ADVERTISEMENT

ಚಿತ್ರ ಪ್ರದರ್ಶನ: ಸಮಸ್ಯೆ ಅಧ್ಯಯನಕ್ಕೆ ತಜ್ಞರ ಸಮಿತಿ

ನಿರ್ಮಾಪಕರ ಸಂಘದ ಸಭೆಯಲ್ಲಿ ನಿರ್ಣಯ

​ಪ್ರಜಾವಾಣಿ ವಾರ್ತೆ
Published 12 ಜನವರಿ 2021, 13:12 IST
Last Updated 12 ಜನವರಿ 2021, 13:12 IST
ಬೆಂಗಳೂರಿನಲ್ಲಿ ಮಂಗಳವಾರ ನಿರ್ಮಾಪಕರ ಸಂಘದ ಸಭೆ ನಡೆಯಿತು
ಬೆಂಗಳೂರಿನಲ್ಲಿ ಮಂಗಳವಾರ ನಿರ್ಮಾಪಕರ ಸಂಘದ ಸಭೆ ನಡೆಯಿತು   

ಬೆಂಗಳೂರು: ಚಿತ್ರಮಂದಿರಗಳಲ್ಲಿ ರಾಜ್ಯದಾದ್ಯಂತ ಮತ್ತೆ ಪ್ರದರ್ಶನ ಆರಂಭಿಸುವ ಸಂಬಂಧಿಸಿ ಸಮಸ್ಯೆಗಳ ಅಧ್ಯಯನಕ್ಕೆ ಮೂವರು ಸದಸ್ಯರ ಸಮಿತಿ ರಚಿಸಲಾಗಿದೆ.

ನಿರ್ಮಾಪಕರ ಸಂಘದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಚಿತ್ರ ಪ್ರದರ್ಶಿಸುವ ಸಂಬಂಧಿಸಿ ಚರ್ಚೆ ನಡೆಯಿತು.

‘ರಾಜ್ಯ ಸರ್ಕಾರ ಶೇ 50ರಷ್ಟು ಆಸನ ಭರ್ತಿ ಮಾಡಿ ಪ್ರದರ್ಶನ ನಡೆಸಲು ಅವಕಾಶ ಕೊಟ್ಟಿದೆ. ಕೆಲವು ಚಿತ್ರಮಂದಿರಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ತೆರೆದುಕೊಂಡಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಚಿತ್ರ ಪ್ರದರ್ಶನ ಸಂಬಂಧಿಸಿ ಸಮಸ್ಯೆ ಮುಂದುವರಿದಿದೆ. ಇದಕ್ಕೆ ರೂಪಿಸಬೇಕಾದ ಪರಿಹಾರೋಪಾಯಗಳ ಕುರಿತು ಈ ತಜ್ಞರ ಸಮಿತಿ ವರದಿ ಸಲ್ಲಿಸಲಿದೆ. ಅದರ ಶಿಫಾರಸ್ಸಿನಂತೆ ಚಿತ್ರ ಪ್ರದರ್ಶನ ನಡೆಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ನಿರ್ಮಾಪಕರ ಸಂಘದ ಅಧ್ಯಕ್ಷ ಡಿ.ಕೆ.ರಾಮಕೃಷ್ಣ ತಿಳಿಸಿದರು.

ADVERTISEMENT

ಸಮಿತಿ ಸದಸ್ಯರು: ಕೆ.ಸಿ.ಎನ್‌.ಕುಮಾರ್‌, ಜಯಣ್ಣ, ಜ್ಯಾಕ್‌ ಮಂಜು ಅವರ ಸಮಿತಿಯು ಪ್ರದರ್ಶನ ಸಂಬಂಧಿಸಿ ಸಮಸ್ಯೆಗಳನ್ನು ಅಧ್ಯಯನ ನಡೆಸಲಿದೆ. ಪ್ರದರ್ಶಕರ ಜತೆಗೂ ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿದೆ ಎಂದು ರಾಮಕೃಷ್ಣ ಹೇಳಿದರು.

ಪರಿಹಾರ ಕ್ರಮಗಳೇನು?
ಉತ್ತರ ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಳದ ಅಧ್ಯಕ್ಷ ಓದುಗೌಡರ್‌ ಅವರ ಜತೆ ಚರ್ಚೆ ನಡೆಸುವುದು. ಅಲ್ಲಿನ ಸಮಸ್ಯೆಗಳ ಬಗ್ಗೆ ಪರಿಶೀಲಿಸಿ ಪರಿಹಾರ ಕ್ರಮದ ಬಗ್ಗೆ ಚಿಂತನೆ. ಪ್ರದರ್ಶನ ಮಾದರಿ ಬದಲಾವಣೆ ಬಗ್ಗೆ ಚಿಂತನೆ. ಬಾಡಿಗೆ ಆಧಾರದಲ್ಲಿ ಪ್ರದರ್ಶನ ಅಥವಾ ಲಾಭಾಂಶದ ಶೇಕಡಾವಾರು ಹಂಚಿಕೆ ಬಗ್ಗೆ ಮಾತುಕತೆ ಮೊದಲಾದ ಅಂಶಗಳ ಬಗ್ಗೆ ಚರ್ಚೆ ನಡೆಯಿತು.

‘ಚಿತ್ರ ನಿರ್ಮಿಸಿ ದೀರ್ಘ ಕಾಲ ಇಟ್ಟುಕೊಂಡು ಕೂರಲಾಗದು. ಒಟಿಟಿ ವೇದಿಕೆಗಳೂ ಅಷ್ಟೊಂದು ಸರಿಯಾದ ಪ್ರದರ್ಶನ ಮಾರ್ಗ ಅಲ್ಲ. ಹಾಗಾಗಿ ಚಿತ್ರಗಳು ಚಿತ್ರಮಂದಿರದಲ್ಲೇ ಪ್ರದರ್ಶನ ಆಗಬೇಕು. ಮಾರ್ಚ್‌ ವೇಳೆಗೆ ನಾವು ಚಿತ್ರಗಳನ್ನು ಬಿಡುಗಡೆ ಮಾಡಲೇಬೇಕಿದೆ. ಅಷ್ಟರ ಒಳಗೆ ಈ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಬೇಕು’ ಎಂದು ರಾಮಕೃಷ್ಣ ಹೇಳಿದರು.

ಉಪಾಧ್ಯಕ್ಷ ಎಂ.ಜಿ. ರಾಮಮೂರ್ತಿ, ಸಂಘದ ಕಾರ್ಯದರ್ಶಿ ಕೆ. ಮಂಜು, ಜಂಟಿ ಕಾರ್ಯದರ್ಶಿ ರಮೇಶ್‌ ಯಾದವ್‌, ಚಲನಚಿತ್ರ ವಾಣಿಜ್ಯ ಮಂಡಳಿಯ ನಿರ್ಮಾಪಕರ ವಿಭಾಗದ ಕಾರ್ಯದರ್ಶಿ ಎನ್‌.ಎಂ. ಸುರೇಶ್‌, ವಿತರಕರ ವಲಯದ ಕಾರ್ಯದರ್ಶಿ ಆರ್‌.ಗಣೇಶ್ ಸಭೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.