವಾಣಿ ಧ್ವನಿಯಾಗಿದ್ದಾರೆ.

‘ಇದು ಮಕ್ಕಳ ಚಿತ್ರವಲ್ಲ. ಬದುಕಿನ ಲೆಕ್ಕಾಚಾರ, ನಮ್ಮ ಜೀವನವೇ ಒಂದು ಮಗ್ಗಿಪುಸ್ತಕ ಇದ್ದಂತೆ. ಇದರಲ್ಲಿ ಒಳ್ಳೆಯದನ್ನು ಕೂಡಬೇಕು, ಕೆಟ್ಟದ್ದನ್ನು ಕಳೆಯಬೇಕು, ಜ್ಞಾನವನ್ನು ಗುಣಿಸಬೇಕು, ಅಜ್ಞಾನವನ್ನು ಭಾಗಿಸಬೇಕು ಎಂಬ ಸಂದೇಶ ನೀಡಿದ್ದೇವೆ’ ಎಂದಿದೆ ಚಿತ್ರತಂಡ.

ಚಿನ್ನಸ್ವಾಮಿ ಫಿಲ್ಮ್ಸ್‌ ಬ್ಯಾನರ್ ಅಡಿಯಲ್ಲಿ ಸಿ.ಯತಿರಾಜ್ ಬಂಡವಾಳ ಹೂಡಿದ್ದಾರೆ. ರಕ್ಷಾ ಗೌಡ, ಕೃಷ್ಣ ಮಹೇಶ್, ಶೋಭರಾಜ್, ಮೇಘನಾ, ಮೈಸೂರು ರಮಾನಂದ್, ಮೇಘಶ್ರೀ, ಮಿಮಿಕ್ರಿ ಗೋಪಿ, ಚಂದ್ರಪ್ರಭ, ರಘು ರಾಮನಕೊಪ್ಪ ಇನ್ನಿತರರು ನಟಿಸಿದ್ದಾರೆ.

ಬೆಂಗಳೂರು, ಮೈಸೂರು, ಮಂಗಳೂರು, ನಂಜನಗೂಡು, ಶ್ರೀರಂಗಪಟ್ಟಣ, ಎಚ್.ಡಿ.ಕೋಟೆ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿತ್ರೀಕರಣಗೊಂಡಿದೆ. ಎಂ.ಪಿ. ಫಿಲಂಸ್ ಮೂಲಕ ಕೆ. ಮುನೀಂದ್ರ ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಯಶಸ್ ನಾಚಪ್ಪ ಸಂಗೀತ, ನಂದಕುಮಾರ್ ಛಾಯಾಚಿತ್ರಗ್ರಹಣ, ಶಿವಕುಮಾರ್ ಸಂಕಲನವಿದೆ.

ಓ ಸುಂದರ ರಾಕ್ಷಸಿ 

ಶೇರಾಜ್ ಮೆಹದಿ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ ಚಿತ್ರವಿದು. ಸುರಿಂದರ್ ಕೌರ್‌ ನಿರ್ಮಾಣವಿದೆ.

‘ಇಂದಿನ ಯುವತಿಯರು ಹೇಗಿರಬೇಕು ಎಂಬ ಪರಿಕಲ್ಪನೆಯ ಮೇಲೆ ಈ ಚಿತ್ರವನ್ನು ರೂಪಿಸಲಾಗಿದೆ. ಇದೊಂದು ಮಹಿಳಾ ಪ್ರಧಾನ ಚಿತ್ರ’ ಎಂದಿದ್ದಾರೆ ನಿರ್ದೇಶಕ.

ಕೃತಿ ವರ್ಮಾ, ವಿಹಾನ್ಸಿ ಹೆಗಡೆ, ಸುಮನ್, ನೇಹಾ ದೇಶಪಾಂಡೆ ಮುಂತಾದವರು ಚಿತ್ರದಲ್ಲಿದ್ದಾರೆ. ನಿರ್ದೇಶಕರೇ ಚಿತ್ರಕ್ಕೆ ಸಂಗೀತವನ್ನೂ ನೀಡಿದ್ದಾರೆ. 

ಮರಳಿ ಮನಸಾಗಿದೆ

ಅರ್ಜುನ್ ವೇದಾಂತ್‌ಗೆ ನಿರೀಕ್ಷಾ ಶೆಟ್ಟಿ ಜೋಡಿಯಾಗಿದ್ದಾರೆ. ನಾಗರಾಜ್ ಶಂಕರ್ ನಿರ್ದೇಶನದ ಚಿತ್ರ ಪ್ರೇಮಕಥೆಯನ್ನು ಹೊಂದಿದೆ.

ಬೆನಕ ಟಾಕೀಸ್ ನಿರ್ಮಾಣದ ಈ ಚಿತ್ರ ಸುರತ್ಕಲ್, ಉಡುಪಿ, ಬೈಂದೂರು ಸೇರಿದಂತೆ ರಾಜ್ಯದ ಕರಾವಳಿಯ ವಿವಿಧೆಡೆ ಚಿತ್ರೀಕರಣಗೊಂಡಿದೆ. ಸ್ಮೃತಿ ವೆಂಕಟೇಶ್ ಮತ್ತೋರ್ವ ನಾಯಕಿ. ಟಿ.ಎಸ್.ನಾಗಾಭರಣ, ಮಾನಸಿ ಸುಧೀರ್, ಭೋಜರಾಜ್ ವಾಮಂಜೂರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ವಿನು ಮನಸು ಸಂಗೀತ, ಹಾಲೇಶ್ ಛಾಯಾಚಿತ್ರಗ್ರಹಣವಿದೆ.

ಸ್ಟಾರ್

ಬಹುತೇಕ ಹೊಸಬರಿಂದಲೇ ಕೂಡಿರುವ ಚಿತ್ರಕ್ಕೆ ವಿಜಯ ಸೂರ್ಯ ಕಥೆ ಬರೆದು, ನಿರ್ದೇಶನ ಮಾಡಿದ್ದಾರೆ.

‘ಎರಡು ಗ್ಯಾಂಗ್‌ಗಳ ನಡುವಿನ ಹೊಡೆದಾಟದ ಕಥೆಯಿದೆ. ಇಲ್ಲಿನ ಪ್ರತಿ ಸನ್ನಿವೇಶಗಳನ್ನು ನೋಡುವಾಗ ನಮ್ಮ ಊರುಗಳಲ್ಲಿ ನಡೆದಂಥ ಘಟನೆಗಳು ನೆನಪಾಗುತ್ತವೆ. ಅಷ್ಟು ಸಹಜವಾದ ಸನ್ನಿವೇಶಗಳನ್ನು ಚಿತ್ರಕಥೆಯಲ್ಲಿ ಹೆಣೆಯಲಾಗಿದೆ’ ಎಂದಿದ್ದಾರೆ ನಿರ್ದೇಶಕ.

ಲಯನ್ ಕ್ರಿಯೇಶನ್ಸ್ ಬ್ಯಾನರ್ ಅಡಿಯಲ್ಲಿ ಶರತ್ ಪ್ರಕಾಶ್ ನಿರ್ಮಾಣ ಮಾಡುವುದರ ಜತೆಗೆ ನಾಯಕನಾಗಿ ನಟಿಸಿದ್ದಾರೆ. ‘ಭೂಮಿಗೆ ಹತ್ರ’ ಎಂಬ ಅಡಿಬರಹ ಚಿತ್ರಕ್ಕಿದೆ. ರಜತ ರಕ್ಷಾ ನಾಯಕಿ. ಹಲವು ರಂಗಭೂಮಿ ಕಲಾವಿದರು ಅಭಿನಯಿಸಿದ್ದಾರೆ. ಮೂರು ಹಾಡುಗಳಿಗೆ ವಿಕಾಸ್ ವಸಿಷ್ಠ ಸಂಗೀತ ಸಂಯೋಜಿಸಿದ್ದಾರೆ. ಎ.ಪಿ.ಎಸ್‌.ಕೆ ಛಾಯಾಚಿತ್ರಗ್ರಹಣ, ಶಶಿಧರ್‌ ಪಿ. ಸಂಕಲನವಿದೆ.

ದೈವ

ಎಂ.ಜೆ. ಜಯರಾಜ್ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ ಚಿತ್ರ. ಕಲ್ಪವೃಕ್ಷ ಕ್ರಿಯೇಷನ್ಸ್ ಬಂಡವಾಳ ಹೂಡಿದೆ.

‘ಈ ಚಿತ್ರದಲ್ಲಿ ಮಂಡ್ಯ ಜಿಲ್ಲೆಯ ಜೋಗಿಗಳ ಬಗ್ಗೆ ಹೇಳಿದ್ದೇವೆ. ಇದೊಂದು ಹಳ್ಳಿ ಸೊಗಡಿನ ಸಿನಿಮಾ. ಶಿರಸಿ ಬಳಿಯ ಹಳ್ಳಿಯೊಂದರಲ್ಲಿ ಚಿತ್ರದ ಹೆಚ್ಚಿನ ಭಾಗದ ಚಿತ್ರೀಕರಣ ಮಾಡಿದ್ದೇವೆ’ ಎಂದಿದೆ ಚಿತ್ರತಂಡ.

ನೀತು ರಾಯ್, ಸುರಭಿ ರೆಡ್ಡಿ, ಅರುಣ್ ಬಚ್ಚನ್, ಮಂಜುರಾಜ್ ಸೂರ್ಯ ಮುಂತಾದವರು ಚಿತ್ರದಲ್ಲಿದ್ದಾರೆ. ವಿಜೇತ್ ಮಂಜಯ್ಯ ಸಂಗೀತ, ಸಿದ್ಧಾರ್ಥ್ ಛಾಯಾಚಿತ್ರಗ್ರಹಣವಿದೆ.

ರಾಮ ಆ್ಯಂಡ್‌ ರಾಮು


ಚಂದ್ರು ಓಬಯ್ಯ ನಿರ್ದೇಶಿಸಿ, ನಟಿಸಿರುವ ಚಿತ್ರ ಪೌರ ಕಾರ್ಮಿಕರು ದಿನ ನಿತ್ಯ ಎದುರಿಸುತ್ತಿರುವ ಸಮಸ್ಯೆಗಳು, ಈ ವಿಷಯದಲ್ಲಿ ನಾಗರಿಕರ ಪಾತ್ರದ ಕುರಿತಾದ ಕಥೆಯನ್ನು ಹೊಂದಿದೆ.

ಸೌಮ್ಯ ಚಿತ್ರದ ನಾಯಕಿ. ನಾಗೇಂದ್ರ ಅರಸ್, ಮೂಗು ಸುರೇಶ್‌ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ. 

ಇವುಗಳ ಜೊತೆಗೆ ಕಾಟ್‌ನ್‌ ಪೇಟೆ ಗೇಮ್‌ ಸಿನಿಮಾ ಕೂಡ ಬಿಡುಗಡೆಯಾಗುತ್ತಿದೆ.

ನಿರಂಜನ್‌ ಐಶ್ವರ್ಯಾ ಸರ್ಜಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.