ADVERTISEMENT

ಚಿತ್ರ ನಿರ್ದೇಶಕ ಬೂದಾಳ್‌ ಕೃಷ್ಣಮೂರ್ತಿ ನಿಧನ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2020, 8:48 IST
Last Updated 19 ಡಿಸೆಂಬರ್ 2020, 8:48 IST
ಚಿತ್ರನಿರ್ದೇಶಕ ಬೂದಾಳ್ ಕೃಷ್ಣಮೂರ್ತಿ
ಚಿತ್ರನಿರ್ದೇಶಕ ಬೂದಾಳ್ ಕೃಷ್ಣಮೂರ್ತಿ   

ಬೆಂಗಳೂರು: ಚಿತ್ರನಿರ್ದೇಶಕ ಬೂದಾಳ್ ಕೃಷ್ಣಮೂರ್ತಿ (71) ಶನಿವಾರ ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾದರು. ಕೆಲಕಾಲದಿಂದ ಅವರು ಅನಾರೋಗ್ಯಕ್ಕೊಳಗಾಗಿದ್ದರು.

ಹುಳಿಯಾರು ಸಮೀಪದ ಬೂದಾಳು ಅವರ ಹುಟ್ಟೂರು. ಪದವಿ ಪೂರ್ಣಗೊಳಿಸಿ ಬೆಂಗಳೂರಿಗೆ ಬಂದ ಕೃಷ್ಣಮೂರ್ತಿ ಅವರು ಸಿದ್ದಲಿಂಗಯ್ಯ ನಿರ್ದೇಶನದ ‘ದೂರದ ಬೆಟ್ಟ’ ಚಿತ್ರದಲ್ಲಿ ಅಪ್ರೆಂಟಿಸ್ ಆಗಿ ಸಿನಿಮಾರಂಗ ಪ್ರವೇಶಿಸಿದರು. ಮುಂದೆ ಸಿದ್ದಲಿಂಗಯ್ಯ ಅವರ ‘ಬೂತಯ್ಯನ ಮಗ ಅಯ್ಯು’, ‘ಹೇಮಾವತಿ’ ಸೇರಿದಂತೆ ಹಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು.

‘ಎರಡು ದಂಡೆಯ ಮೇಲೆ’ ಅವರ ನಿರ್ದೇಶನದ ಮೊದಲ ಸಿನಿಮಾ. ‘ಒಲವಿನ ಕಾಣಿಕೆ’, ‘ಸೀತಾ ಆಂಜನೇಯ’, ‘ಶುಭಲಗ್ನ’, ‘ಲಂಚಸಾಮ್ರಾಜ್ಯ’ ಅವರ ನಿರ್ದೇಶನದ ಸಿನಿಮಾಗಳು. ಅವರ ನಿರ್ದೇಶನದ ಕೊನೆಯ ಸಿನಿಮಾ ‘ಇದೊಳ್ಳೆ ಮಹಾಭಾರತ’ ತೆರೆ ಕಾಣಬೇಕಿದೆ.ತಮ್ಮ ನಿರ್ದೇಶನದ ಸಿನಿಮಾಗಳಿಗೆ ಅವರು ಹಾಡುಗಳನ್ನು ಬರೆದಿದ್ದರು.
ನಿರ್ದೇಶನದ ಜೊತೆಗೆ ನಟನೆಯಲ್ಲೂ ಸಕ್ರಿಯರಾಗಿದ್ದ ಕೃಷ್ಣಮೂರ್ತಿ ಸುಮಾರು 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ‘ಪ್ರೊಫೆಸರ್’, ‘ಶ್ರೀಗಂಧ’, ‘ಅರಿಶಿನ ಕುಂಕುಮ’, ‘ಬಲ್ ನನ್ಮಗ’, ‘ಪ್ರಜಾಶಕ್ತಿ’, ‘ನಿರ್ಣಯ’, ‘ಆರ್ಯಭಟ’ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದಲ್ಲಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಓದು ಅವರ ನೆಚ್ಚಿನ ಹವ್ಯಾಸವಾಗಿತ್ತು. ಬರವಣಿಗೆ ಬಗ್ಗೆ ಅಪಾರ ಹಿಡಿತ ಹೊಂದಿದ್ದರು ಎಂದು ಅವರ ಸಮಕಾಲೀನ ತಂತ್ರಜ್ಞರು ಕೃಷ್ಣಮೂರ್ತಿಯವರನ್ನು ಸ್ಮರಿಸುತ್ತಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.